CreamA Cream article
Article

ಬಳ್ಳಾರಿಯಲ್ಲಿ ಆಯೋಜಿತವಾಗಿರುವ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಲಿದೆ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಭರವಸೆ

ಕಸಾಪ

ಬಳ್ಳಾರಿಯಲ್ಲಿ ಆಯೋಜಿತವಾಗಿರುವ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚರಿತ್ರೆ ಸೃಷ್ಟಿಸಲಿದೆ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಭರವಸೆ

ಬೆಂಗಳೂರು: ಬಳ್ಳಾರಿಯಲ್ಲಿ ಆಯೋಜಿತವಾಗಿರುವ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊಣೆಗಾರಿಕೆ ತಮಗೆ ದೊರೆತಿರುವುದು ಅದೃಷ್ಟವೆಂದು ಹೇಳಿಕೊಂಡ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್. ಇದನ್ನು ಚಾರಿತ್ರಿಕವಾಗಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅವರು ಇಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ, 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಮಾಧ್ಯಮ ಸಂಚಾಲಕರಾದ ಎನ್. ಎಸ್. ಶ್ರೀಧರಮೂರ್ತಿ, ಬಳ್ಳಾರಿಯ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ, ಕಾರ್ಯ ನಿರ್ವಹಣಾಧಿಕಾರಿ ಮೊಹಮದ್ ಹ್ಯಾರಿಸ್ ಸುಮೇರ್, ಪೋಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಸಚಿವರ ಆಪ್ತ ಸಿಬ್ಬಂದಿ ಭಾಗವಹಿಸಿದ್ದರು.

ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸವನ್ನು ವಿವರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಸಮ್ಮೇಳನಗಳಿರುವ ಚಾರಿತ್ರಿಕ ಪರಂಪರೆಗೆ ಒತ್ತು ನೀಡಿ, ಇದುವರೆಗೂ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಐದು ಸಮ್ಮೇಳನಗಳು ನಡೆದಿದ್ದು ಇದು ಆರನೆಯದು ಮತ್ತು ಸ್ವಾತಂತ್ರ್ಯಾ ನಂತರ ಎರಡನೆಯದು ಎನ್ನುವ ವಿವರಗಳನ್ನು ನೀಡಿ 68 ವರ್ಷಗಳ ನಂತರ ಬಳ್ಳಾರಿಯಲ್ಲಿ ಮತ್ತೆ ಸಮ್ಮೇಳನ ನಡೆಯುತ್ತಿರುವ ಮಹತ್ವವನ್ನೂ ವಿವರಿಸಿದರು. ಈಗಾಗಲೇ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೂಕರ್ ಪುರಸ್ಕಾರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ಬಾನು ಮುಷ್ತಾಕ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿರುವ ವಿವರವನ್ನು ನಾಡೋಜ ಡಾ. ಮಹೇಶ ಜೋಶಿಯವರು ಅವರು ಸಭೆಯ ಗಮನಕ್ಕೆ ತಂದರು. ಆಗ ಅದಕ್ಕೆ ಸ್ಪಂದಿಸಿದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು ಈ ಆಯ್ಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿರುವ ಐದನೆಯ ಮಹಿಳೆ ಮತ್ತು ಮೊದಲ ಅಲ್ಪಸಂಖ್ಯಾಂತ ಮಹಿಳೆ ಆಗಲಿದ್ದಾರೆ ಎಂಬ ಸಂಗತಿ ಸಂತೋಷ ತರುವಂತಹದು, ಬಳ್ಳಾರಿಯಲ್ಲಿ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ನನ್ನ, ನಾಡೋಜ ಡಾ. ಮಹೇಶ ಜೋಶಿ ಅವರ ಮತ್ತು ಬಾನು ಮುಷ್ತಾಕ್ ಅವರ ಅದೃಷ್ಟ ಎಂದು ಬಣ್ಣಿಸಿದರು.

ತಮ್ಮನ್ನು ಮೂಲತಃ ಕನ್ನಡಿಗ ಎಂದು ಕರೆದು ಕೊಂಡ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರು, ಕನ್ನಡಿಗರ ಹೆಮ್ಮೆಯ ಉತ್ಸವವನ್ನು ಚಾರಿತ್ರಿಕವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿ, ಇದಕ್ಕೆ ಜಿಲ್ಲಾಡಳಿತವನ್ನು ಸಂಪೂರ್ಣ ಸಜ್ಜುಗೊಳಿಸಿ ಸರ್ಕಾರದ ಕಡೆಯಿಂದ ಎಲ್ಲಾ ನೆರವನ್ನು ದೊರಕಿಸುವ ಭರವಸೆಯನ್ನು ನೀಡಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಇನ್ನಷ್ಟು ನಿಕಟವಾಗಿ ಕೆಲಸ ಮಾಡಲಿದೆ ಎಂದರು. ಇದೇ ಸಂದರ್ಭದಲ್ಲಿ 2012ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದ ಜಮೀರ್ ಅಹ್ಮದ್ ಖಾನ್ ಅವರಿಗೆ ಸಾಂಕೇತಿಕವಾಗಿ ವಿಶೇಷ ಗುರುತಿನ ಚೀಟಿಯನ್ನು ನೀಡಲಾಯಿತು. ಬಳ್ಳಾರಿಯ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರು ಮಾತನಾಡಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದಾಗಿ ತಿಳಿಸಿದರು. ಸಚಿವರು ಮತ್ತು ಜಿಲ್ಲಾ ವರಿಷ್ಠರ ತಂಡ ಕನ್ನಡ ಸಾಹಿತ್ಯ ಪರಿಷತ್ತಿನ ಹೊರ ಮತ್ತು ಒಳ ಆವರಣವನ್ನು ವೀಕ್ಷಿಸಿ ಪರಂಪರೆ ಮತ್ತು ಆಧುನಿಕತೆಯನ್ನು ಬೆಸೆದಿರುವ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ನಾಡೋಜ ಡಾ. ಮಹೇಶ ಜೋಶಿ ಅವರ ಅವಧಿಯಲ್ಲಿ ಆಗಿರುವ ಸುಧಾರಣೆಗಳನ್ನು ಕಂಡು ಶ್ಲಾಘನೆಯನ್ನು ವ್ಯಕ್ತಪಡಿಸಿ ಸಂಪೂರ್ಣ ಸಹಕಾರದ ಭರವಸೆ ನೀಡಿತು.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More