ಡಾ.ರಾಜ್ ಕುಮಾರ್ ಕನ್ನಡದ ಅಸ್ಮಿತೆ -ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ರಾಜ್ಕುಮಾರ್ ಅವರಿಗೆ ದೊರೆತ ಜನಪ್ರಿಯತೆ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಒಂದು ಅಪಾರ ಶಕ್ತಿಯಾಗಿ ಪರಿಣಮಿಸಿದ್ದು ನಮ್ಮ ರಾಜ್ಯಕ್ಕಾದ ಅಪೂರ್ವ ಲಾಭ, ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನಲ್ಲಿ ಅವರು ಸಂಚರಿಸಿ ಮೂಡಿಸಿದ ಕನ್ನಡದ ಕಹಳೆ ಕರ್ನಾಟಕದಲ್ಲಿ ಅದುವರೆಗಿನ ಕನ್ನಡ ಚಳುವಳಿಗಳ ಸ್ವರೂಪವನ್ನು ಶಾಶ್ವತವಾಗಿ ಬದಲಿಸಿಬಿಟ್ಟಿತು. ಹೀಗಾಗಿ ಕನ್ನಡ ಮತ್ತು ನಾಡು ನುಡಿಗಳ ಕುರಿತಾದ ಯಾವುದೇ ವಿಚಾರಗಳಿಗೆ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ‘ಎಲ್ಲಿ ರಾಜ್ ಬರುತ್ತಾರೋ’ ಎಂದು ಕಾಳಜಿ ವಹಿಸುವ ಪರಿಸ್ಥಿತಿ ಒದಗಿ, ಕನ್ನಡ ಪರವಾದ ಜಾಗೃತಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾದ ಹಲವಾರು ಲಾಭಗಳನ್ನು ತಂದವು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರಿಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಡಾ.ರಾಜ್ ಕುಮಾರ್ ಅವರ 96ನೆಯ ಜನ್ಮದಿನೋತ್ಸವದಲ್ಲಿ ಮಾತನಾಡುತ್ತಿದ್ದರು.
ಡಾ.ರಾಜ್ ಕುಮಾರ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು, ದೂರದರ್ಶನದ ಹಿನ್ನೆಲೆ ಮತ್ತು ಆಗಿನ ಕೇಂದ್ರ ಸಚಿವ ಆರ್.ಎನ್.ಜಾಲಪ್ಪನವರ ಆಪ್ತ ಕಾರ್ಯದರ್ಶಿಯಾದ ಕಾರಣ ರಾಜ್ ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅದರ ಸಂಪೂರ್ಣ ನಿರ್ವಹಣೆಯ ಹೊಣೆ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವರನ್ನು ಸಂದರ್ಶಿಸುವ ವಿಶೇಷ ಅವಕಾಶವೂ ನನಗೆ ಸಿಕ್ಕಿತ್ತು. ಅವರ ಮುಗ್ಧತೆ ಮತ್ತು ಸ್ಪಷ್ಟತೆಯನ್ನು ಆ ಸಂದರ್ಭದಲ್ಲಿ ನಾನು ಹತ್ತಿರದಿಂದ ಕಂಡು ಸಂತೋಷಿಸಿದ್ದೇನೆ ಎಂದರು. ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ಅವರು ಅಭಿನಯಿಸಿದ ಅನುಭವಗಳ ಕುರಿತು ಮಾತನಾಡಿದರೆ ರೋಮಾಂಚನವಾಗುತ್ತಿತ್ತು. ರಾಜ್ ಕುಮಾರ್ ಅವರ ಯೋಗಶಿಕ್ಷಕ ನಾಯ್ಕರ್ ಮೂಲಕ ನನಗೆ ಅವರ ಪರಿಚಯ ಬೆಳೆದಿತ್ತು. ಅವರ ಕೊನೆಯ ಚಿತ್ರ ‘ಶಬ್ದವೇಧಿ’ಯಲ್ಲಿ ಅಭಿನಯಿಸುವ ಆಹ್ವಾನ ನನಗೆ ಬಂದಿತ್ತು. ಆದರೆ ಅದು ಅನಿವಾರ್ಯ ಕಾರಣದಿಂದ ಕೈಗೂಡಲಿಲ್ಲ. ಕಾದಂಬರಿಯಾಧಾರಿತ ಚಿತ್ರಗಳ ಪರಂಪರೆಗೆ ವಿಶೇಷ ಕೊಡುಗೆ ನೀಡಿದ ರಾಜ್ ಕುಮಾರ್ ಭಕ್ತನಿಂದ ಬಾಂಡ್ ವರೆಗೆ ಎಲ್ಲಾ ಪಾತ್ರಗಳಲ್ಲಿಯೂ ಅಭಿನಯಿಸಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಬಂದ ಹಣವನ್ನು ದತ್ತಿ ನಿಧಿಯಾಗಿ ಸ್ಥಾಪಿಸಿರುವುದು ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಇದ್ದ ಪ್ರೀತಿ ವಿಶ್ವಾಸಕ್ಕೆ ನಿದರ್ಶನ ಎಂದರು
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ರಾಜ್ ಕುಮಾರ್ ಎಷ್ಟು ಅದ್ಭುತವಾದ ಕಲಾವಿದರೂ ಅಷ್ಟೇ ಅದ್ಭುತವಾದ ಗಾಯಕರಾಗಿದ್ದರು. ಸಂಗೀತದಲ್ಲಿ ಅವರಿಗೆ ಅಪಾರ ಪರಿಶ್ರಮವಿತ್ತು. ತೋಡಿ ರಾಗದ ‘ನಾದಮಯ’ ಗೀತೆ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟಿತ್ತು. ಮೋಹನ ಅವರಿಗೆ ಬಹಳ ಪ್ರಿಯವಾದ ರಾಗ.. ಅದು ಮಂದ್ರ ಸಪ್ತಕದ ರಾಗ ನಿಷಾದ, ಮಧ್ಯಮ ಎರಡೂ ಇಲ್ಲ. ತಾರಕಕ್ಕೆ ಹೋಗಲು ಅವಕಾಶವೇ ಇಲ್ಲ.ಅದರಲ್ಲಿಯೂ ‘ಎಲ್ಲಾದರೂ ಇರು’ ಗೀತೆಯಲ್ಲಿ ಅವರು ಬಹಳ ಸಲೀಸಾಗಿ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಸಾಲುಗಳನ್ನು ತಾರಕಕ್ಕೆ ತೆಗೆದು ಕೊಂಡು ಹೋಗಿದ್ದಾರೆ, ‘ಜೇನಿಯ ಹೊಳೆಯೋ’ ಅವರು ಮೋಹನದಲ್ಲಿ ನೀಡಿದ ಇನ್ನೊಂದು ಮಿಂಚು ಎಂದು ಮೆಚ್ಚಿಗೆ ವ್ಯಕ್ತ ಪಡಿಸಿ ಡಾ.ರಾಜ್ ಕುಮಾರ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
