ಸಂಡೂರಿನಲ್ಲಿ ಜೂನ್ 29ರಂದು ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸದಸ್ಯರ ಸಭೆ ಮುಂದೂಡಿಕೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 108ನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು 29 ಜೂನ್ 2025ರಂದು ಬಳ್ಳಾರಿ ಜಿಲ್ಲೆಯ ಸಂಡೂರಿನ ಕೂಡ್ಲಗಿ ರಸ್ತೆಯಲ್ಲಿನ ಆದರ್ಶ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಪೊಲೀಸ್ ಭದ್ರತೆ ಬಗ್ಗೆ ಮನವಿ ಮಾಡಿದಾಗ ಪೊಲೀಸ್ ವರಿಷ್ಠಾಧಿಕಾರಿಗಳು ಬಳ್ಳಾರಿ ಹಾಗೂ ಜಿಲ್ಲಾಧಿಕಾರಿಗಳು, ಬಳ್ಳಾರಿ ಈ ಬಗ್ಗೆ ಪರಿಶೀಲಿಸಿ ಕೆಲವೊಂದು ಷರತ್ತುಗಳನ್ನು ವಿಧಿಸಿ, ವಾರ್ಷಿಕ ಸಾಮಾನ್ಯ ಸಭೆಯನ್ನು ಸದಸ್ಯರುಗಳಿಗೆ ಯಾವುದೇ ಅನಾನುಕೂಲವಾಗದಂತೆ ಹಾಗು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಜವಾಬ್ದಾರಿಯುತವಾಗಿ ಸಭೆ ನಡೆಸಲು ತಿಳಿಸಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪ್ರತಿನಿಧಿಗಳನ್ನು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಬಳ್ಳಾರಿ ಮತ್ತು ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರೊಟ್ಟಿಗೆ ಸಭೆಯ ವಿವರಗಳನ್ನು ನೀಡಿ, ಹಿಂದಿನ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಸಂಖ್ಯೆ ಮತ್ತು ಇತರೆ ಮಾಹಿತಿಗಳನ್ನು ಅವರ ಗಮನಕ್ಕೆ ತಂದು ಈ ಸಭೆಯನ್ನು ಯಶಸ್ವಿ ಗೊಳಿಸಲು ಸಹಕಾರ ನೀಡುವಂತೆ ಕೋರಲಾಗಿ, ಅಧ್ಯಕ್ಷರ ಕೋರಿಕೆಗೆ ಉಸ್ತುವಾರಿ ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿದ್ದರು.
ಆದರೆ ಎಸ್.ಜಿ.ಸಿದ್ದರಾಮಯ್ಯ, ಜಯಪ್ರಕಾಶ ಗೌಡ, ಆರ್.ಜಿ.ಹಳ್ಳಿ ನಾಗರಾಜ್, ಜಾಣಗೆರೆ ವೆಂಕಟರಾಮಯ್ಯ ಮತ್ತು ವಸುಂಧರಾ ಭೂಪತಿ ಮತ್ತಿತರರು ಕೊಟ್ಟಿರುವ ದೂರುಗಳ ಆಧಾರದ ಮೇಲೆ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 2ನೆಯ ವಲಯ ಬೆಂಗಳೂರು ನಗರ ಜಿಲ್ಲೆ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸದಸ್ಯರ ಸಭೆಯನ್ನು ಮುಂದೂಡುವಂತೆ ಸಲಹೆ ನೀಡಿರುವುದರ ಜೊತೆಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ ಮತ್ತು ಸಂಘದ ಉಪನಿಯಮಾನುಸರ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸದಸ್ಯರು ಭಾಗವಹಿಸಲು ಅನುಕೂಲವಾಗುವಂತೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಸ್ಥಳದಲ್ಲಿ ಆಯೋಜಿಸುವಂತೆ ಸೂಚಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಲ್ಲಿ ಇಷ್ಟು ವರ್ಷಗಳಲ್ಲಿಯೂ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಗಳಲ್ಲಿ ಎರಡು-ಮೂರು ಸಾವಿರಕ್ಕಿಂತಲೂ ಸದಸ್ಯರು ಸೇರಿರುವ ನಿದರ್ಶನವಿಲ್ಲ ಮತ್ತು ಪ್ರಮುಖ ಬರಹಗಾರರು ಭಾಗಿಯಾದ ಉದಾಹರಣೆಯೂ ಇಲ್ಲ ಎನ್ನುವ ಅಂಶವನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸಹಿತವಾಗಿ ಎಲ್ಲರೂ ವಾರ್ಷಿಕ ಸಾಮಾನ್ಯ ಸಭೆಯ ಸಿದ್ದತೆಗೆ ಭರದಿಂದ ದುಡಿಯುತ್ತಿದ್ದರು. ಈ ಸಂದರ್ಭದಲ್ಲಿ ಇಂತಹದೊಂದು ನಿರ್ಣಯವನ್ನು ತೆಗೆದು ಕೊಳ್ಳ ಬೇಕಾಗಿ ಬಂದಿದ್ದು ಕಠಿಣಕರವಾಗಿದ್ದರೂ ಸಹಕಾರ ಸಂಘಗಳ ಉಪನಿರ್ದೇಶಕರ ಸಲಹೆಯನ್ನು ಮಾನ್ಯ ಮಾಡಿ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ದಿನಾಂಕದಂದು ಆಯೋಜಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ನಿಗಧಿಯಂತೆ ನಡೆಯಲಿದ್ದು, ಅಲ್ಲಿ ಮುಂದಿನ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಮುಂದಿನ ತೀರ್ಮಾನಗಳನ್ನು ತೆಗೆದು ಕೊಳ್ಳಲಾಗುವುದು. ಕೊನೆ ಕ್ಷಣದಲ್ಲಿ ಆದ ಈ ಬದಲಾವಣೆಯಿಂದ ಸಭೆಗೆ ಹೊರಟಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿಗೆ ಉಂಟಾಗಿರ ಬಹುದಾದ ತೊಂದರೆಗೆ ಕನ್ನಡ ಸಾಹಿತ್ಯ ಪರಿಷತ್ತು ವಿಷಾದಿಸಿದ್ದು, ಈ ವಿಷಯವನ್ನು ಕನ್ನಡಿಗರೆಲ್ಲರ ಗಮನಕ್ಕೆ ತರುವಂತೆ ಅವರು ಮಾಧ್ಯಮಗಳನ್ನು ವಿನಂತಿಸಿ ಕೊಂಡಿದೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
