CreamA Cream article
Article

ಕನ್ನಡ ಸಾಹಿತ್ಯ ಪರಿಷತ್ತಿಗೆ ನೈತಿಕ ಶಕ್ತಿ ತಂಬಿದ್ದ ಜಿ.ಎಸ್.ಸಿದ್ದಲಿಂಗಯ್ಯ-ನಾಡೋಜ ಡಾ.ಮಹೇಶ ಜೋಶಿ ನುಡಿ ನಮನ

ಕಸಾಪ

ಕನ್ನಡ ಸಾಹಿತ್ಯ ಪರಿಷತ್ತಿಗೆ ನೈತಿಕ ಶಕ್ತಿ ತಂಬಿದ್ದ ಜಿ.ಎಸ್.ಸಿದ್ದಲಿಂಗಯ್ಯ-ನಾಡೋಜ ಡಾ.ಮಹೇಶ ಜೋಶಿ ನುಡಿ ನಮನ

ಬೆಂಗಳೂರು: ಜಿ.ಎಸ್. ಸಿದ್ಧಲಿಂಗಯ್ಯನವರು ಪರಿಷತ್ತಿನ ಅಧಿಕಾರವಹಿಸಿಕೊಂಡಾಗ ಪರಿಷತ್ತು ಸಂದಿಗ್ಧ ಸನ್ನಿವೇಶದಲ್ಲಿತ್ತು, ಶ್ರೀ ಹಂಪ ನಾಗರಾಜಯ್ಯನವರ ಅಧಿಕಾರಾವಧಿಯಲ್ಲಿ ನಡೆದ ಅಧಿಕಾರ ದುರುಪಯೋಗ, ದುರ್ವ್ಯಹಾರ, ಸ್ವಜನ ಪಕ್ಷಪಾತ, ನಿಧಿಯ ದುರ್ವನಿಯೋಗ, ಆರ್ಥಿಕ ಅಶಿಸ್ತಿನ ಹಿನ್ನೆಲೆಯಲ್ಲಿ ಶ್ಯಾಮಸುಂದರ ಆಯೋಗದ ರಚನೆಯಾಗಿ ಮೊಟ್ಟ ಮೊದಲ ಸಲ ಸರ್ಕಾರದ ಆಡಳಿತಾಧಿಕಾರಿಗಳನ್ನು ಕಂಡ ಮೇಲೆ ಪರಿಷತ್ತು ಮೊದಲಿನಂತೆ ಮುಂದುವರೆಯವುದೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸಿದ ಜಿ.ಎಸ್. ಸಿದ್ಧಲಿಂಗಯ್ಯನವರು “ನಾನು ಈ ಕ್ಷಣದವರೆಗೂ ಶುದ್ದವ್ಯಕ್ತಿಯಾಗಿ ನಡೆದುಕೊಂಡು ಬಂದಿದ್ದೇನೆ. ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿಸಲಾರ.” ಎಂಬ ಘೋಷಣೆ ಮಾಡಿದ್ದಲ್ಲದೆ ಹಾಗೇ ನಡೆದು ಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ನೈತಿಕ ಶಕ್ತಿ ತುಂಬಿದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆವರಣದಲ್ಲಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು.

ಶಿಕ್ಷಣತಜ್ಞರೂ ಕವಿಗಳೂ ವಚನ ಸಾಹಿತ್ಯ ವಿದ್ವಾಂಸರೂ ಆದ ಜಿ.ಎಸ್. ಸಿದ್ಧಲಿಂಗಯ್ಯನವರು ತುಮಕೂರಿನ ಬೆಳ್ಳಾವೆಯಲ್ಲಿ 20-2-1931ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು, ವಿಶ್ವವಿದ್ಯಾನಿಲಯದಿಂದ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು. ಸರ್ಕಾರಿ ಕಾಲೇಜಿಗೆ ಉದ್ಯೋಗಕ್ಕಾಗಿ ಅಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ 1988ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು.1974ರಲ್ಲಿ ಚಿತ್ರದುರ್ಗದಲ್ಲಿ ಹಿಂದುಳಿಗ ವರ್ಗದವರ ವಸತಿಶಾಲೆಯನ್ನು ಪ್ರಾರಂಭಿಸಲು ಕಾರಣಕರ್ತರಾದರು. ಕವಿಗಳೆಂದು, ವಿಮರ್ಶಕರೆಂದು ಹೆಸರು ಗಳಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ ಸಿದ್ದಲಿಂಗಯ್ಯನವರ ಸಾರಸ್ವತ ಸೇವೆಯನ್ನು ಸ್ಮರಿಸಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ. ಅವರ ಅವಧಿಯಲ್ಲಿ ಒಂದು ಲಾಂಛನ(ಎಂಬಲಮ್) ರೂಪಿಸಿ ಅಂಗೀಕರಿಸಿತ್ತು ಆದರೆ ಧ್ವಜದ ಅಗತ್ಯ ಕಂಡು ಸಿದ್ಧಲಿಂಗಯ್ಯನವರು ತಜ್ಞರ ಸಮಿತಿಯನ್ನು ನೇಮಿಸಿತು. ಧ್ವಜದ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಿತು. ಕಲಾವಿದ ಕಮಲೇಶ್ ಅವರಿಗೆ ಧ್ವಜರೂಪಿಸುವ ಕಾರ್ಯವನ್ನು ವಹಿಸಿತು. ಅದನ್ನು ಕಾರ್ಯಸಮಿತಿ 16-1-1990ರಲ್ಲಿ ಅಂಗೀಕರಿಸಿತು. ಅಂದಿನಿಂದ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಮುಖ ಸಮಾರಂಭಗಳಲ್ಲಿ ಹಾರಿಸಲು ಪ್ರಾರಂಭಿಸಿತು. ಸಿದ್ದಲಿಂಗಯ್ಯನವರು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಹೊಸಗನ್ನಡ ಸಾಹಿತ್ಯ ದನಿ ನಿರ್ಮಾಪಕರು ಮಾಲಿಕೆಯಡಿ ಪ್ರಸಿದ್ಧ ಲೇಖಕರಿಂದ ಬರೆಸಿ ಪ್ರಕಟಿಸಿದರು. ಈ ಮಾಲಿಕೆಯಲ್ಲಿ 20ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾದವು. ಸಂಶೋಧನಾತ್ಮಕ ಪ್ರಬಂಧಗಳನ್ನು ಪ್ರಕಟಿಸುವ ಯೋಜನೆ ಕುಡ ರೂಪುಗೊಂಡಿತು. ಹೊಸದಾಗಿ ಅಕ್ಷರ ಕಲಿತ ವಯಸ್ಕರಿಗಾಗಿ ಪ್ರಾರಂಭಿಸಿದ ನವಸಾಕ್ಷರಮಾಲಿಕೆಯಲ್ಲಿ 30 ಗ್ರಂಥಗಳು ಬೆಳಕು ಕಂಡವು.ಸ್ವತಃ ಕವಿಗಳಾದ ಜಿ. ಎಸ್. ಸಿದ್ಧಲಿಂಗಯ್ಯನವರು ತಮ್ಮ ಅವಧಿಯಲ್ಲಿ ರಾಜ್ಯೋತ್ಸವ, ಯುಗಾದಿಯಂದು ಕವಿಗೋಷ್ಠಿ ಏರ್ಪಡಿಸುವ ಪದ್ಧತಿ ಪ್ರಾರಂಭಿಸಿದರು. ಹೀಗೆ ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹುಮುಖಿ ಕೊಡುಗೆಗಳನ್ನು ನೀಡಿದ್ದಾರೆ. ಅವರ ಕೊಡುಗೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಸದಾ ಸ್ಮರಿಸುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಸದಾ ತಮಗೆ ಮಾರ್ಗದರ್ಶಕರಾಗಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ಇತ್ತೀಚಿನವರೆಗೂ ಪರಿಷತ್ತಿನ ಏಳ್ಗೆಗೆ ಸಲಹೆಗಳನ್ನು ನೀಡುತ್ತಿದ್ದರು. ಅವರ ಅಗಲುವಿಕೆ ವೈಯಕಿಕವಾಗಿಯೂ ತಮಗೆ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಿ ನಾಡೋಜ ಡಾ.ಮಹೇಶ ಜೋಶಿ ನಮನಗಳನ್ನು ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗ ಮತ್ತು ಅಪಾರ ಸಂಖ್ಯೆಯ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಅಭಿಮಾನಿಗಳು ಇದೇ ಸಂದರ್ಭದಲ್ಲಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More