CreamA Cream article
Article

ಪತ್ರಿಕಾ ಪ್ರಕಟಣೆ

ಕಸಾಪ

ಪತ್ರಿಕಾ ಪ್ರಕಟಣೆ

ನ್ಯಾಯಮೂರ್ತಿ ಪಿ.ಕೆ. ಶ್ಯಾಮಸುಂದರ ಆಯೋಗದ ವರದಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಶ್ರೀ ಹಂಪ ನಾಗರಾಜಯ್ಯನವರ ನೇತೃತ್ವದ ನಿಯೋಗ, ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಸಲ್ಲಿಸಿರುವ ಮನವಿ ಕಾನೂನು ಬಾಹಿರವಾಗಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ-ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ

ಬೆಂಗಳೂರು: ನಾಡೋಜ ಡಾ. ಹಂಪ ನಾಗರಾಜಯ್ಯ ಅವರ ನೇತೃತ್ವದಲ್ಲಿ ಶ್ರೀ ಎಸ್.ಜಿ. ಸಿದ್ದರಾಮಯ್ಯ, ಶ್ರೀ ಕೆ.ಎಸ್. ವಿಮಲ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಬಂಜಗೆರೆ ಜಯಪ್ರಕಾಶ್, ಶ್ರೀ ಕೆ.ಟಿ. ಶ್ರೀಕಂಠೇಗೌಡ, ಶ್ರೀ ಜಯಪ್ರಕಾಶ್ ಗೌಡ, ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಅವರುಗಳನ್ನೊಳ ಗೊಂಡಂತಹ ನಿಯೋಗ ಮುಖ್ಯಮಂತ್ರಿಗಳನ್ನು ಭಾನುವಾರ ದಿನಾಂಕ 27-04-2025ರಂದು ಭೇಟಿಯಾಗಿ, ಸತ್ಯಕ್ಕೆ ದೂರವಾಗಿರುವ ಹಾಗೂ ಆಧಾರ-ರಹಿತವಾಗಿರುವ ಆಪಾದನೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿರುವುದರ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಶ್ರೀ ಹಂಪ ನಾಗರಾಜಯ್ಯ ಅವರು ಈ ನಿಯೋಗದ ನೇತೃತ್ವ ವಹಿಸಿದ್ದು, ಅತ್ಯಂತ ದುರದೃಷ್ಟಕರ ಮತ್ತು ವಿಪರ್ಯಾಸಕರ. ಹಂಪನಾ ಅವರು 1978 ರಿಂದ 1986ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದಂತಹ ಅಧಿಕಾರದ ಅವಧಿಯಲ್ಲಿ, ಅಧಿಕಾರದ ದುರುಪಯೋಗ, ದುರ್ವ್ಯವಹಾರ, ಸ್ವಜನ ಪಕ್ಷಪಾತ, ನಿಧಿಯ ದುರ್ವಿನಿಯೋಗ, ಆರ್ಥಿಕ ಅಶಿಸ್ತು, ಸ್ವಾರ್ಥಪರತೆಯ ಪ್ರಯತ್ನಗಳನ್ನು ನಡೆಸಿರುವುದು ಮತ್ತು 16-02-1986ರಲ್ಲಿ ನಡೆದ ಚುನಾವಣೆಯಲ್ಲಿ ಅನ್ಯಾಯ, ಅನುಚಿತ ಮತ್ತು ಅಕ್ರಮಗಳನ್ನು ಎಸಗಿರುವುದರ ಹಿನ್ನೆಲೆಯಲ್ಲಿ ಅನೇಕ ಸಾಹಿತಿಗಳು ಮತ್ತು ಸಾಂಸ್ಕೃತಿ ಚಿಂತಕರು ಅದರಲ್ಲೂ, ನ್ಯಾಯವಾದಿ ಕೊ. ಚನ್ನಬಸಪ್ಪ, ಬರಹಗಾರರಾದ ಪ್ರೊ. ಎಂ.ವಿ. ಸೀತಾರಾಮಯ್ಯ, ಸಾಹಿತಿಗಳಾದ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ ಪ್ರೊ. ಎಲ್.ಎಸ್. ಶೇಷಗಿರಿರಾವ್ ಮುಂತಾದವರು ವ್ಯಕ್ತಪಡಿಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ಪಿ. ಕೆ. ಶ್ಯಾಮಸುಂದರ ಆಯೋಗವನ್ನು ರಚಿಸಿ, ಅದರಿಂದ ವರದಿಯನ್ನು ಪಡೆಯಿತು ಎನ್ನುವುದನ್ನು ನಾಡೋಜ ಡಾ,ಮಹೇಶ ಜೋಶಿಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ನ್ಯಾಯಮೂರ್ತಿ ಪಿ. ಕೆ. ಶ್ಯಾಮಸುಂದರ ಆಯೋಗವು ಸರ್ಕಾರಕ್ಕೆ 27-05-1987ರಂದು ವರದಿಯನ್ನು ಸಲ್ಲಿಸಿತ್ತು. ನ್ಯಾಯಮೂರ್ತಿ ಪಿ.ಕೆ. ಶ್ಯಾಮಸುಂದರ ಅವರ ಆಯೋಗದ ವರದಿಯನ್ನು ಸರ್ಕಾರವು ವಿಧಾನ ಮುಂಡಲದ ಎರಡೂ ಮನೆಗಳಲ್ಲಿ ಮಂಡಿಸಿ, ಚರ್ಚೆಯ ನಂತರ, ಶ್ರೀ ಹಂಪ ನಾಗರಾಜಯ್ಯ ವಿರುದ್ಧ “ತೀವ್ರ ಮತ್ತು ವ್ಯಾಪಕವಾದ ಹಣಕಾಸಿನ ಆಕ್ರಮಗಳ ನಿದರ್ಶನಗಳು ಸ್ಪಷ್ಟವಾಗಿರುವ ವರದಿಯನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ” ಶ್ರೀ ಹಂಪ ನಾಗರಾಜಯ್ಯ ಅವರ ವಿರುದ್ಧ ಕಾನೂನಿನ ಅಧಿಕಾರ ವ್ಯಾಪ್ತಿಯಲ್ಲಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಹೂಡಲು ಮತ್ತು ವರದಿಯನ್ನು ಮುದ್ರಿಸಿ, ವಿವರಗಳನ್ನು ಸಾರ್ವಜನಿಕರ ಮುಂದಿಡಲು, ಸರ್ಕಾರವು ಒಪ್ಪಿರುವುದನ್ನು ನಾಡೋಜ ಡಾ.ಮಹೇಶ ಜೋಶಿಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಚುನಾಯಿತ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಘನತೆ ಗೌರವವನ್ನು ಹೊಂದಿದ್ದು, ‘ಸ್ವತಂತ್ರತೆ’, `ಸ್ವಾಯತ್ತತೆ’ ಮತ್ತು `ರಾಜಕೀಯ ತಟಸ್ಥತೆ’ಯನ್ನು ಕಾಪಾಡಿಕೊಂಡು ಬಂದಿರುವ ಹಾಗೂ ಏಳು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವಂತಹ ಕನ್ನಡಿಗರ ಹೆಮ್ಮೆಯ `ಮಾತೃ ಸಂಸ್ಥೆ’ಯಾಗಿದ್ದು, 110 ವರ್ಷಗಳ ಇತಿಹಾಸ ಹೊಂದಿರುವಂತಹ ಸಂಸ್ಥೆಯಾಗಿದೆ. ತಾವು ಒಂದು ವೇಳೆ ಶ್ರೀ ಹಂಪ ನಾಗರಾಜಯ್ಯ ಅವರ ನಿಯೋಗ ನೀಡಿದ, ಪೂರ್ವಾಗ್ರಹ ಪೀಡಿತ, ಆಧಾರ ರಹಿತವಾದ ಹಾಗೂ ದುರುದ್ದೇಶದಿಂದ ಕೂಡಿದ ಮನವಿ ಪತ್ರದ ಆಧಾರ ಮೇಲೆ ಕ್ರಮ ಕೈಗೊಂಡರೆ ಅದು “ಕನ್ನಡದ ಭವ್ಯವಾದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇಲೆ ಹಲ್ಲೆಯಾಗುವುದು”.ಎನ್ನುವುದನ್ನು ನಾಡೋಜ ಡಾ.ಮಹೇಶ ಜೋಶಿ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಸಮಾನಮನಸ್ಕರ ವೇದಿಕೆಯಡಿಯಲ್ಲಿ ಉದ್ದೇಶಪೂರ್ವಕವಾಗಿ, ಪೂರ್ವಗ್ರಹಪೀಡಿತರಾಗಿ, ದುರುದ್ದೇಶದಿಂದ ಸತ್ಯವನ್ನು ಮರೆಮಾಚಿ ಸುಳ್ಳುಗಳ ಸರಮಾಲೆಯನ್ನು ಪೋಣಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಹಸ್ತಕ್ಷೇಪವನ್ನು ಮಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧವಾಗಿ ಪ್ರತಿಭಟನಾ ಸಭೆ ಮಾಡಿರುವುದು ಇದು ಮೊದಲನೆಯ ಸಲವಲ್ಲ. ದಿನಾಂಕ 12-06-2023ರಂದು ಕನ್ನಡ ಸಾಹಿತ್ಯ ಪರಿಷತ್ತು ಕಾನೂನಾತ್ಮಕವಾಗಿ ನಿಬಂಧನೆಗಳ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಹಾಗೂ ಇನ್ನಿತರ ವಿಷಯಗಳ ಕುರಿತು ಪ್ರತಿಭಟನಾ ಸಭೆಯ ಭಿತ್ತಿಪತ್ರವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೋಡೆಯ ಮೇಲೆ ಅಂಟಿಸಿರುತ್ತಾರೆ. ಇವರೆಲ್ಲರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ಸಂಖ್ಯೆ ದಾವೆ ಹಾಕಿದ್ದು, ಓ.ಎಸ್. ಸಂಖ್ಯೆ 3562/2023 ರಲ್ಲಿ ದಾವೆ ಹಾಕಿದ್ದು ದಿನಾಂಕ ೦೯-೦೬-೨೦೨೩ ರಂದು ಸಮಾನ ಮನಸ್ಕರ ವೇದಿಕೆ ಹಾಗೂ ಕನ್ನಡ ಜನಶಕ್ತಿ ಕೇಂದ್ರ, ಕನ್ನಡ ಸಂಘರ್ಷ ಸಮಿತಿಗಳನ್ನೊಳಗೊಂಡಂತಹ 13 ಪ್ರತಿವಾದಿಗಳು ಹಾಗೂ ಅವರೊಂದಿಗೆ ಕೈಜೋಡಿಸುತ್ತಿರುವ ಎಲ್ಲರ ವಿರುದ್ಧ ಮಧ್ಯಂತರ ಆದೇಶ ನೀಡಿ, “ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧದ ಯಾವುದೇ ಅವಹೇಳನಕಾರಿ ಮಾತುಗಳನ್ನಾಡಬಾರದೆಂದು ಸ್ಪಷ್ಟವಾಗಿ ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದೆ. ಶ್ರೀ ಹಂಪ ನಾಗರಾಜಯ್ಯ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ನಿಯೋಗವು ಈ ನ್ಯಾಯಾಲಯ ನೀಡಿರುವ ಪ್ರತಿಬಂಧಕಾಜ್ಞೆಯ ಆದೇಶವನ್ನು ತಮ್ಮ ಗಮನಕ್ಕೆ ತರದೇ ತಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದನ್ನು ನಾಡೋಜ ಡಾ.ಮಹೇಶ ಜೋಶಿಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

೧೨-೦೬-೨೦೨೩ರ ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷದ ಶ್ರೀ ಸಿ.ಕೆ. ರಾಮೇಗೌಡ, ಅದರ ಪದಾಧಿಕಾರಿಗಳಾದ ಶ್ರೀ ಶಂಕರ್ ಹೂಗಾರ್ ಹಾಗೂ ಶ್ರೀ ದಾಸಪ್ಪ ಸಿ.ಕೆ. ಎನ್ನುವರು ಪಾರಂಪರಿಕ ಕಟ್ಟಡವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೋಡೆಯ ಮೇಲೆ ಭಿತ್ತಿ ಪತ್ರವನ್ನು ಅಂಟಿಸಿದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಪುರಂ ಪೊಲೀಸ್ ನವರು ತನಿಖೆ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ನ್ನು ಸಲ್ಲಿಸಿದಾಗ, ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿ 1- ಶ್ರೀ ಸಿ.ಕೆ. ರಾಮೇಗೌಡ, ಆರೋಪಿ 2- ಶ್ರೀ ಶಂಕರ್ ಹೂಗಾರ್ ಹಾಗೂ ಆರೋಪಿ 3 ಶ್ರೀ ದಾಸಪ್ಪ ಸಿ.ಕೆ. ಅವರು ಗೋಡೆ ಮೇಲೆ ಭಿತ್ತಿ ಪತ್ರವನ್ನು ಅಂಟಿಸಿರುವ ತಪ್ಪನ್ನು ಒಪ್ಪಿಕೊಂಡಾಗ ಮಾನ್ಯ ಮಾನ್ಯ ನ್ಯಾಯಾಲಯವು ಅವರ ತಪ್ಪೊಪ್ಪಿಗೆಯನ್ನು ಸ್ವೀಕರಿಸಿ, ದಂಡ ವಿಧಿಸಿ, ಒಂದು ವೇಳೆ ದಂಡ ಕಟ್ಟುವುದು ತಪ್ಪಿದರೆ, ಮೂರು ದಿನಗಳ ಕಾಲ ಸೆರೆವಾಸದ ಶಿಕ್ಷೆಯನ್ನು ನೀಡಿರುವುದನ್ನು ಸಹ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇಂತಹ ಅಪರಾಧಿಕ ಹಿನ್ನೆಲೆಯ ಹೊಂದಿದಂತಹ ವ್ಯಕ್ತಿಗಳು, ಶ್ರೀ ಹಂಪನಾ ನಿಯೋಗದಲ್ಲಿ ಇದ್ದು, ಸುಳ್ಳು ಮಾಹಿತಿಯಿಂದ ಕೂಡಿದ ದುರುದ್ದೇಶಪೂರ್ವಕ ಮನವಿಯನ್ನು ಸಲ್ಲಿಸಿದ್ದು, ಇದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರದ ನಡುವೆ ಇರುವ ಸೌಹಾರ್ದಯುತವಾದ ಸಂಬಂಧವನ್ನು ಹಾಳು ಮಾಡುವುದು ಮತ್ತು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ದುರುದ್ದೇಶವನ್ನು ಹೊಂದಿದೆ ‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದು ಸಾವಿರಾರು ನೊಣಗಳು ಹಾರಾಡುತ್ತಿದ್ದರೂ ಇನ್ನೊಬ್ಬರ ಎಲೆಯಲ್ಲಿ ಇಲ್ಲದ ನೊಣ ಹುಡಕುವ’ ಎಂಬ ಗಾದೆಯಂತಹ ಕ್ಷುದ್ರ ಮನೋಭಾವ ಇದಾಗಿದೆ ಎಂಬುದನ್ನು ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಗಮನಕ್ಕೆ ಅತ್ಯಂತ ವಿನಯದಿಂದ ತರ ಬಯಸುತ್ತದೆ ಎಂದು ತಮ್ಮ ಪತ್ರದಲ್ಲಿ ನಾಡೋಜ ಡಾ.ಮಹೇಶ ಜೋಶಿಯವರು ವಿನಂತಿಸಿ ಕೊಂಡಿದ್ದಾರೆ. ಮತ್ತು ಪ್ರಸ್ತಾಪಿರುವ ಅಂಶಗಳಿಗೆ ಸೂಕ್ತ ದಾಖಲೆಗಳನ್ನು ಕೂಡ ನೀಡಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More