ನವೆಂಬರ್ 07 ರಂದು “ಆಚಾರ್ಯತ್ರಯರ ಜಯಂತ್ಯುತ್ಸವ”- ಅಸಗೋಡು ಜಯಸಿಂಹ
ಬೆಂಗಳೂರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ “ಆಚಾರ್ಯತ್ರಯರ ಜಯಂತ್ಯುತ್ಸವ” ಕಾರ್ಯಕ್ರಮವನ್ನು ನವೆಂಬರ್ 07 ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ತಿಳಿಸಿದರು.
ಇಂದು ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, ಪ್ರತಿ ವರ್ಷ ಶ್ರೀ ಶಂಕರಾಚಾರ್ಯ, ಶ್ರೀ ರಾಮಾನುಜಚಾರ್ಯ ಮತ್ತು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು "ಆಚಾರ್ಯತ್ರಯರ ಜಯಂತಿ” ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ವಹಿಸುವರು. ಚಾಣಕ್ಯ ತರಬೇತಿ ಯೋಜನೆಗೆ ಶಾಸಕರು ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ವಿಧಾನಪರಿಷತ್ ಮಾಜಿ ಶಾಸಕರಾದ ಯು.ಬಿ.ವೆಂಕಟೇಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಆದಿಗುರು ಶ್ರೀ ಶಂಕರಾಚಾರ್ಯರ ಕುರಿತು ಸಾಹಿತಿಗಳಾದ ಡಾ. ಬೆಳವಾಡಿ ಮಂಜುನಾಥರವರು, ಭಕ್ತಿ ಮಾರ್ಗದ ಪ್ರವರ್ತಕರಾದ ಶ್ರೀ ರಾಮಾನುಜಾಚಾರ್ಯರ ಕುರಿತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮುಖ್ಯಸ್ಥರಾದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಹಾಗೂ ಸಂಗೀತ ಮತ್ತು ಭಕ್ತಿಮಾರ್ಗದ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರ ಕುರಿತು ನಿವೃತ್ತ ಪಾಂಶುಪಾಲರು ಹಾಗೂ ಪ್ರಸಿದ್ಧ ವಿದ್ವಾಂಸರಾದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ರವರು ಉಪನ್ಯಾಸ ನೀಡಲಿದ್ದಾರೆ. ಅಂದು ಬೆಳಿಗ್ಗೆ 9.30 ರಿಂದ 10.30ರ ವರೆಗೆ ವಿದುಷಿ ಮೇಘ ಶಿವಕುಮಾರ್ ಅವರಿಂದ “ದಾಸವಾಣಿ ಗಾಯನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
“ಆಚಾರ್ಯತ್ರಯರ ಜಯಂತಿ' ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬ್ರಾಹ್ಮಣ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.
ನ್ಯಾಯಾಂಗ ಕ್ಷೇತ್ರದಿಂದ ಬಿ.ವಿ. ಆಚಾರ್ಯ, ಆಯುರ್ವೇದ ಕ್ಷೇತ್ರದಿಂದ ಡಾ. ಎನ್. ಅನಂತರಾಮನ್, ವೈದ್ಯಕೀಯ ಕ್ಷೇತ್ರದಿಂದ ಡಾ. ಶ್ರೀನಾಥ, ವೇದ ಸಾಹಿತ್ಯ ಕ್ಷೇತ್ರದಿಂದ ಆರ್.ವಿ. ಜಾಗೀರ್ ದಾರ್, ವಾಯುಯಾನ ಉದ್ಯಮ ಕ್ಷೇತ್ರದಿಂದ ಕ್ಯಾಪ್ಟನ್ ಗೋಪಿನಾಥ್, ಸಂಗೀತ ಕ್ಷೇತ್ರದಿಂದ ವಿದ್ಯಾನ್ ಬಿ.ಕೆ. ಅನಂತರಾವ್, ಪತ್ರಿಕೋದ್ಯಮ ಕ್ಷೇತ್ರದಿಂದ ರಘುತ್ತೋಮ್ ಕೊಪ್ಪರ್, ಗಮಕ ಕ್ಷೇತ್ರದಿಂದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ದಾಸ ಸಾಹಿತ್ಯ ಕ್ಷೇತ್ರದಿಂದ ಶ್ರೀಮತಿ ತ್ರಿವೇಣಿ ಬಾಯಿ ಎನ್ ಆಶ್ರೀತ್, ಕನ್ನಡದಲ್ಲಿ ಗಣಕ ವಿಜ್ಞಾನ ಕ್ಷೇತ್ರದಿಂದ ಜಿ.ಎನ್.ನರಸಿಂಹಮೂರ್ತಿ ನಾರಾಯಣ, ಸಹಕಾರ ಕ್ಷೇತ್ರದಿಂದ ರಾಘವ ವಿಷ್ಣು ಬಾಳೇರಿ ಮತ್ತು ಆನುವಾದ ಕ್ಷೇತ್ರದಿಂದ ಬಿ.ಎಸ್.ಜಯಪ್ರಕಾಶ್ ನಾರಾಯಣ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಯುವಕ-ಯುವತಿಯರು ನಾಗರಿಕ ಸೇವೆಗಳಾದ ಐ.ಎ.ಎಸ್., ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಆಡಳಿತ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತರಬೇತಿಗಾಗಿ ಗರಿಷ್ಠ ಒಂದು ಲಕ್ಷ ರೂ.ಗಳ ಸಹಾಯಧನ ನೀಡುವ ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ ಚಾಲನೆ ನೀಡಲಾಗುವುದು ಹಾಗೂ ಬ್ರಾಹ್ಮಣ ಸಮುದಾಯದಲ್ಲಿ ಉದ್ಯಮಶೀಲತೆ ವೃದ್ಧಿಸುವಂತೆ ಮಾಡಲು 2025-26ನೇ ಸಾಲಿನಿಂದ ನೂತನವಾಗಿ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಅಂದು ಸಾಂಕೇತಿಕವಾಗಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಪ್ರಸ್ತುತ ಸರ್ಕಾರವು ಮಂಡಳಿಯ ಎಲ್ಲ ಕಾರ್ಯಚಟುವಟಿಕೆಗಳಿಗೆ ಬೇಕಾದ ಅನುದಾನ ನೀಡುತ್ತಿದೆ. ಮಂಡಳಿಯು ನಿರಂತರವಾಗಿ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಸಮಸ್ತ ಬ್ರಾಹ್ಮಣ ಸಮುದಾಯದ ಪರವಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕೆ. ದೀಪಶ್ರೀ, ನಿರ್ದೇಶಕರಾದ ಪಿ.ಎಂ.ಮಾಲತೇಶ್ ಹಾಗೂ ಶ್ರೀನಿವಾಸಮೂರ್ತಿ, ವೆಂಕೋಬರಾವ್ ಉಪಸ್ಥಿತರಿದ್ದರು.
