CreamA Cream article
Article

ಕನ್ನಡ ಸ್ಪಷ್ಟತೆಗೆ ಕೆ.ಎಸ್.ಅಶ್ವಥ್ ಮಾದರಿ: -ನಾಡೋಜ ಡಾ.ಮಹೇಶ ಜೋಶಿ

ಕಸಾಪ

ಕನ್ನಡ ಸ್ಪಷ್ಟತೆಗೆ ಕೆ.ಎಸ್.ಅಶ್ವಥ್ ಮಾದರಿ: -ನಾಡೋಜ ಡಾ.ಮಹೇಶ ಜೋಶಿ

ಚಾಮಯ್ಯ ಮೇಷ್ಟ್ರ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನಿಂತ ಕೆ.ಎಸ್.ಅಶ್ವಥ್‌ ತಮ್ಮ ಸ್ಪಷ್ಟ ಕನ್ನಡ ಉಚ್ಚಾರಣೆಗೂ ಪ್ರಖ್ಯಾತರಾಗಿದ್ದರು. ಈ ಅರ್ಥದಲ್ಲಿ ಅವರು ಕನಿಷ್ಟ ಮೂರು ಪೀಳಿಗೆಗೆ ಕನ್ನಡ ಕಲಿಸಿದ ಮೇಷ್ಟ್ರೂ ಕೂಡ ಹೌದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಕೆ.ಎಸ್.ಅಶ್ವಥ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕೆ.ಎಸ್.ಅಶ್ವಥ್ ಅವರ ನೆನಪಾದ ಕೂಡಲೇ ನನಗೆ ನೆನಪಾಗುವ ಗೀತೆ ‘ತಾಯೆ ಶಾರದೆ ಲೋಕಪೂಜಿತೆ’, ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮಕ್ಕೆ ನಾನು ಕರೆದಾಗ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಪ್ರತಿ ಹಾಡುಗಳನ್ನು ಆನಂದಿಸುತ್ತಿದ್ದರು. ಎಲ್ಲಿಯೂ ತಾನು ಸಿನಿಮಾ ಸ್ಟಾರ್ ಎಂಬ ಅಹಂಕಾರವನ್ನು ತೋರಿಸಿದವರಲ್ಲ. ಜನ ಸಾಮಾನ್ಯರಲ್ಲಿ ಸಹಜವಾಗಿ ಬೆರೆತು ಹೋಗುತ್ತಿದ್ದರು, ಅವರ ಕುರಿತ ವಿಶೇಷ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ಮಾಡಿದಾಗ ಅವರು ಎರಡು ದಿನ ಮೊದಲೇ ಬಂದಿದ್ದರು. ಅವರ ಹೆಸರನ್ನು ಕೇಳಿದ ಕೂಡಲೇ ಜನ ಕಿಕ್ಕಿರಿದು ಸೇರುತ್ತಿದ್ದರು. ನಾಡಿನಾದ್ಯಂತ ಅವರಿಗೆ ಅಭಿಮಾನಿಗಳಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ತಮ್ಮ ಒಡನಾಟದ ನೆನಪುಗಳನ್ನು ಹಂಚಿ ಕೊಂಡರು. ʼಸ್ತ್ರೀ ರತ್ನʼ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಅಶ್ವಥ್ ಅವರಿಗೆ ಶಿವಶರಣೆ ನಂಬಿಯಕ್ಕ, ಕೋಕಿಲ ವಾಣಿ ಎರಡು ಚಿತ್ರಗಳು ಒಟ್ಟೊಟ್ಟಿಗೇ ಸಿಕ್ಕವು.ಚಿತ್ರರಂಗದಲ್ಲಿಯೇ ಉಳಿಯಬಹುದು ಎನ್ನುವ ನಂಬಿಕೆ ಬಂದಿತು. ಅವಕಾಶಗಳನ್ನು ಹುಡುಕಿ ಮದ್ರಾಸಿಗೆ ಹೊರಟೇ ಬಿಟ್ಟರು ಎಂದು ಇತಿಹಾಸವನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ವರ್ಷಕ್ಕೆ ಐದಾರು ಚಿತ್ರಗಳು ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಚಿತ್ರರಂಗವನ್ನೇ ನಂಬಿ ಬದುಕುವುದು ಸುಲಭವಾಗಿರಲಿಲ್ಲ. ಆದರ್ ಅಶ್ವಥ್ ಅವರ ತಾಳ್ಮೆಯೇ ಅವರನ್ನು ಗೆಲ್ಲಿಸಿತು. ಆಗೀಗ ನಾಟಕಗಳನ್ನು ಮಾಡುತ್ತಾ ಬದುಕಿನಲ್ಲಿ ಗಟ್ಟಿಯಾದರು. ನಂದಾದೀಪ, ಬೆಳ್ಳಿ ಮೋಡಗಳಲ್ಲಿ ತಂದೆಯ ಪಾತ್ರ ಸಿಕ್ಕಿತು. ಸಿಕ್ಕ ಅವಕಾಶಗಳಿಗೆ ಜೀವ ತುಂಬಿದರು. ನ್ಯಾಯವೇ ದೇವರು, ಉಯ್ಯಾಲೆ, ಕಸ್ತೂರಿ ನಿವಾಸ, ಸರ್ವಮಂಗಳ, ನಾಗರ ಹಾವು ಹೀಗೆ ವೈವಿದ್ಯಮಯ ಪಾತ್ರಗಳ ಮೂಲಕ ಬೆಳೆಯುತ್ತಾ ಹೋದರುಎಂದು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಅವರ ಅಂತ್ಯಸಂಸ್ಕಾರದಲ್ಲಿ ಹೆಗಲು ನೀಡಿದ ಘಟನೆಯನ್ನು ನೆನಪು ಮಾಡಿಕೊಂಡು ಭಾವುಕರಾದರು. ಕನ್ನಡ ಸಾಹಿತ್ಯ ಪರಿಷತ್ತು ಈ ವರ್ಷ ಶತಮಾನೋತ್ಸವ ಆಚರಿಸಿ ಕೊಳ್ಳುತ್ತಿರುವ ಸಾಧಕರ ಸ್ಮರಣೆಯನ್ನು ವಿಶಿಷ್ಟವಾದ ರೀತಿಯಲ್ಲಿ ಮಾಡಲಿದೆ ಎಂದೂ ನಾಡೋಜ ಡಾ.ಮಹೇಶ ಜೋಶಿ ಈ ಸಂದರ್ಭದಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಅಶ್ವಥ್ ಅವರ ನೆನಪುಗಳನ್ನು ಹಂಚಿ ಕೊಂಡು ‘ಅಶ್ವಥ್.. ಅಪ್ರತಿಮ ಸಾಹಿತ್ಯ ಪ್ರೇಮಿಯಾಗಿದ್ದರು. ಕುಮಾರ ವ್ಯಾಸ ಭಾರತದ ಕುರಿತು ಉತ್ತಮ ಒಳನೋಟಗಳು ಅವರಿಗದ್ದವು. ಮಾಸ್ತಿ-ಅ.ನ.ಕೃ-ಭೈರಪ್ಪ ಅವರಿಗೆ ಪ್ರಿಯರಾದ ಲೇಖಕರಾಗಿದ್ದರು. ಸೆಟ್‌ ನಲ್ಲಿ ಒಂದು ಪುಸ್ತಕ ಹಿಡಿದು ಮೂಲೆ ಸೇರುವುದನ್ನು ನಾನು ಬಹಳ ಸಲ ನೋಡಿದ್ದೇನೆ.ಕ್ರಿಕೆಟ್ ಅವರಿಗೆ ಪ್ರಿಯವಾದ ಇನ್ನೊಂದು ಸಂಗತಿ, ಅವರ ಬಳಿ ಪುಟ್ಟ ಟ್ರಾನ್ಸಿಸ್ಟರ್ ಇತ್ತು. ಅದನ್ನು ಸದಾ ಕಿವಿಗಂಟಿಸಿ ಕೊಂಡಿರುತ್ತಿದ್ದರು. ಅವರು ಟೆಸ್ಟ್ ಕ್ರಿಕೆಟ್ ಪ್ರಿಯರು, ಜಿ.ಆರ್.ವಿಶ್ವನಾಥ್ ಅವರ ಅಪ್ಪಟ ಅಭಿಮಾನಿ... ಸಂಗೀತದಲ್ಲಿ ಅವರಿಗೆ ಆಸಕ್ತಿ ಮಾತ್ರವಲ್ಲ ಪರಿಣತಿ ಕೂಡ ಇತ್ತು. ಹಿಂದೂಸ್ತಾನಿ, ಕರ್ನಾಟಕಿ ಎರಡನ್ನೂ ಬಲ್ಲ ಅವರಿಗೆ ತ್ಯಾಗರಾಜರ ಪಂಚರತ್ನ ಕೀರ್ತನೆಗಳು ಬಹಳ ಇಷ್ಟ. ಶುದ್ದ ಸಾವೇರಿ, ಅಭೋಗಿ, ಮೋಹನ, ಹಿಂದೋಳ ಪ್ರಿಯವಾದ ರಾಗಗಳು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಮತ್ತು ಪರಿಷತ್ತಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More