ಹಿರಿಯ ವಿದ್ವಾಂಸ ಡಾ.ಪಿ.ವಿ.ನಾರಾಯಣ ಅವರ ನಿಧನಕ್ಕೆ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ
ಕನ್ನಡ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ, ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡು ಬಂದಿದ್ದ ಡಾ.ಪಿ.ವಿ.ನಾರಾಯಣ ಅವರು ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡಪರ ಹೋರಾಟಗಾರರು. ಕನ್ನಡದ ಹಿರಿಮೆಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸಿದ ಅವರ ಅಗಲುವಿಕೆಯಿಂದ ಕನ್ನಡ ವಿದ್ವತ್ ಲೋಕಕ್ಕೆ ಅಪಾರ ಹಾನಿಯಾಗಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಅವರು ಇಂದು ನಿಧನರಾದ ಡಾ.ಪಿ.ವಿ.ನಾರಾಯಣ ಅವರ ಜಯನಗರದ ಸ್ವಗೃಹಕ್ಕೆ ಭೇಟಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವವನ್ನು ಸಲ್ಲಿಸಿದರು.
ಪಿ.ವಿ. ನಾರಾಯಣ 1942ರ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಿ. ವೆಂಕಪ್ಪಯ್ಯ. ತಾಯಿ ನರಸಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಸಿದ ಅವರು, ತುಮಕೂರಿನ ಸರಕಾರಿ ಕಾಲೇಜಿನಿಂದ ಬಿ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. "ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು ಎಂದು ಅವರ ಜೀವನ ಯಾನವನ್ನು ನಾಡೋಜ ಡಾ.ಮಹೇಶ ಜೋಶಿ ತಮ್ಮ ನುಡಿ ನಮನದಲ್ಲಿ ಸ್ಮರಿಸಿ ಕೊಂಡಿದ್ದಾರೆ.
ಪಿ.ವಿ. ನಾರಾಯಣ ರೂರಲ್ ಇನ್ಸ್ಟಿಟ್ಯೂಟ್ ಹನುಮನಮಟ್ಟಿ, ವಿದ್ಯೋದಯ ಹೈಸ್ಕೂಲ್ ಟಿ. ನರಸೀಪುರ, ಅದೋನಿಯ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಮುಂತಾದುವುಗಳಲ್ಲಿ ಬೋಧನಾನುಭವ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ. (ಸಂಜೆ) ತರಗತಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂ.ಎ. ತರಗತಿಗಳಿಗೆ ಬೋಧನೆ ಮಾಡಿದರು. ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಪ್ರೊ.ಜಿ.ವೆಂಕಟಸುಬ್ಬಯ್ಯನವರ ನಿಕಟವರ್ತಿಗಳಾದ ಅವರು ವಿಜಯ ಕಾಲೇಜು ಬೃಹತ್ತಾಗಿ ಬೆಳೆಯುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿ ಕೊಂಡಿ ಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಬಂಧವನ್ನು ಇಟ್ಟು ಕೊಂಡಿದ್ದ ಡಾ.ಪಿ.ವಿ.ನಾರಾಯಣ ಅವರು ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅವರು ಕುಮುದೇಂದು ರಾಮಾಯಣ, ಪದ್ಮಿನಿ ಪರಿಣಯ, ಸುವರ್ಣ ಭಾರತಿ ಕೃತಿಗಳನ್ನು ಪರಿಷತ್ತಿಗಾಗಿ ಸಂಪಾದಿಸಿ ಕೊಟ್ಟಿದ್ದರು. ಅವರು ಸಂಪಾದಿಸಿದ ಚಂಪೂ ನುಡಿಗನ್ನಡಿ, ಹಳೆಗನ್ನಡ ಪದ ಸಂಪದಗಳು ಪರಿಷತ್ತಿನ ಜನಪ್ರಿಯ ಪ್ರಕಟಣೆಗಳಾಗಿದ್ದು ಹಲವು ಮುದ್ರಣಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದಾರೆ. ಪರಿಷತ್ತಿನ ಬೆಳವಣಿಗೆ ಕುರಿತು ಸದಾ ಮಾರ್ಗದರ್ಶನವನ್ನು ನೀಡುತ್ತಿದ್ದರು ಎಂದು ಡಾ.ಪಿ.ವಿ.ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿ ಕೊಂಡಿದ್ದಾರೆ.
ಡಾ. ಪಿ. ವಿ. ನಾರಾಯಣ ಅವರು ಕನ್ನಡ ಪರ ಚಳವಳಿ ಮತ್ತು ಚಟುವಟಿಕೆಗಳಿಗೆ ಸದಾ ಮುಂದು. ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಸಂಚಾಲಕರಾಗಿ, ಸಾಹಿತಿ ಕಲಾವಿದರ ಬಳಗದ ಸಂಚಾಲಕರಾಗಿ, ಕನ್ನಡ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದವರು. ಸಾಹಿತ್ಯ ಸಂಬಂಧಿತ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧ ಮಂಡನೆ ಮಾಡಿದ್ದಾರೆ. ಬಿ.ಎಂ.ಶ್ರೀ ಪ್ರತಿಷ್ಠಾನ ಮತ್ತು ಉದಯಭಾನು ಕಲಾ ಸಂಘ ಸಂಸ್ಥೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅವರು ಬಿ.ಎಂ.ಶ್ರೀ ಪ್ರತಿಷ್ಟಾನದ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.
ಪ್ರಶಸ್ತಿಗಳನ್ನು ಸ್ವೀಕರಿಸಿದಿರುವ ತಾತ್ವಿಕ ನಿರ್ಧಾರಕ್ಕೆ ಬಂದಿದ್ದ ಅವರನ್ನು ಒಪ್ಪಿಸುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಅಂತಹ ಘನತೆ ಗೌರವದ ಬದುಕನ್ನು ಅವರು ಬಾಳಿದರು ಎಂದು ನಾಡೋಜ ಡಾ.ಮಹೇಶಜೋಶಿಯವರ ವಿಶೇಷತೆಯನ್ನು ಸ್ಮರಿಸಿ ವಿಮರ್ಶೆ ಮತ್ತು ಸಂಶೋಧನೆ ಕೃತಿಗಳಲ್ಲಿ ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ, ಪಂಪ ಕಾವ್ಯಸಾರ, ಪಂಪನ ನುಡಿಗಣಿ, ಕುಮಾರವ್ಯಾಸ ಭಾರತ ಎಂಬ ಕೃಷ್ಣಕಥೆ, ಹಳಗನ್ನಡ ಪದಸಂಪದ, ಸಾಹಿತ್ಯ ಸಡಗರ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ, ಕನ್ನಡತನ ಮತ್ತು ಭಾರತೀಯತೆ, ನುಡಿಗಳ ಅಳಿವು ಮೊದಲಾದ 15ಕ್ಕೂ ಹೆಚ್ಚು ಕೃತಿಗಳಿವೆ. ಅವರ ಸಂಪಾದನೆಗಳಲ್ಲಿ ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ, ಅಲ್ಲಮನ ವಚನಗಳು, ಅಕ್ಕನ ವಚನಗಳು, ಮೊದಲಾದ ಅನೇಕ ಕೃತಿಗಳಿವೆ. ಅನುವಾದಗಳಲ್ಲಿ ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ ಹತ್ತಾರು ಕೃತಿಗಳಿವೆ. ಅವರ ಕಾದಂಬರಿಗಳಲ್ಲಿ ಸಾಮಾನ್ಯ, ಅಂತರ, ವಿಕಾಸ, ಶೋಧನೆ ನಿರ್ಧಾರ ಮುಂತಾದವು ಸೇರಿವೆ. ಅವರ ಕನ್ನಡದ ಕೊಡುಗೆಗಳನ್ನು ಸ್ಮರಿಸುವ ಮತ್ತು ಸಾಹಿತ್ಯ ಸಂಪದವನ್ನು ಕಾಪಾಡುವ ಮುಖ್ಯವಾದ ಕೆಲಸವಾಗ ಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯದಲ್ಲಿ ಮುಂದಾಳತ್ವ ವಹಿಸಿಲಿದೆ ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
