ಅವ್ವೆ ಹೇಳಿದ್ದು-73 ಯೋಜನೆಗಳಿಗಿದ್ದ ಕಾಳಜಿ ಕದಂಬೋತ್ಸವಕ್ಕಿಲ್ಲ
ಹಚ್ಚ ಹಸಿರ ಕಾಡು-ಮೇಡುಗಳ ಮಧ್ಯೆ ಇಂದಿಗೂ ಪಂಪನ ಪದ್ಯಗಳ ಪ್ರತಿಧ್ವನಿ ಕೇಳಿಸಬೇಕಾದ ನಾಡು ನಮ್ಮದು. ಮಧುಕೇಶ್ವರನ ಎದುರಿನ ಘಂಟಾನಾದಕ್ಕೆ ಕದಂಬರ ಕಹಳೆ ಬೆಸೆದು, ಕನ್ನಡದ ಮೊದಲ ರಾಜಧಾನಿಯ ಗತವೈಭವ ಮರುಕಳಿಸಲು ಉತ್ಸವ ಕಳೆಕಟ್ಟಬೇಕಾದ ಕಾಲವಿದು. ಆದರೆ ಈ ಬಾರಿ ಬನವಾಸಿಯಲ್ಲಿ ಅದೆಲ್ಲದರ ಬದಲಿಗೆ ಒಂದು ರೀತಿಯ ನಿಗೂಢ ಮೌನದ ಜೊತೆಗೊಂದು ಆತಂಕ ಮನೆಮಾಡಿದೆ.
ಬನವಾಸಿಯ ಮಧುಕೇಶ್ವರ ದೇವಾಲಯದ ಆವರಣಕ್ಕೆ ವರದೆಯ ತಣ್ಣನೆಯ ಗಾಳಿ ಬೀಸುತ್ತಿತ್ತು. ಆಲಯದ ಅಂಗಳದ ಕಲ್ಲಿನ ಮೇಲೆ ಕುಳಿತ ಅವ್ವೆ ತನ್ನಷ್ಟಕ್ಕೆ ತಾನು ಹಳಹಳಿಸುತ್ತಿದ್ದಳು. ಅವಳ ಕೈಯಲ್ಲಿ ಕೆಲವು ಪತ್ರಿಕೆಗಳು, ಪುಸ್ತಕಗಳು ಮತ್ತು ಫೋಟೋಗ್ರಾಫ್ಗಳಿದ್ದವು. ಅವ್ವೆಯ ಮುಂದೆ ಬಂದು ಕುಕ್ಕರಗಾಲಲ್ಲಿ ಕುಳಿತ ನಾನು, ʻʻಅವ್ವೆ ಯಾಕೆ ಒಂದ ನಮೂನಿ ಇಂವೆ.. ಸೊಂಡಿ ನೋಡುಕೆ ಆಗುದಿಲ್ಲಾ ಔಡ್ಲಎಣ್ಣಿ ಕುಡ್ದಹಂಗೆ ಇದು..!?" ಎಂದು ತಮಾಷೆ ಮಾಡುತ್ತಲೇ, ಈ ಬಾರಿಯ ಕದಂಬೋತ್ಸವದ ಬಗ್ಗೆ ಜನರು ಆಡಿಕೊಳ್ಳುತ್ತಿದ್ದ ಸಂಗತಿಯನ್ನು ಅವ್ವೆಯ ಮುಂದೆ ಪ್ರಸ್ತಾಪಿಸಿದೆ.
ತುಸು ಅಸಮಾಧಾನದಲ್ಲಿಯೇ ʻʻಮಾತಾಡ್ದಿಂತೆ ಏನ ಮಾಡ್ತಿರು..? ಇದು ಪಂಪ ಓಡಾಡಿದ ಪುಣ್ಯ ಭೂಮಿ.." ಎನ್ನುತ್ತಾ ಅವ್ವೆ ಬನವಾಸಿಯ ಕುರಿತು ಮಾತನಾಡಲು ಆರಂಭಿಸಿದಳು. ನಾಡಿನಲ್ಲಿ ಕನ್ನಡದ ಅಸ್ಮಿತೆಯ ಮೊದಲ ಮೊಳಕೆಯಾಗಿದ್ದೇ ಈ ಬನವಾಸಿಯಲ್ಲಿ. ಕದಂಬರ ನಾಡಿನಲ್ಲಿ ಪ್ರತಿವರ್ಷ ಈ ಹೊತ್ತಿಗೆ ಹರ್ಷ ಮನೆಮಾಡಿರುತ್ತಿತ್ತು, ಉತ್ಸವ ಕಳೆಕಟ್ಟುತ್ತಿತ್ತು. ನಾಡಿನ ದಿಗ್ಗಜ ಸಾಹಿತಿಗಳು, ಕಲಾವಿದರು, ಸಮಸ್ತ ಕನ್ನಡಿಗರು ಇಲ್ಲಿ ಓಡಾಡಬೇಕಿತ್ತು. ಆದರೆ ಈ ಬಾರಿ ಹಬ್ಬದ ಸಡಗರವಿಲ್ಲ. ಸಾಲದಕ್ಕೆ ಜನರ ನಿದ್ದೆ ಕೆಡಿಸುವ ಯೋಜನೆಗಳ ಸದ್ದು ಕೇಳಿಸುತ್ತಿರುವ ಬಗ್ಗೆ ಅವಳು ವಿಷಾದ ವ್ಯಕ್ತಪಡಿಸಿದಳು. ಬನವಾಸಿ ಕೇವಲ ಒಂದು ಊರಲ್ಲ. 1000 ವರ್ಷಗಳ ಹಿಂದೆಯೇ ಆದಿಕವಿ ಪಂಪರಿಂದ ‘ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಹಾಡಿ ಹೊಗಳಿಸಿಕೊಂಡ ನೆಲವಿದು. ಕ್ರಿ.ಶ. 345ರಲ್ಲಿ ಮಯೂರಶರ್ಮ ಸ್ಥಾಪಿಸಿದ ಕದಂಬ ರಾಜವಂಶ, ಕನ್ನಡದ ಮೊದಲ ಸಾಮ್ರಾಜ್ಯವಾಗಿ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಮಧುಕೇಶ್ವರ ದೇವಾಲಯ, ಕದಂಬರ ವಾಸ್ತುಶಿಲ್ಪ, ಅವರ ಆಡಳಿತ ವ್ಯವಸ್ಥೆ - ಇವೆಲ್ಲವೂ ಕನ್ನಡ ನಾಡಿನ ಕಲೆ, ಸಂಸ್ಕೃತಿಗೆ ಅಡಿಪಾಯ ಹಾಕಿದವು. ಪಂಪನಂತಹ ಮಹಾಕವಿಯೇ ಈ ನಾಡಿನ ಸೌಂದರ್ಯಕ್ಕೆ ಮಾರುಹೋಗಿ, ‘ಮನುಷ್ಯನಾಗಿ ಹುಟ್ಟದಿದ್ದರೂ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ’ ಇಲ್ಲಿ ಹುಟ್ಟಬೇಕೆಂದು ಹಂಬಲಿಸಿದ್ದು ಅಚ್ಚಳಿಯದ ಇತಿಹಾಸ.
“ಅವ್ವೆ, ಕನ್ನಡದ ತಾಯಿ ಬೇರು ಇದ್ದ ಈ ನೆಲವನ್ನ ಈ ಸರಕಾರದ ಮಂದಿ ಮರ್ತಿದ್ದಾದ್ರು ಹೆಂಗೆ..?" ಎನ್ನುವ ಆತಂಕದ ಪ್ರಶ್ನೆಯನ್ನು ನಾನು ಮುಂದಿಟ್ಟೆ. ಜನವರಿ ತಿಂಗಳು ಕಳೆದು ಫೆಬ್ರವರಿ ಹತ್ತಿರವಾಗುತ್ತಿದ್ದರೂ ಬನವಾಸಿಯಲ್ಲಿ ಸಡಗರವಿಲ್ಲ. ಕದಂಬೋತ್ಸವದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕವೇ ಇಲ್ಲದ ಮೇಲೆ ಸಮಿತಿಗಳ ರಚನೆಯ ಗೊಜ್ಜಿಗೆ ಯಾರೂ ಹೋಗಿಲ್ಲ, ಅನುದಾನದ ಸ್ಪಷ್ಟತೆಯೂ ಇಲ್ಲ. ಇನ್ನೊಂದು ಕಡೆ ನೋಡಿದರೆ, ಕರಾವಳಿ ಭಾಗದ ಉತ್ಸವಗಳನ್ನಂತೂ 'ಧಾಮ್ ಧುಮ್' ಅಂತ ಅದ್ದೂರಿಯಾಗಿ ಮಾಡಿ ಮುಗಿಸಿದ್ರು. ಅಲ್ಲಿಗೆ ಹಣದ ಹೊಳೆ ಹರಿಯಿತು, ಪ್ರಚಾರದ ಹಂಗಾಮಿನ ಜೊತೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಲಾಪ್ರದರ್ಶನ ಎಲ್ಲವೂ ಜಗಮಗ! ಆದರೆ ಕನ್ನಡದ ಇತಿಹಾಸ ಆರಂಭವಾದ ಬನವಾಸಿಯ ವಿಚಾರಕ್ಕೆ ಬಂದಾಗ ಮಾತ್ರ ಈ ಮೌನವೇಕೆ..? ಎನ್ನುವ ಪ್ರಶ್ನೆಯ ಮೂಲಕವೇ ಅವ್ವೆ ಗಮನಕ್ಕೆ ತಂದೆ. ನನ್ನ ಮಾತನ್ನು ಮನ್ನಿಸಿದ ಅವ್ವೆ, ʻʻಈ ಬಲಿ ಪಂಪ ಪ್ರಶಸ್ತಿ ಸುದ್ದಿನೇ ಇಲ್ಲಪ್ಪ.. ಏನ್ ಪ್ಲಾನ್ ಮಾಡುಕೆ ತಾಂಗೆರು ಅಂಬುದೇ ತಿಳುದಿಲ್ಲ" ಎಂದು ಕಡ್ಡಿ ತುಂಡು ಮಾಡಿದಂತೆ ಉಸುರಿದಳು. “ಅವ್ವೆ... ಈ ಪಂಪ ಪ್ರಶಸ್ತಿ ಅಂಬುದು ನಮ್ಮ ನಾಡಿನ ಅತೀ ದೊಡ್ಡ ಪ್ರಶಸ್ತಿ ಅಲ್ವಾ? ಅದರ ಕಿಮ್ಮತ್ತೂ ತಿಳಿಯಲ್ಲ ಅಂದ್ರೆ ಏನ ಹೇಳೋದು?" ಎಂದೆ.
ತಲೆದೂಗಿದ ಅವ್ವೆ, "ನೋಡ ಸೀನಾ, ಈ ಪಂಪ ಪ್ರಶಸ್ತಿ ಬರಿ ಒಂದು ಪ್ರಶಸ್ತಿಯಲ್ಲನೋ.. ಅದು ನಮ್ಮ ಸಾಹಿತ್ಯದ ಕಿರೀಟ.." ಎನ್ನುತ್ತಾ ಮಾತು ಮುಂದುವರಿಸಿದಳು. 1987ರಲ್ಲಿ ಆರಂಭವಾದ ಈ ಪ್ರಶಸ್ತಿ ಮೊದಲು ದಕ್ಕಿದ್ದು ಜ್ಞಾನಪೀಠ ಪುರಸ್ಕೃತ ಕುವೆಂಪು ಅವರಿಗೆ. ಆಮೇಲೆ ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಎಂ.ಎಂ. ಕಲಬುರ್ಗಿ ಅವರಂಥ ಮಹಾನ್ ಚೇತನಗಳು ಬನವಾಸಿಯ ಮಣ್ಣಿನಲ್ಲಿ ನಿಂತು ಈ ಗೌರವ ಸ್ವೀಕರಿಸಿದ್ದಾರೆ. 5 ಲಕ್ಷ ರೂಪಾಯಿ ನಗದು ಒಳಗೊಂಡ ಈ ಅತ್ಯುನ್ನತ ಸನ್ಮಾನಕ್ಕಾಗಿ ಸಾಹಿತ್ಯ ವಲಯ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತದೆ. ಆರಂಭದಿಂದಲೂ ಸ್ವತಃ ರಾಜ್ಯದ ಮುಖ್ಯಮಂತ್ರಿಗಳಿಂದಲೇ ಉದ್ಘಾಟನೆಯಾಗುವುದು ಈ ಉತ್ಸವದ ಸಂಪ್ರದಾಯ. ಆದರೆ ಈ ಬಾರಿ ಸಿದ್ಧತೆಯ ಶೂನ್ಯತೆ ಜನರಲ್ಲಿ ನಿರಾಶೆ ಮೂಡಿಸಿದೆ ಎಂಬ ವಾಸ್ತವವನ್ನು ಅವ್ವೆ ತೆರೆದಿಟ್ಟಳು. ಅವ್ವೆಯ ಮುಖದಲ್ಲಿ ಈಗ ಅಸಮಾಧಾನ ಎದ್ದು ಕಾಣುತ್ತಿತ್ತು. ʻʻಇವ್ರಿಗೆಲ್ಲಾ ಪ್ರಕೃತಿ, ಸಂಸ್ಕೃತಿ ಸತ್ಯಾನಾಸ್ ಆದ್ರೂ ಚಿಂತ್ತಿಲ್ಲ. ಇಂದೆ ಕದಂಬೋತ್ಸವ ಮಾಡುಕೆ ದುಡ್ಡಿಲ್ಲ ಅಂಬೋ ಸರ್ಕಾರಕ್ಕೆ ಅಘನಾಶಿನಿ, ಬೇಡ್ತಿ ಕೊಳ್ಳಕ್ಕೆ ಕೈ ಹಾಕೋಕೆ ಎಲ್ಲಿಂದಾರ್ಬೆ ಧೈರ್ಯ ಬಂತ್ಯಾರ್ಬಲಾ..? ಘಟ್ಟದ ಮ್ಯಾನೆ ಈ ʻಶರಾವತಿ ಪಂಪ್ ಸ್ಟೋರೇಜ್ ಯೋಜನೆʼ, ʻನದಿ ತಿರುವು ಯೋಜನೆʼ ಅಂಬುದು ಕಣಾ.. ಘಟ್ಟದ ಕೆಳಗೆ ವಾಣಿಜ್ಯ ಬಂದರು, ನೌಕಾನೇಲಿ, ಕೈಗಾ ಹಿಂಗೆ ಒಂದಾ ಎರಡಾ..? ಎಲ್ಲಾದ್ರಿಂದ ನಮ್ಮ ನಿದ್ದಿ ಹಾಳ ಮಾಡಿರು. ಒಂದ ತಾಮೆ ಉತ್ಸವ ಇನ್ನೂ ಇಲ್ಲಾ ಅಂಬುದು.. ಮತ್ತೊಂದ ತಾಮೆ ಈ ಯೋಜನಿ ದಾರ್ಬೆ ಮಾನಿ-ಮಠ ಹೊತಿದು ಅಂಬುದು ಕೇಳಿ ಎಲ್ಲಾರದೂ ನಿದ್ದಿನೇ ಹಾಳಾಗಿದು.. ಹಬ್ಬ ಮಾಡುವ ಬದ್ಲಿಗೆ ಇಸಾ ಕೊಡುಕೆ ತಾಂಗೆರು..!" ಎಂದು ಕಿಡಿಕಾರಿದಳು. “ಕರಾವಳಿ ಉತ್ಸವಕ್ಕೆ ಇದ್ದ ಕಾಳಜಿ, ಕದಂಬೋತ್ಸವಕ್ಕೆ ಯಾಕಿಲ್ಲ?" ಎಂದು ನಾನು ಪ್ರಶ್ನಿಸಿದೆ. ಉಸ್ತುವಾರಿ ಸಚಿವರು ‘ನೋಡುತ್ತೇವೆ, ಮಾಡುತ್ತೇವೆ’ ಎಂಬ ಹೇಳಿಕೆಗಷ್ಟೇ ಸೀಮಿತವಾಗಿದ್ದಾರೆ. ಶಾಸಕರು ಪತ್ರ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೋರಾಟಗಾರರ ಹಾದಿಯೇ ಬೇರೆಯಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ, ಜನರಿಗೆ ತಮ್ಮೂರು ಉಳಿಸಿಕೊಳ್ಳಬೇಕೋ ಅಥವಾ ಉತ್ಸವಕ್ಕಾಗಿ ಆಗ್ರಹಿಸಬೇಕೋ ಎಂಬ ಗೊಂದಲ ಕಾಡುತ್ತಿದೆ. ಬನವಾಸಿ ಕೇವಲ ಪ್ರವಾಸಿ ತಾಣವಲ್ಲ, ಅದು ಕನ್ನಡದ ಜೀವಂತ ಇತಿಹಾಸ. ಉತ್ಸವದ ವಿಳಂಬ ಕೇವಲ ಕಾರ್ಯಕ್ರಮದ ವಿಫಲತೆಯಲ್ಲ, ಅದು ಸಾಂಸ್ಕೃತಿಕ ಪರಂಪರೆಯ ಕಡೆಗಣನೆ ಎಂದು ನಾನು ಅವ್ವೆಯ ಬಳಿ ಅಲವತ್ತುಕೊಂಡೆ.
ಅವ್ವೆ ದೀರ್ಘವಾಗಿ ನಿಟ್ಟುಸಿರು ಬಿಟ್ಟು ಅಂದಳು, "ಬನವಾಸಿ ಅಂಬುದು ಕನ್ನಡದ ಕಾಶಿ. ಇಲ್ಲಿ ಮುಖ್ಯಮಂತ್ರಿಗಳು ಬಂದಕಾರೆ ದೀಪ ಹಚ್ಚೋದು ಒಂದು ಪರಂಪರಿ. ಅದ ಮರೆತ್ರೆ ನಾವು ಮಯೂರಶರ್ಮನಿಗೆ, ಪಂಪನಿಗೆ ಮಾಡೋ ದೊಡ್ಡ ದ್ರೂಹಾ ಮರಾಯಾ.." ಎನ್ನುತ್ತಾ, ಜನಪ್ರತಿನಿಧಿಗಳು ಯೋಜನೆಗಳ ಮಜಾ ನೋಡುವುದನ್ನು ಬಿಟ್ಟು, ಮಣ್ಣಿನ ಸೊಗಡನ್ನು ಉಳಿಸುವತ್ತ ಗಮನ ಕೊಡಲಿ ಎಂದಳು. ಸರ್ಕಾರ ಕೂಡಲೇ ಎಚ್ಚೆತ್ತು, ಪಂಪನ ಕಾವ್ಯದ ಸೊಗಡು ಮತ್ತು ಕದಂಬರ ರಣಕಹಳೆ ಮತ್ತೊಮ್ಮೆ ಬನವಾಸಿಯಲ್ಲಿ ಮೊಳಗುವಂತೆ ಮಾಡಲಿ ಎಂಬ ಹಾರೈಕೆಯೊಂದಿಗೆ ಮಾತು ಮುಗಿಸಿದಳು.
(ಮುಂದುವರೆಯುವುದು)
ಶ್ರೀನಾಥ್ ಜೋಶಿ, ಸಿದ್ದರ 9060188081
