ಶನಿವಾರ, ಏಪ್ರಿಲ್ 5ರಂದು ಹಿರಿಯ ವಿದ್ವಾಂಸ ಪ್ರೊ.ಅ.ರಾ.ಮಿತ್ರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ‘ವಿದ್ಯಾರಣ್ಯ ದತ್ತಿ’ ಪ್ರಶಸ್ತಿ ಪ್ರದಾನವನ್ನು ಹಿರಿಯ ವಿದ್ವಾಂಸ ಪ್ರೊ.ಅ.ರಾ.ಮಿತ್ರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಳಿಗ್ಗೆ 11-00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಹಿರಿಯ ಜನಪದ ತಜ್ಞರು ಮತ್ತು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರೂ ಆದ ನಾಡೋಜ ಡಾ.ಗೊ.ರು.ಚನ್ನಬಸಪ್ಪ ನವರು ಪ್ರಶಸ್ತಿ ಪ್ರದಾನ ಮಾಡಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶ್ರಾಂತ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿದ್ಯಾರಣ್ಯ ಪ್ರತಿಷ್ಟಾನದ ಸಂಸ್ಥಾಪಕ ಅಧ್ಯಕ್ಷರಾದ ಎಂ.ವಿ.ಸತ್ಯನಾರಾಯಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಗೌರವದಿಂದ ವಿದ್ಯಾರಣ್ಯ ಪ್ರತಿಷ್ಠಾನವು ಇಪ್ಪತ್ತು ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ದತ್ತಿಯನ್ನು ಇರಿಸಿದ್ದು, ಇದರಿಂದ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸ ಬೇಕೆಂದು ತಿಳಿಸಿರುತ್ತಾರೆ. ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ, ಕೆ.ಎಸ್.ನರಸಿಂಹ ಸ್ವಾಮಿ ಸ್ಮಾರಕ: ವಿದ್ಯಾರಣ್ಯ ಕನ್ನಡ ಕಾವ್ಯ ಪ್ರಶಸ್ತಿ, ಪ್ರೊ.ಜಿ.ವೆಂಕಟಸುಬ್ಬಯ್ಯ ಸ್ಮಾರಕ: ವಿದ್ಯಾರಣ್ಯ ಕನ್ನಡ ಭಾಷಾ ಪ್ರಶಸ್ತಿ, ಹಾರನಹಳ್ಳಿ ಸ್ಮಾರಕ: ವಿದ್ಯಾರಣ್ಯ ಕನ್ನಡ ಆಡಳಿತ ಪ್ರಶಸ್ತಿ, ಟಿ.ಎಸ್.ರಾಮಚಂದ್ರ ರಾವ್ ಸ್ಮಾರಕ: ವಿದ್ಯಾರಣ್ಯ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿ ಇವುಗಳನ್ನು ಆವರ್ತವಾಗಿ ನೀಡ ಬೇಕೆಂದು ದತ್ತಿದಾನಿಗಳು ಅಪೇಕ್ಷಿಸಿರುತ್ತಾರೆ.
ವಿದ್ಯಾರಣ್ಯ ಪ್ರತಿಷ್ಠಾನ ಪುರಸ್ಕಾರದ ಆವರ್ತವು ‘ಅ.ನ.ಕೃಷ್ಣರಾಯರ ಸ್ಮಾರಕ: ವಿದ್ಯಾರಣ್ಯ ಸಮಗ್ರ ಸಾಹಿತ್ಯ ಪ್ರಶಸ್ತಿ’ ಯಿಂದ ಆರಂಭವಾಗಿದ್ದು 2025ನೆಯ ಸಾಲಿನ ಈ ಪುರಸ್ಕಾರಕ್ಕೆ ಹಿರಿಯ ವಿದ್ವಾಂಸ, ಪ್ರಾಧ್ಯಾಪಕ, ಚಿಂತಕ, ವಿಮರ್ಶಕ, ಮಾತುಗಾರ, ಸಜ್ಜನ ಪ್ರೊ.ಅ.ರಾ.ಮಿತ್ರ ಅವರನ್ನುಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕುಮಾರ ವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವಗಳ ಮೂಲಕ ಕರ್ನಾಟಕದ ಮನೆ ಮನೆಯಲ್ಲಿಯೂ ಹೆಸರಾಗಿರುವ ಮಿತ್ರ ಅವರಿಗೆ ಈಗ ತೊಂಬತ್ತು ವರ್ಷ. ಇಂದಿಗೂ ಎಲ್ಲರಲ್ಲಿಯೂ ಉತ್ಸಾಹ ತುಂಬುವ ಅವರು ಚಿರಯುವಕರು. ಅವರ ‘ಛಂದೋಮಿತ್ರ’ ಸುಲಭವಾಗಿ ಎಲ್ಲರೂ ಕನ್ನಡ ಛಂದಸ್ಸನ್ನು ಅರಿಯಲು ನೆರವಾಯಿತು. ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಪ್ರೊ.ಅ.ರಾ.ಮಿತ್ರರು ‘ಪಂಪ ಭಾರತ ಸಂಗ್ರಹ’ಮತ್ತು ‘ಅಜಿತನಾಥ ಪುರಾಣ’ವನ್ನು ಸಂಪಾದಿಸಿದ್ದಾರೆ. ‘ಮಹಾ ಭಾರತದ ಪಾತ್ರಸಂಗತಿಗಳು’ ಅವರ ಇನ್ನೊಂದು ಮಹತ್ವದ ಕೃತಿ. ‘ನಾನೇಕೆ ಕೊರೆಯುತ್ತೇನೆ’ ‘ಆರತಕ್ಷತೆ’ಅವರ ಸಮಗ್ರ ಪ್ರಬಂಧಗಳ ಎರಡು ಸಂಪುಟಗಳು. ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿಯೂ ಮಹತ್ವದ ಕೃತಿಗಳನ್ನು ಪ್ರಕಟಿಸಿರುವ ಪ್ರೊ.ಅ.ರಾ.ಮಿತ್ರ ಸಾಹಿತ್ಯದ ಎಲ್ಲಾ ಕ್ಷೇತ್ರಗಳಿಗೂ ಗಣನೀಯ ಕೊಡುಗೆಗಳನ್ನು ನೀಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ –ಕನ್ನಡ ನಿಘಂಟು ರೂಪುಗೊಳ್ಳುವುದರಲ್ಲಿಯೂ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು.
ಸಾಂಸ್ಕೃತಿಕ ಮಹತ್ವದ ಈ ಕಾರ್ಯಕ್ರಮದ ಕುರಿತು ವರದಿಯನ್ನು ನೀಡಿ ಕನ್ನಡಾಭಿಮಾನಿಗಳು ಭಾಗವಹಿಸಲು ನೆರವಾಗುವುದರ ಜೊತೆಗೆ ಕಾರ್ಯಕ್ರಮದ ವರದಿಗಾಗಿ ನಿಮ್ಮ ವರದಿಗಾರರನ್ನು ಮತ್ತು ಛಾಯಾಗ್ರಾಹಕರನ್ನು ಕಳುಹಿಸಿ ಕೊಡ ಬೇಕೆಂದು ವಿನಂತಿಸಲಾಗಿದೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
