ಜುಲೈ 19 ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರು: ಜುಲೈ 19ರ ಶನಿವಾರ ಸಂಜೆ 5.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜೇಂದ್ರ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯ ಮತ್ತು ಉದ್ಘಾಟನೆಯನ್ನು ಶ್ರೀ ವಿಶ್ವ ಒಕ್ಕಲಿಗರ ಮಹಾಸಂಸ್ಥನ ಮಠ ಬೆಂಗಳೂರಿನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿಶ್ಚಲಾನಂದ ಮಹಾಸದ್ವಾಮೀಜಿಯವರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಡಿ.ಡೊಮಿನಿಕ್ ಅವರು ನಡೆಸಿ ಕೊಡಲಿದ್ದು ಹಿರಿಯ ಸಾಹಿತಿಗಳಾದ ಕುಂಪನೀಸೀಮೆ ಪಿ.ಸಿ.ಅಂಥೋನಿಸ್ವಾಮಿ ಮತ್ತು ಡಾ.ಬಿ.ಎಸ್.ತಲ್ವಾಡಿಯವರು ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ದತ್ತಿದಾನಿಗಳ ಪರವಾಗಿ ರೀಟಾರೀನಿಯವರು ಉಪಸ್ಥಿತರಿರುತ್ತಾರೆ. ಫಾದರ್ ಚೌರಪ್ಪ ಸೆಲ್ವರಾಜ್ ಸಾಹಿತ್ಯಕ, ಸಾಂಸ್ಕೃತಿಕ ಬಳಗದಲ್ಲಿ ಸಚರಾ ಎಂದೇ ಪರಿಚಿತರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಸರಾ ಚರ್ಚ್ಗಳಲ್ಲಿ ಕನ್ನಡ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸವಲತ್ತುಗಳ ಕುರಿತಾಗಿ ಸುದೀರ್ಘ ಹೋರಾಟ ಮಾಡಿದರು. ಪ್ರಗತಿಪರ ಚಳುವಳಿಗೆ ಜೊತೆಗೆ ಸದಾ ಇರುತ್ತಿದ್ದ ಚಸರಾ ಸ್ವತ: ಉತ್ತಮ ಬರಹಗಾರರು, ಕ್ರೈಸ್ತ ಸಾಹಿತ್ಯ ಮತ್ತು ಸಂಗೀತಕ್ಕೆ ಘನತೆಯನ್ನು ತಂದು ಕೊಟ್ಟರು. 16 ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಜೊತೆಗೆ 200ಕ್ಕೂ ಹೆಚ್ಚು ಕ್ರೈಸ್ತ ಗೀತೆಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ನೆನಪಿನಲ್ಲಿ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಚಲನ ಬಳಗದವರು ಸ್ಥಾಪಿಸಿದ್ದು ಪ್ರತಿ ವರ್ಷ ಒಬ್ಬ ಪ್ರತಿಭಾವಂತ ಕ್ರೈಸ್ತ ಸಾಹಿತಿ ಹಾಗೂ ಒಬ್ಬರು ಕನ್ನಡಪರ ಹೋರಾಟಗಾರರಿಗೆ ಪುರಸ್ಕಾರ ನೀಡುವಂತೆ ನಿಯಮವನ್ನು ರೂಪಿಸಿದ್ದಾರೆ.
2025ನೆಯ ಸಾಲಿನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪಿ.ಸಿ.ಅಂತೋಣಿ ಸ್ವಾಮಿ ಉತ್ತರ ಕನ್ನಡ ಜಿಲ್ಲೆ ಕಮ್ಮನ ಹಳ್ಳಿಯವರು ಹತ್ತು ವರ್ಷ ನವದೆಹಲಿಯಲ್ಲಿದ್ದಾಗಲೂ ಕನ್ನಡದ ಕಂಪನ್ನು ಉಳಿಸಿ ಕೊಂಡು ಬಂದ ಅವರು ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಹೋರಾಟಗಳಲ್ಲಿಯೂ ಸಕ್ರಿಯರಾದರು. ಚರ್ಚ್ ಗಳಲ್ಲಿ ಕನ್ನಡ ಬಳಕೆಯ ಕುರಿತ ಹೋರಾಟ ಮುಂಚೂಣಿಯಲ್ಲಿದ್ದ ಅವರು ಉತ್ತಮ ಅನುವಾದಕರು, ಪತ್ರಿಕೋದ್ಯಮದಲ್ಲಿಯೂ ತಮ್ಮನ್ನು ತೊಡಿಗಿಸಿ ಕೊಂಡವರು. ಡಾ.ಬಿ.ಎಸ್.ತಲ್ವಾಡಿಯವರು ಗಡಿನಾಡು ಪ್ರದೇಶ ತಾಳವಾಡಿಯವರು. ಮೂರು ಸ್ನಾತಕೋತ್ತರ ಪದವಿಗಳ ಜೊತೆಗೆ ‘ದಕ್ಷಿಣ ಕರ್ನಾಟಕ ಕ್ರೈಸ್ತ ಜನಪದ ಸಾಹಿತ್ಯ’ ಎನ್ನುವ ವಿಷಯದ ಮೇಲೆ ಅಧ್ಯಯನ ಮಾಡಿ ಡಾಕ್ಟೊರೇಟ್ ಪಡೆದರು. ಜನಪದ ವಿದ್ವಾಂಸರಾಗಿ, ವಿಮರ್ಶಕರಾಗಿ, ಬರಹಗಾರರಾಗಿ, ಗಾಯಕರಾಗಿ ಬಹುಮುಖ ಪ್ರತಿಭೆಯನ್ನು ಮೆರೆದಿರುವ ಇವರು ‘ಸಿರಿಭುವನ ಜ್ಯೋತಿ’ಎನ್ನುವ ಯೇಸು ಕ್ರಿಸ್ತನ ಕುರಿತ ಮಹಾಕಾವ್ಯವನ್ನು ಬರೆದಿದ್ದಾರೆ. ಸಾಂಸ್ಕೃತಿಕ ಮಹತ್ವದ ಈ ಕಾರ್ಯಕ್ರಮದ ವಿವರಗಳನ್ನು ತಾವು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳು ಭಾಗವಹಿಸಲು ನೆರವಾಗುವುದರ ಜೊತೆಗೆ ಕಾರ್ಯಕ್ರಮಕ್ಕೆ ತಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಳುಹಿಸ ಕೊಡ ಬೇಕಾಗಿ ವಿನಂತಿ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
