CreamA Cream article
Article

ಅವ್ವೆ ಹೇಳಿದ್ದು - 61

shrinath joshi

ಅವ್ವೆ ಹೇಳಿದ್ದು - 61

ʻಪಾಂಚಜನ್ಯದ ಝೇಂಕಾರಕ್ಕೆ ಲಯ ತಪ್ಪಿದ ಬದುಕುʼ

ಶತಮಾನಗಳ ಹಿಂದೆ, ವಿಜಯನಗರದ ವೈಭವದ ದಿನಗಳಲ್ಲಿ, ಅರಬೀ ಸಮುದ್ರದ ನೀಲಿ ತೆರೆಗಳ ಮೇಲೆ ಅರಬ್ ನಾವೆಗಳು ತೇಲಿ ಬಂದಿದ್ದವು. ಅವುಗಳು ಭಟ್ಕಳಕ್ಕೆ ಬಂದು ತಲುಪಿದ್ದವು. ನಮ್ಮಲ್ಲಿ ಸಿಗುವ ಮಸಾಲೆ ಪದಾರ್ಥಗಳ ವ್ಯಾಪಾರವೇ ಅವರ ಉದ್ದೇಶವಾಗಿತ್ತು. ಅದರ ಜೊತೆಗೆ ಅರಬ ನಾಡಿನ ಕುದುರೆಗಳನ್ನು ನಮ್ಮಲ್ಲಿ ಮಾರಾಟ ಮಾಡಬೇಕು ಎನ್ನುವ ವ್ಯಾಪಾರ ಮಾಡುವ ಯೋಜನೆಯೂ ಅವರದ್ದಾಗಿತ್ತು. ಅದಕ್ಕೆ ಕುದುರೆ ವ್ಯಾಪಾರದ ಲೆಕ್ಕಾಚಾರ ಹೊತ್ತು ಬಂದ ಆ ಯಾತ್ರಿಕರು ಇಲ್ಲಿಯೇ ನೆಲೆಯೂರಿ, ಸ್ಥಳೀಯರೊಂದಿಗೆ ಬೆರೆತು, ತಮ್ಮದೇ ಆದ 'ನವಾಯತ' ಸಂಸ್ಕೃತಿಯನ್ನು ಸೃಷ್ಟಿಸಿದರು ಎನ್ನುವ ಭಟ್ಕಳದ ನವಾಯತರ ಇತಿಹಾಸವನ್ನು ಓದುತ್ತಿದ್ದಾಗಲೇ ಅವ್ವೆ ಪ್ರವೇಶ.

ಓದಿನಲ್ಲಿ ಮಗ್ನನಾಗಿದ್ದ ನನ್ನ ತಲೆಯ ಮೇಲೆ ಕೈಯಾಡಿಸಿ ʻʻಸೀನಾ... ನಮ್ಮ ಬಟ್ಕಳದಾಗಿ ಇರುವ ನವಾಯತ್ರಿಗೂ ಬೇರೆ ಮುಸ್ಲಿಂರಿಗೂ ರಾಶಿ ವೆತ್ಯಾಸ ಇದು... ನಮ್ಮ ದೇಶದಾಗೆ ಒಂದ ಕಾಲದಾಗೆ ಎಲ್ಲಾರೂ ನಮ್ಮವರೆ... ಅರಬ್‌ದಾರ್ಬೆ ಬಂದವರು ತಾಮ್ಮದು ಧರ್ಮಾನೆ ಬ್ಯಾರೆ ಅಂಬುತರದಲ್ಲಿ ಇದ್ರು. ಈಗ್ಲೂ ರಾಶಿ ಮಂದಿ ಹಂಗೆ ಇವ್ರು.." ಎನ್ನುತ್ತಿದ್ದಾಗ ನಾನು ಮಧ್ಯ ಪ್ರವೇಶಿಸಿ ʻʻಅಂದ್ರೆ.. ಈಗ ಭಟ್ಕಳದಾಗೆ ಇವರು ಎಲ್ಲಾ ನವಾಯತರು ಅರಬ್‌ ದಾರ್ಬೆ ಬಂದಿದ್ರಾ.."? ಎಂದೆ. ʻʻಇಲ್ಲ.. ಈಗ ಇರುವ ಕ್ಕಿಂತಾ ನಾಲ್ಕಾರ ಪಿಳಿಗಿ ಹಿಂದೆ ಇಲ್ಲಿದ್ದ ಬಹುತೇಕರು ಜೈನ್‌ರಾಗಿದ್ದರು. ಕಾಲ ಕ್ರಮೇಣ ಅವರೆಲ್ಲಾ ನವಾಯತರಾದ್ರು. ಭಟ್ಕಳದಾಗಿನ ನವಾಯತ್ರು ಇಂದಿಗೂ ಹೊತ್ತು ಕತ್ತಿದ ಮ್ಯಾನೆ ಉಂಬುದಿಲ್ಲ.. ಅಲ್ಲಿ ಜೈನರ ಬಸ್ತಿ ಇವತ್ತೂ ನೋಡುಕೆ ಸಿಗ್ತಿದು.." ಎಂದು ವಿವರಣೆ ನೀಡುತ್ತ, ಕುತೂಹಲದಿಂದ ನನ್ನ ಕಡೆ ನೋಡಿದಳು.

ʻʻಅವ್ವೆ ಭಟ್ಕಳದ ನವಾಯತ್ರಿಗೂ ಬ್ಯಾರೆ ಮುಸ್ಲಿಂರಿಗೂ ಅಸಲಿಗೆ ವೆತ್ಯಾಸ ಇದು ಅಂತ್ಯೆ..?" ʻʻಪೋರ್ನೆ ಎಲ್ಲಾರೂ ಮನುಷ್ಯರೆ.. ಅವರ ಆಚಾರ ಅವರಿಗೆ ಇವರ ಆಚಾರ ಇವರಿಗೆ.. ಆದ್ರೂ ನವಾಯತ್ರು ಬಾಕಿ ಮುಸ್ಲಿಂರಿಗೆ ಹಣ್ಣು ಕೊಡುವುದು, ಹೆಣ್ಣು ತರುದು ಮಾಡುದು ಕಾಂಬುದಿಲ್ಲ. ಒಂದು ಅಲ್ಲಿಲ್ಲೆ ಮದ್ವಿಮಾಡ್ತಿರು. ಇಲ್ಲಾ ಅರಬ್‌ ದೇಶದಾರ್ಬೆ ಹೆಣ್ಣು ಗಂಡು ಸಂಬಂದ ಮಾಡ್ತಿರು. ಹಂಗೇಳಿ ಪಾಕಿಸ್ತಾನದಾದೂ ಸಂಬಂಧ ಮಾಡಿದ್ದು ಇದು.." ಎಂದಳು.

ವಾಸ್ತವದಲ್ಲಿ, ಭಟ್ಕಳಕ್ಕೂ ಕೊಲ್ಲಿ ರಾಷ್ಟ್ರಗಳಿಗೂ ಮತ್ತು ಪಾಕಿಸ್ತಾನದೊಂದಿಗಿನ ವೈವಾಹಿಕ ಸಂಬಂಧಗಳು ಈ ಭಾಗದ ಜನರಲ್ಲಿ ತಲೆನೋವು ತಂದಿದ್ದವು. ಸಂಪತ್ತು, ಶಿಕ್ಷಣ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗೆ ದೃಢವಾದ ನಂಟನ್ನು ಹೊಂದಿರುವ ಈ ಸಮುದಾಯಕ್ಕೆ ಸ್ನೇಹ ಮತ್ತು ರಕ್ತಸಂಬಂಧದ ಆಧಾರದ ಮೇಲೆ ವೀಸಾ ವಿನಾಯಿತಿಗಳು ಸುಲಭವಾಗಿ ದೊರೆಯುತ್ತಿದ್ದವು. ಇದೆಲ್ಲಾ ಆರಂಭದಲ್ಲಿ ಸರಳ ಮತ್ತು ಸುಸೂತ್ರವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಈಗ ಇದೇ ಸಂಬಂಧಗಳೇ ತಲೆನೋವು ಎನ್ನುವಂತಾಗಿ ಬಿಟ್ಟಿದೆ. ಕಾರಣ, ಕಳೆದ ಕೆಲವು ದಶಕಗಳಲ್ಲಿ, ಭಟ್ಕಳದ ಹೆಸರಿಗೆ ಭಯೋತ್ಪಾದನೆಯ ಕಪ್ಪು ಮಸಿ ಬಳಿದಿದೆ. ಉತ್ತರ ಭಾರತದ 'ಅಜಂಘರ್' ನಂತರ, ದೇಶದ ನಕ್ಷೆಯಲ್ಲಿ 'ಉಗ್ರರನ್ನು ಸೃಷ್ಟಿಸಿದ ಸ್ಥಳ' ಎಂಬ ಕಳಂಕವನ್ನು ಹೊತ್ತ ಈ ಕರಾವಳಿಯ ಪುಟ್ಟ ಪಟ್ಟಣ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಈ ಮಧ್ಯೆ, ಭಟ್ಕಳವು ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ನಿರಂತರ ಕಣ್ಗಾವಲಲ್ಲಿದೆ. 'ಇಂಡಿಯನ್ ಮುಜಾಹಿದ್ದೀನ್'ನ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಸಹೋದರರು ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು, ಪಾಕ್ ಐಎಸ್‌ಐ ಸಂಪರ್ಕ ಮತ್ತು ಅಲ್ಲಿನ ಆಶ್ರಯಗಳಿಂದಾಗಿ, ಈ ಅದ್ಭುತ ನೆಲಕ್ಕೆ ಅಪಖ್ಯಾತಿ ತಂದು ಬಿಟ್ಟಿದ್ದಾರೆ. ಪರಿಣಾಮ, ಇಂದು ಇಡೀ ಸಮುದಾಯ ತಲೆತಗ್ಗಿಸುವಂತಾಗಿ, ಅವರ ಬದುಕನ್ನು ಪ್ರಶ್ನಿಸುವ ಹಂತಕ್ಕೆ ತಲುಪಿದೆ; ಶತಮಾನಗಳ ಹಳೆಯ ವೈವಾಹಿಕ ನಂಟಿನ ಮೂಲವನ್ನೇ ಅನುಮಾನದಿಂದ ನೋಡುವಂತಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಘೋರ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸಿತು. ಆಗ ಕೇಂದ್ರ ಸರ್ಕಾರ ಒಂದು ದಿಟ್ಟ ಹೆಜ್ಜೆಯಿಟ್ಟಿತ್ತು. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್‌ ಕಳುಹಿಸುವ ನಿರ್ಧಾರ ತೆಗೆದುಕೊಂಡು ಕಾರ್ಯಾಚರಣೆಗೆ ತೊಡಗಿಕೊಂಡಾಗ, ಮೊದಲಿಗೆ ತಲ್ಲಣಗೊಂಡದ್ದು ನಮ್ಮ ಭಟ್ಕಳವೇ ಎಂದು ಅವ್ವೆ ಹೇಳುತ್ತಿದ್ದಳು.

ʻʻಅಂದ್ರೆ ಭಟ್ಕಳದಾಗೆ ಪಾಕಿಸ್ಥಾನಿಗಳು ಇವ್ರಾ..?" ಎಂದು ಪ್ರಶ್ನೆ ಮಾಡಿದೆ. ʻʻಪಾಕಿಸ್ಥಾನದವರ ಸಂಗ್ತಿಗೆ ಭಟ್ಕಳದವರು ನೆಂಟಸ್ತನಾ ಮಾಡಿರು. ಅಲ್ಲಿಂದ ಹೆಣ್ ತರುದು, ಇಲ್ಲಿಂತೆ ಹೆಣ್ಣು ಕೊಡುದು ಎಲ್ಲಾ ನಡಿತಿತ್ತು.." ಎಂದು ಅಸಲಿ ಸಮಸ್ಯೆಗಳನ್ನು ಅವ್ವೆ ವಿವರಿಸಲು ಆರಂಭಿಸಿದ್ದಳು. ಎಲ್ಲವೂ ಸರಿ ಇದ್ದಾಗ ಇವರ ವೀಸಾಗಳನ್ನು ನಿಯಮಿತವಾಗಿ ನವೀಕರಣ ಮಾಡಲಾಗುತ್ತಿತ್ತು. ಅದರಿಂದ ಅವರ ಪಾಡಿಗೆ ಅವರು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಪ್ರತಿ ಬಾರಿ ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆದಾಗಲೆಲ್ಲಾ ಭಟ್ಕಳದಲ್ಲಿ ಚಲನವಲನ ಜೋರಾಗಿಯೇ ಇರುತ್ತದೆ. ಈ ಪ್ರದೇಶದ ಎಲ್ಲಾ ದೂರವಾಣಿ ಕರೆಗಳ ಮೇಲೆ ಗುಪ್ತಚರರು ನಿಗಾ ಇಡುವುದು, ಇಲ್ಲಿನ ಜನರ ಮೇಲೆ, ಅವರ ಚಲನವಲನಗಳ ಬಗ್ಗೆ ಕಣ್ಣಿಟ್ಟಿರುವುದು ಸಾಮಾನ್ಯ. ದೀರ್ಘಾವಧಿ ವೀಸಾ ಪಡೆದು ಭಟ್ಕಳದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ ಮಹಿಳೆಯರು ಮತ್ತು ಅವರ ಕುಟುಂಬದವರ ಪಾಲಿಗೆ ಪಹಲ್ಗಾಮ್‌ ದಾಳಿಯ ನಂತರ ಜೀವನವೇ ದುಸ್ತರವಾಗಿ ಬಿಟ್ಟಿದೆ. ಸದ್ಯ ಈ ಮಹಿಳೆಯರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲ, ಅದಕ್ಕಿಂತ ಮುಖ್ಯವಾಗಿ, ಭಾರತದಲ್ಲಿ ಹುಟ್ಟಿದ ಅವರ ಮಕ್ಕಳಿಗೂ ಪೌರತ್ವ ನೀಡಲಾಗುವುದಿಲ್ಲ. ಇದೆಲ್ಲದರ ಜೊತೆಗೆ ಈ ವಿವಾಹ ಬಂಧನಗಳನ್ನು ಅನುಮಾನದಿಂದಲೇ ನೋಡಬೇಕಾದ ಪರಿಸ್ಥಿತಿ ಇದೆ.

ನಮ್ಮ ದೇಶದ ಗುಪ್ತಚರ ಇಲಾಖೆ ತೀರಾ ನಿಗಾ ವಹಿಸುವ ಮೂಲಕ, ಭಯೋತ್ಪಾದನೆಯ ಕರಿನೆರಳಿನ ಹಿಂದೆ ಇರುವವರ ನಂಟನ್ನು ಬಹಿರಂಗ ಮಾಡುತ್ತಲೇ ಇದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಹೌದು. ಇನ್ನೊಂದು ಕಡೆ, ಭಟ್ಕಳದ ಸ್ಥಳೀಯ ನಿವಾಸಿಗಳಾದ ನವಾಯತ ಸಮುದಾಯದವರು, ತಾವು ಶಾಂತಿಪ್ರಿಯತೆಯನ್ನು ಮತ್ತು ಸೌಹಾರ್ದಯುತ ಬದುಕನ್ನು ಸಮರ್ಥಿಸಿದರೆ, ಮತ್ತೊಂದು ಕಡೆ, ಅವರ ಮಧ್ಯವೇ ಇರುವ ಕೆಲವೇ ಕೆಲವು ಜನರಲ್ಲಿ ಇರುವ ವಿಚ್ಛಿದ್ರಕಾರಿ ಮನಸ್ಥಿತಿ ಮತ್ತು ಉಗ್ರರ ನಂಟು ಇಡೀ ದೇಶದ ಭದ್ರತೆಯ ಪ್ರಶ್ನೆಯಾಗಿ ಸರ್ಕಾರದ ಜೊತೆ ಎಲ್ಲರನ್ನೂ ಕಾಡುತ್ತಿದೆ.

ಭಟ್ಕಳದಲ್ಲಿರುವ ನವಾಯತ ಸಮುದಾಯದವರಲ್ಲಿ ಪ್ರಸ್ತುತ ಸುಮಾರು 14 ರಿಂದ 15 ಮಂದಿ ಪಾಕಿಸ್ತಾನಿ ಮಹಿಳೆಯರು ವೈವಾಹಿಕ ಸಂಬಂಧಗಳ ಮೂಲಕ ನೆಲೆಸಿದ್ದಾರೆ ಎನ್ನುವ ಮಾಹಿತಿ ಸರ್ಕಾರಕ್ಕೆ ಇದೆ. ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು 15 ಪಾಕಿಸ್ತಾನಿಯರಲ್ಲಿ ಇವರೇ ಪ್ರಮುಖರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ರಾಜ್ಯದ ಮಟ್ಟದಲ್ಲಿ, ವೈವಾಹಿಕ ಸಂಬಂಧ ಬೆಳೆಸಿದವರೂ ಸೇರಿದಂತೆ ಒಟ್ಟಾರೆಯಾಗಿ 92 ಪಾಕಿಸ್ತಾನಿ ಪ್ರಜೆಗಳನ್ನು ನಮ್ಮಲ್ಲಿ ಗುರುತಿಸಲಾಗಿದೆ. ಈ ಪೈಕಿ ಬಹುಪಾಲು ಅಂದರೆ, 88 ಮಂದಿ ದೀರ್ಘಕಾಲದ ವೀಸಾ (LTV) ಮೇಲೆ ಭಾರತದಲ್ಲಿದ್ದಾರೆ. ಅಧಿಕೃತ ಅಂಕಿ-ಅಂಶಗಳು ತೋರಿಸುವಂತೆ, ಭಟ್ಕಳದ ನಂಟು ದೇಶದಲ್ಲಿ ಪತ್ತೆಯಾದ ಒಟ್ಟು ಪಾಕಿಸ್ತಾನಿ ಸಮುದಾಯದ ಒಂದು ಗಮನಾರ್ಹ ಭಾಗವಾಗಿದೆ. ಈ ವಿವಾಹಗಳು ಸಣ್ಣ ಸಂಖ್ಯೆಯಲ್ಲಿದ್ದರೂ, ಭಯೋತ್ಪಾದಕ ನಂಟು ಮತ್ತು ಗಲ್ಫ್ ದೇಶಗಳೊಂದಿಗಿನ ವ್ಯವಹಾರಗಳ ಸೂಕ್ಷ್ಮತೆಯ ದೃಷ್ಟಿಯಿಂದ, ಗೃಹ ಇಲಾಖೆಗಿದು ಮಹತ್ವದ ವಿಚಾರವಾಗಿದೆ.

ʻʻಅವ್ವೆ ಹಿಂದೆ ಮದಿ ಆದವರಿಗೆ ವಿಜಾ ಇತ್ತು... ಕಡಿಗೂ ಅದು ಮುಂದು ವರಿದ್ರು ಅಲ್ಲವಾ...?" ಎಂದು ಪ್ರಶ್ನೆ ಮಾಡಿದಾಗ ತಲೆಯಾಡಿಸಿದ ಅವ್ವೆ ʻʻಅದು ಎಲ್ಲಾನೂ ತಾತ್ಕಾಲಿಕ" ಎಂದಳು. ನನಗೆ ಅರ್ಥವಾಗದೇ ಇದ್ದಾಗ ಪ್ರಶ್ನಾರ್ಥಕವಾಗಿ ಅವ್ವೆಯ ಮುಖವನ್ನೇ ನೋಡುತ್ತಾ ಕುಳಿತೆ. ʻʻಮದುವೆಯಾದರಿಗೆ ಮತ್ತು ದೀರ್ಘಾವಧಿ ವೀಸಾ (LTV) ಇದ್ದವರಿಗೆ ವಿನಾಯಿತಿ ಇದು, ಅಂದಿದ್ದು ಖರೆ. ಅದು ಸದ್ಯಕ್ಕೆ ಭಟ್ಕಳದಾಗೆ ಇದ್ದ ಬ್ಯಾರೆ ದೇಶದವರಿಗೆ ಮತ್ತೆ ಅವರ ಕುಟುಂಬದವಿಗೆ ಒಂದಿಟ್ಟು ನಿರಾಳ ಆಗಿದು.. ಆದ್ರೆ ಅದಲ್ಲೆಲ್ಲಾ ಶಾಶ್ವತ ಅಲ್ಲಾ ಮಾನೆ.." ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದಳು.

ಕಾರಣ, ಇಂದು ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಈ ನಿರ್ಧಾರ ಬಂದಿದೆ. ನಾಳೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತಷ್ಟು ಹಳಸಿದರೆ, ಅಥವಾ ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಮತ್ತಷ್ಟು ಕಠಿಣ ನಿರ್ಧಾರ ತೆಗೆದುಕೊಂಡರೆ, ಈ 'ವಿನಾಯಿತಿ'ಗಳು ಯಾವ ಕ್ಷಣದಲ್ಲಿ ಬೇಕಾದರೂ ರದ್ದಾಗಬಹುದು. ಒಂದು ವೇಳೆ ದೀರ್ಘಕಾಲದ ವೀಸಾ ಹೊಂದಿದವರು ಸಹಿತ ಎಲ್ಲ ಪಾಕಿಸ್ತಾನಿ ನಾಗರಿಕರು ವಾಪಸ್ ಹೋಗಬೇಕು ಎಂದು ಆದೇಶ ಮಾಡಿದರೆ, ಮದುವೆಯಾಗಿ ಭಟ್ಕಳದಲ್ಲಿ ನೆಲೆಸಿದ ಪಾಕಿಸ್ತಾನದ ನಾಗರಿಕರು ಹಾಗೂ ಅವರ ಮಕ್ಕಳು ದೇಶ ತೊರೆಯಬೇಕಾಗುವುದಂತು ಸತ್ಯವೇ.

ಭಟ್ಕಳದಲ್ಲಿ ನೆಲೆಸಿರುವ ಪಾಕಿಸ್ತಾನಿ ಪತ್ನಿಯರಿಗೆ ಮತ್ತು ಭಾರತದಲ್ಲಿ ಜನಿಸಿದ ಅವರ ಪೌರತ್ವ ರಹಿತ ಮಕ್ಕಳಿಗೆ ಮುಂದಿನ ಭವಿಷ್ಯ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ. ಅವರು ಇಲ್ಲಿಯ ನಿವಾಸಿಗಳಾಗಲು ಸಾಧ್ಯವಿಲ್ಲ, ವಾಪಸ್ ಹೋಗಲು ಅಲ್ಲಿಯೂ ನೆಲೆ ಇಲ್ಲ. ಆರಂಭದಲ್ಲಿ ವರವಾಗಿದ್ದ ವೈವಾಹಿಕ ನಂಟು, ಇಂದು ಕೆಲವೇ ಕೆಲವು ಪುಂಡರ ವಿಚ್ಛಿದ್ರಕಾರಿ ಮನಸ್ಥಿತಿಗೆ ಅಮಾಯಕರು ಬಲಿಯಾದಂತೆ, ಅಮಾಯಕ ಸೋಗಿನಲ್ಲಿ ಇದ್ದವರಿಗೂ ಕೆಡುಗಾಲ ಹತ್ತಿರವಾಗುತ್ತಿದೆ ಎನ್ನುವ ಸೂಚನೆ ಸಿಕ್ಕಿಯಾಗಿದೆ.

ಭಟ್ಕಳದ ಕಡಲತೀರದಲ್ಲಿ ಸಂಬಂಧಗಳೇ ಮುಳುವಾಗುವ ಹಂತಕ್ಕೆ ಬಂದಿದೆ. ಮೌನವಾಗಿ ದಾಂಪತ್ಯ ಗೀತೆ ಹಾಡುತ್ತೇವೆ ಎನ್ನುವವರಿಗೆ ರಾಗಕ್ಕೆ ಸ್ವರ ಸೇರುತ್ತಿಲ್ಲ. ಕಾರಣ, ಭಯೋತ್ಪಾದನೆಯ ತಾಳಕ್ಕೆ ಕುಣಿಯುತ್ತಿರುವವರ ವಿರುದ್ಧ ಭಾರತ ದೇಶವು ಆಗಾಗ ಪಾಂಚಜನ್ಯ ಮೊಳಗಿಸುತ್ತಿದೆ. ಪರಿಣಾಮ, ಭಟ್ಕಳದ ಈ ಕುಟುಂಬಗಳು, ಇತಿಹಾಸದ ನಂಟು ನೆಮ್ಮದಿಯ ಬದಲು, ನಿರಂತರ ಆತಂಕ ಮತ್ತು ಭವಿಷ್ಯದ ಅನಿಶ್ಚಿತತೆಯಿಂದ ರಾಗ, ತಾಳ ತಪ್ಪಿದ ಬಾಳಾಗಿದೆ. (ಮುಂದುವರೆಯುವುದು)

ಶ್ರೀನಾಥ್‌ ಜೋಶಿ, ಸಿದ್ದರ 9060188081

Read More