ಅವ್ವೆ ಹೇಳಿದ್ದು - 60 ನಮ್ಮ ತ್ಯಾಗಕ್ಕೆ ದಕ್ಕಿದ್ದು ಕೇವಲ ಅಪಮಾನ..!
ನಮ್ಮವರು ಬದುಕನ್ನು ತ್ಯಾಗ ಮಾಡಿದ್ದಾರೆ. ಅಭಿವೃದ್ಧಿ ಎನ್ನುವ ಮಂತ್ರಕ್ಕೆ ಮಾರುಹೋಗಿ ಸರ್ವಸ್ವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ನಮಗೆ ಆ ಅಭಿವೃದ್ಧಿಯ ಫಲ ದಕ್ಕಿದೆಯೇ? ಈ ಪ್ರಶ್ನೆ ಕೇಳಿದಾಗಲೆಲ್ಲಾ ಅವ್ವೆ ಮೂಕಳಾಗುತ್ತಾಳೆ. ಹಾಗಂತ ಅವ್ವೆಯೂ ಆ ಬಗ್ಗೆ ಧ್ವನಿ ಎತ್ತಿಲ್ಲವೇ? ಎಂಬ ಸಂಶಯ ಬರುವುದು ಸಾಮಾನ್ಯ. ಅವಳು ಸ್ವಾಭಿಮಾನಿ, ತನ್ನದೆಲ್ಲವನ್ನೂ ಬಿಟ್ಟುಕೊಟ್ಟರೂ ತನ್ನ ತನವನ್ನು ಬಿಟ್ಟುಕೊಡುವವಳಲ್ಲ. ನಮ್ಮವರ ತ್ಯಾಗಕ್ಕೆ, ನ್ಯಾಯವಾಗಿ ದಕ್ಕಬೇಕಿರುವುದು ದಕ್ಕದಿದ್ದರೆ, ಇಂತಹ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ, ಎನ್ನುವ ಮಾತನ್ನು ಅವ್ವೆ ಆಗಾಗ ಉಚ್ಚರಿಸುತ್ತಲೇ ಇರುತ್ತಿದ್ದಳು.
ʻʻಅವ್ವೆ ಅದು ನಮ್ಮ ಹಕ್ಕ, ಅದೆಲ್ಲಾ ನ್ಯಾಯದ್ಲೆ ನಮಗೆ ಸಿಗಬೇಕು.. ಅಂತೆಲೆ.. ಏನೆ ಅದು..?" ಎಂದು ನನ್ನ ಅನುಮಾನಕ್ಕೆ ಒಂದು ಪ್ರಶ್ನೆ ಕೇಳಿದೆ. ʻʻಸೀನಾ ನಿಂಗೆ ಈ ಸಿಎಸ್ಆರ್ ನಿಧಿ ಅಂಬುದ್ರ ಬಗ್ಗೆ ಖರ್ಬಿದಾ..?" ಎಂದು ನನಗೆ ಮರು ಪ್ರಶ್ನೆ ಮಾಡಿದ್ದಳು. "ಹೌದು" ಎಂದು ನಾನು ಆ ಬಗ್ಗೆ ನನಗೆ ಮಾಹಿತಿ ಇದೆ ಎನ್ನುವ ಸೂಚನೆ ನೀಡಿದೆ. "ಭಾರತದ ಕಂಪನಿಗಳ ಕಾಯ್ದೆ, 2013 ರ ಸೆಕ್ಷನ್ 135ರ ಪ್ರಕಾರ, ಪ್ರತಿ ದೊಡ್ಡ ಸಂಸ್ಥೆಯು ತನ್ನ ಹಿಂದಿನ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಕನಿಷ್ಠ ಶೇ. 2 ರಷ್ಟನ್ನು ಸಿಎಸ್ಆರ್ ಚಟುವಟಿಕೆಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು". ಈ ಕಾಯಿದೆಯು ಕಂಪನಿಗಳು ಕೇವಲ ಲಾಭ ಗಳಿಸುವುದಲ್ಲದೆ, ಸಮಾಜದ ಪ್ರಗತಿಯಲ್ಲಿ ಪಾಲುದಾರರಾಗಬೇಕು ಎಂಬ ಮಹತ್ವದ ಉದ್ದೇಶ ಹೊಂದಿರುತ್ತದೆ. ಅದಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಎನ್ನಲಾಗುತ್ತದೆ. ಪ್ರಸಕ್ತ ಕಾಯಿದೆಯಡಿ ದೇಶದಲ್ಲಿ ಬೃಹತ್ ಉದ್ಯಮಗಳು ತಮ್ಮ ಲಾಭದ ಒಂದು ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡುವಂತೆ ಕಡ್ಡಾಯಗೊಳಿಸಿದೆ ಎನ್ನುವುದನ್ನು ನಾನು ಹೇಳಿದೆ.
ʻʻಹಂಗಾದ್ರೆ ಈ ಸಿಎಸ್ಆರ್ ಕಾಯ್ದೆ ಫಾಯ್ದೆ ನಮಗೆ ಸರಿಯಾಗಿ ನ್ಯಾಯಾ ಇದಾ..?" ಎನ್ನುವ ಪ್ರಶ್ನೆಗೆ ನಾನು ಕ್ಷಣಕಾಲ ಅಯೋಮಯನಾಗಿದ್ದೆ. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯೇ ಇರಲಿಲ್ಲದ ಕಾರಣ, ಸುಮ್ಮನೆ ಮುಖಮುಖ ನೋಡುತ್ತಾ ಕುಳಿತೆ. ʻʻನೀನು ಇದೆಲ್ಲಾ ತಿಳ್ಕೊಬೇಕು. ನಮ್ಮ ಜಿಲ್ಲಾದಾಗೆ ಏನೆಲ್ಲಾ ಇದು..? ಅದ್ರಾಗ ನಮ್ಮ ಪಾಲೆಷ್ಟು ಅಂಬುದೆಲ್ಲಾ ತಿಳ್ಕೊಂಬೇಕು. ನಿಂಗೆ ಗೊತ್ತಿಲ್ಲ ಅಂಮ್ಯಾನೆ.. ನೀ ಏನು ಬ್ಯಾರೆಯವರಿಗೆ ಕೇಳುಕೆ ಆತಿದು..?" ಎನ್ನುತ್ತಾ ನನ್ನ ಅಲ್ಪ ತಿಳುವಳಿಕೆಗೆ ತನ್ನ ಮಾತಿನಲ್ಲಿಯೇ ತಿವಿದಿದ್ದಳು.
ನಮ್ಮ ರಾಜ್ಯಕ್ಕೆ ವರ್ಷದಿಂದ ವರ್ಷಕ್ಕೆ ಬರುವ ಸಿಎಸ್ಆರ್ ಮೊತ್ತವೇನೋ ಹೆಚ್ಚಾಗುತ್ತಲೇ ಇದೆ. ಆದರೆ ಉತ್ತರ ಕನ್ನಡ ಜಿಲ್ಲೆಯಂತಹ ಹಿಂದುಳಿದ, ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದ ನಮಗೆ, ನ್ಯಾಯಯುತವಾಗಿ ನಮ್ಮ ಪಾಲು ದಕ್ಕುತ್ತಿಲ್ಲ. ಅದಕ್ಕೆ ಕಾರಣ ಸಿಎಸ್ಆರ್ ನಿಧಿಯ ಹಂಚಿಕೆ ಮತ್ತು ಬಳಕೆಯಲ್ಲಿ ಪಾರದರ್ಶಕತೆ ಇರದಿರುವುದೇ ಹೀಗಾಗುವುದಕ್ಕೆ ಕಾರಣ. ಜೊತೆಗೆ ಜವಾಬ್ದಾರಿಯುತ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದಳು.
ನಮ್ಮ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳು ಎನ್ನಲಾಗುವ 'ಕರ್ನಾಟಕ ವಿದ್ಯುತ್ ನಿಗಮದ ಪ್ರತ್ಯೇಕ ಯೋಜನೆಗಳು', 'ಕೈಗಾ ಅಣುವಿದ್ಯುತ್ ಯೋಜನೆ', 'ದಾಂಡೇಲಿಯ ವೆಸ್ಟ್ ಕಾಸ್ಟ್ ಪೇಪರ್ ಮಿಲ್' ಸೇರಿದಂತೆ ಜಿಲ್ಲೆಯಲ್ಲಿ 'ಗಾರ್ಮೆಂಟ್ಸ್', 'ಕಾಸ್ಟಿಕ್ ಸೋಡಾ', 'ಸಕ್ಕರೆ ಕಾರ್ಖಾನೆಗಳು', 'ಕದಂಬ ನೌಕಾನೆಲೆಗಳು', 'ವಾಣಿಜ್ಯ ಬಂದರುಗಳು', 'ಪ್ರವಾಸೋದ್ಯಮ' ಹಾಗೂ 'ಸೇವಾ ವಲಯಗಳು' ಸೇರಿದಂತೆ ಸಾಕಷ್ಟು ಸಣ್ಣ-ಪುಟ್ಟ ಕೈಗಾರಿಕೆಗಳು ಇವೆ. ಇವೆಲ್ಲವೂ ಸಿಎಸ್ಆರ್ ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಆದರೆ ಜಿಲ್ಲೆಗೆ ಈ ಎಲ್ಲರಿಂದ ದಕ್ಕಿದ್ದೆಷ್ಟು ಎನ್ನುವ ಪ್ರಶ್ನೆ ಬರುತ್ತದೆ.
ಒಂದು ಅಂಕಿಅಂಶಗಳ ಪ್ರಕಾರ, ಕರ್ನಾಟಕ ರಾಜ್ಯಕ್ಕೆ ಹರಿದು ಬಂದಿರುವ ಒಟ್ಟು ಸಿಎಸ್ಆರ್ ನಿಧಿಯು ಪ್ರತಿ ವರ್ಷ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ ನಮ್ಮ ಪಾಲಿಗೆ ಸಿಗುತ್ತಿರುವುದು ಕವಡೆಕಾಸು ಮಾತ್ರ. 2019-20ರಲ್ಲಿ ರಾಜ್ಯಕ್ಕೆ ಬಂದಿರುವ ಸಿಎಸ್ಆರ್ ಫಂಡ್ 1,448.16 ಕೋ. ರೂ. ಆದರೆ ಜಿಲ್ಲೆಯ ಪಾಲಿಗೆ ಸಿಕ್ಕಿದ್ದು ಕೇವಲ 4.64 ಕೋ. ರೂ. ಮಾತ್ರ. 2020-21ರಲ್ಲಿ ರಾಜ್ಯಕ್ಕೆ ಬಂದಿದ್ದು 1,277.81 ಕೋ. ರೂ. ಜಿಲ್ಲೆಗೆ ದಕ್ಕಿದ್ದು 5.07 ಕೋ. ರೂ. 2021-22 ರಲ್ಲಿ ರಾಜ್ಯಕ್ಕೆ ಬಂದಿದ್ದು 1,849.62 ಕೋ. ರೂ., ಜಿಲ್ಲೆಗೆ ಸಿಕ್ಕಿದ್ದು 11.47 ಕೋ. ರೂ. 2022-23 ರಲ್ಲಿ ರಾಜ್ಯಕ್ಕೆ ಸಿಕ್ಕಿದ್ದು 2,058.73 ಕೋ. ರೂ., ಜಿಲ್ಲೆಗೆ ಬಂದಿದ್ದು 11.19 ಕೋ. ರೂ.. ಇನ್ನೂ 2023-24ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ 2,254.88 ಕೋ. ರೂ. ಬೃಹತ್ ಮೊತ್ತ. ಅದರಲ್ಲಿ ಉತ್ತರ ಕನ್ನಡಕ್ಕೆ ದಕ್ಕಿದ್ದು ಕೇವಲ 19.39 ಕೋ. ರೂ.! ಎಂದು ಅವ್ವೆ CSR ಫಂಡಿನ ಡಾಟಾ ಬಿಚ್ಚಿಟ್ಟಳು.
ʻʻಅಂದರೆ ನಮಗೆ ಸಿಕ್ಕಿದ್ದು ಮಾತ್ರ ಶೇ. 1ಕ್ಕಿಂತಲೂ ಕಮ್ಮಿನೇ ಆಯ್ತು" ಎಂದು ನಾನು ಚಿಂತೆಗೊಳಗಾದೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಅಗತ್ಯತೆಗಳು, ಆರೋಗ್ಯ, ಶಿಕ್ಷಣ, ಮತ್ತು ರಸ್ತೆ ಸಂಪರ್ಕದ ಸಮಸ್ಯೆಗಳು ಹೆಚ್ಚಿವೆ. ಇನ್ನೂ ಈ ಜಿಲ್ಲೆ ಯೋಜನೆಗಳಿಗಾಗಿ ತ್ಯಾಗ ಮಾಡಿದಷ್ಟು ಸಾಕಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯಮಟ್ಟದ ಒಟ್ಟು ನಿಧಿಯ ಕೇವಲ ಅರ್ಧದಿಂದ ಒಂದು ಪ್ರತಿಶತದಷ್ಟು ಮಾತ್ರ ಜಿಲ್ಲೆಗೆ ಲಭಿಸುತ್ತಿರುವುದು ಘೋರ ಅನ್ಯಾಯವಲ್ಲದೆ ಇನ್ನೇನು? ರಾಜಧಾನಿ ಕೇಂದ್ರಿತವಾದ ದೊಡ್ಡ ಯೋಜನೆಗಳ ಕಡೆಗೆ ಈ ನಿಧಿಯ ಗಮನ ಹರಿಯುತ್ತಿದೆಯೇ ಹೊರತು, ಹಿಂದುಳಿದ ಜಿಲ್ಲೆಗಳ ಸ್ಥಳೀಯ ಮತ್ತು ಪ್ರಾದೇಶಿಕ ಅಗತ್ಯಗಳ ಕಡೆಗೆ ಗಮನ ನೀಡುತ್ತಿಲ್ಲ ಎಂಬ ಆರೋಪದ ಜೊತೆಗೆ ನಮ್ಮ ಜಿಲ್ಲೆಯ ಯೋಜನೆಗಳು, ಅಲ್ಲೀ.. ಇಲ್ಲಿ.. ಕವಡೆ ಕಾಸು ನೀಡಿ, ಭಾರಿ ಪ್ರಚಾರ ಮಾಡಿಕೊಳ್ಳುವುದರಲ್ಲಿಯೇ ನಿಸ್ಸೀಮವಾಗಿವೆ.
ʻʻನಮ್ಮಲ್ಲಿ ಈ ಸಿಎಸ್ಆರ್ ಫಂಡ್ ಎಲ್ಲೆಲ್ಲಿ ಉಪಯೋಗ ಮಾಡೆರು..?" ಎಂದಾಗ ʻʻಇಲ್ಲಿ ಬಹುತೇಕ ಎಲ್ಲಾ ತಾಮೂ ಗೌರಮೆಂಟ್ ಆಫಿಸ್ನಾಗೆ ಹೆಚ್ಚಾಗಿ ಉಪಯೋಗ ಮಾಡೆರು. ಎಸ್ಪಿ ಆಫಿಸ್ ನವಿಕರಣ, ಹಳಿಯಾಳ ಸರಕಾರಿ ಆಫಿಸ್ಗೆ ಕಂಪೂಟರ್, ನಗರಸಭೆಗೆ ಗಾಡಿಗಳು, ಆಂಬ್ಯುಲೆಂನ್ಸ್ ಅದು, ಇದು ಅಂತೆ, ಸಣ್ಣಪುಟ್ಟ ಕಲಸಾ ಮಾಡಿದ್ದು ಕಾಣ್ತಿದು.. ಇನ್ನೂ ಕೈಗಾದವವರು ಅಲ್ಲೊಂದು ಶಾಲೆ ಇಲ್ಲೊಂದು ರಸ್ತೆ ಮಕ್ಕಳಿಗೆ ಪಾಟಿ ಚಿಲ, ಅದು ಇದು ಹೇಳಕಂಡೆ ದಿನಾ ದುಡ್ತೆ ಇವರು. ಕೇಳಿದಾಗೆಲ್ಲಾ ಅಲ್ಲೊಂದು ಸಮುದಾಯ ಭವನ, ಇಲ್ಲೊಂದು ತರಬೇತಿ ಕೇಂದ್ರ, ಹಳ್ಳಿ ಹಳ್ಳಿಗೂ ವೈದ್ಯಕೀಯ ಸೇವೆ, ಹಿಂಗೆ ಅದು ಮಾಡ್ತೆವು.. ಇದು ಮಾಡೆವು.. ಹೇಳಿ ಮಂದಿಗೆ ಮಳ್ಳು ಮಾಡುದ್ರಾಗೆ ಎತ್ತಿದ ಕೈ" ಎಂದಳು. ಅವ್ವೆಯ ಕರಾರುವಕ್ಕಾದ ಮಾತಿಗೆ ನಾನು ನಿರುತ್ತರನಾಗಿದ್ದೆ.
ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನ್ಯಾಯ ಸಿಗಬೇಕಾದರೆ, ಸಿಎಸ್ಆರ್ ಕಾಯ್ದೆಯನ್ನು ಸ್ಥಳೀಯ ಮತ್ತು ಪ್ರಾದೇಶಿಕ ಅಗತ್ಯತೆಗಳಿಗೆ ಅನುಗುಣವಾಗಿ ಮಾರ್ಪಡಿಸಬೇಕು. ಸಂಪನ್ಮೂಲಗಳನ್ನು ಬಳಸುವ ಸ್ಥಳಗಳಿಗೆ ಆದ್ಯತೆ ನೀಡಿ ಹಣ ಖರ್ಚು ಮಾಡುವುದನ್ನು ಕಡ್ಡಾಯಗೊಳಿಸಬೇಕು. ನಮ್ಮ ಜನಪ್ರತಿನಿಧಿಗಳು ಈ ವಿಷಯವನ್ನು ರಾಜ್ಯ ಶಾಸನಸಭೆಯಲ್ಲಿ ಪ್ರಬಲವಾಗಿ ಮಂಡಿಸಿ, ನಿಧಿಯ ಹಂಚಿಕೆಯಲ್ಲಿನ ತಾರತಮ್ಯವನ್ನು ನಿವಾರಿಸಬೇಕು. ಜಿಲ್ಲಾ ಮಟ್ಟದಲ್ಲಿ ಪಾರದರ್ಶಕ ಸಿಎಸ್ಆರ್ ಸಮಿತಿಯನ್ನು ರಚಿಸಿ, ಪ್ರತಿ ಯೋಜನೆಯನ್ನು ಸಾರ್ವಜನಿಕ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು. ಇದೆಲ್ಲಾ ಈ ಕೂಡಲೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಹೇಳುವುದಕ್ಕೆ ಅವ್ವೆ ಮರೆತಿಲ್ಲ.
ʻʻಅವ್ವೆ ಈ ಸಿಎಸ್ಆರ್ ಫಂಡ್ನಾಗೆ ಮತ್ತೆಲ್ಲಾ ಏನು ಮಾಡುಕೆ ಆತಿದೆ..?" ಎನ್ನುವ ಪ್ರಶ್ನೆ ಮಾಡಿದೆ.
ʻʻನೋಡು ಈ ಸಿಎಸ್ಆರ್ನಾಗೆ ಜನರ ನೋವಿಗೆ ಸ್ಪಂದಿಸವು ಕೆಲಸಾ ಮಾಡಬೇಕಾತಿದು. ಈ ಕಾನೂನಿನ ಷೆಡ್ಯೂಲ್ VII ರಾಗೆ ಸ್ಪಷ್ಟವಾಗಿ ಹೇಳಿದು, ಸಿಎಸ್ಆರ್ನ ಎಲ್ಲಾ ಚಟುವಟಿಕೆ ನೇರವಾಗಿ ನಮ್ಮಂತಹ ಸಂತ್ರಸ್ತರಿಗೆ ನೆರವಾಗಬೇಕು ಅಂಬುದು" ಎಂದಾಗ ನಾನು ಉತ್ತಮ ಆಸ್ಪತ್ರೆಗಳು, ಶಾಲೆಗಳ ನಿರ್ಮಾಣ ಮತ್ತು ಪುನರ್ವಸತಿ ಕೇಂದ್ರಗಳಿಗೆ ನೆರವಾಗಬಹುದಾ? ವೃತ್ತಿಪರ ತರಬೇತಿ ನೀಡುಬಹುದಾ? ಮೂಲಭೂತ ಸೌಕರ್ಯ ವಂಚಿತ ಹಳ್ಳಿಗಳಲ್ಲಿ ರಸ್ತೆ, ನೀರು, ವಿದ್ಯುತ್ ಒದಗಿಸಬಹುದಾ? ನಮ್ಮ ಪವಿತ್ರ ಕಾಡುಗಳನ್ನು ಉಳಿಸಲು ನೆರವು ನೀಡುಬಹುದಲ್ಲವಾ? ಎಂದು ಕೇಳಿದಾಗ ಎಲ್ಲದಕ್ಕೂ ಒಪ್ಪಿಕೊಂಡ ಅವ್ವೆ ʻʻಇದೆಲ್ಲಾ ಈ ಯೋಜನೆ ತಮ್ಮ ಸರ್ವಸ್ವ ತ್ಯಾಗ ಮಾಡಿದ ಮಂದಿಗೆ ಮಾಡಿದ್ರೆ ಎಷ್ಟು ಗನಾ ಆತಿತ್ತು..." ಎಂದು ಭಾವನಾ ಲೋಕಕ್ಕೆ ತೆರಳಿದಳು.
ಈ ಭಾವನಾತ್ಮಕ ನೋವು ಕೇವಲ ಅವ್ವೆಯದಷ್ಟೆಯಲ್ಲ ಲಕ್ಷಾಂತರ ಉತ್ತರ ಕನ್ನಡ ಜಿಲ್ಲೆಯ ಜನರ ಸಾಮೂಹಿಕ ಆಕ್ರೋಶ. ಬೃಹತ್ ಕೈಗಾರಿಕೆಗಳು, ಬಂದರುಗಳು ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕಾಗಿ ತಮ್ಮ ಬದುಕಿನ ಅಡಿಪಾಯವನ್ನೇ ತ್ಯಾಗ ಮಾಡಿದ ಸಮುದಾಯಗಳಿಗೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯು ನ್ಯಾಯ ಎನ್ನುವುದು, ಪರಿಹಾರದ ಕನಿಷ್ಠ ಆಶಾಕಿರಣವಾಗಿತ್ತು. ಆದರೆ, ಇಂದು ಆ ನಿಧಿಯು ಕೇವಲ ಗಣ್ಯ ಪ್ರದೇಶಗಳ ಯೋಜನೆಗಳಿಗೆ, ಸರಕಾರಿ ಕಚೇರಿಗಳಿಗೆ ಹರಿದು, ಇಲ್ಲಿನ ಜನರ ಬದುಕಿಗೆ 'ಬಿಡಿಗಾಸು' ಕೊಟ್ಟಿರುವುದು ಅದೇನೋ ಅಂತಾರಲ್ಲಿ 'ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತಂತೆ' ಹಂಗಾಗಿದೆ.
(ಮುಂದುವರೆಯುವುದು)
ಶ್ರೀನಾಥ್ ಜೋಶಿ, ಸಿದ್ದರ. 9060188081
