ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳನ್ನು ಎತ್ತಿ ಹಿಡಿದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ-ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಜಿ.ಎಸ್. ಸಿದ್ಧಲಿಂಗಯ್ಯನವರು ಪರಿಷತ್ತಿನ ಅಧಿಕಾರವಹಿಸಿಕೊಂಡಾಗ ಪರಿಷತ್ತು ಸಂದಿಗ್ಧ ಸನ್ನಿವೇಶದಲ್ಲಿತ್ತು, ಮೊದಲ ಸಲ ಸರ್ಕಾರದ ಆಡಳಿತಾಧಿಕಾರಿಗಳನ್ನು ಕಂಡ ಮೇಲೆ ಪರಿಷತ್ತು ಮೊದಲಿನಂತೆ ಮುಂದುವರೆಯವುದೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸಿದ ಜಿ.ಎಸ್. ಸಿದ್ಧಲಿಂಗಯ್ಯನವರು “ನಾನು ಈ ಕ್ಷಣದವರೆಗೂ ಶುದ್ದವ್ಯಕ್ತಿಯಾಗಿ ನಡೆದುಕೊಂಡು ಬಂದಿದ್ದೇನೆ. ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿಸಲಾರ.” ಎಂಬ ಘೋಷಣೆ ಮಾಡಿದ್ದಲ್ಲದೆ ಹಾಗೇ ನಡೆದು ಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ನೈತಿಕ ಶಕ್ತಿ ತುಂಬಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಟಾಗಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ನುಡಿನಮನ ಕಾರರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ. ಅವರ ಅವಧಿಯಲ್ಲಿ ಒಂದು ಲಾಂಛನ(ಎಂಬಲಮ್) ರೂಪಿಸಿ ಅಂಗೀಕರಿಸಿತ್ತು ಆದರೆ ಧ್ವಜದ ಅಗತ್ಯ ಕಂಡು ಸಿದ್ಧಲಿಂಗಯ್ಯನವರು ತಜ್ಞರ ಸಮಿತಿಯನ್ನು ನೇಮಿಸಿತು. ಧ್ವಜದ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಿತು. ಕಲಾವಿದ ಕಮಲೇಶ್ ಅವರಿಗೆ ಧ್ವಜರೂಪಿಸುವ ಕಾರ್ಯವನ್ನು ವಹಿಸಿತು. ಅದನ್ನು ಕಾರ್ಯಸಮಿತಿ 16-1-1990ರಲ್ಲಿ ಅಂಗೀಕರಿಸಿತು. ಅಂದಿನಿಂದ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಮುಖ ಸಮಾರಂಭಗಳಲ್ಲಿ ಹಾರಿಸಲು ಪ್ರಾರಂಭಿಸಿತು. ಸಿದ್ದಲಿಂಗಯ್ಯನವರು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಹೊಸಗನ್ನಡ ಸಾಹಿತ್ಯ ದನಿ ನಿರ್ಮಾಪಕರು ಮಾಲಿಕೆಯಡಿ ಪ್ರಸಿದ್ಧ ಲೇಖಕರಿಂದ ಬರೆಸಿ ಪ್ರಕಟಿಸಿದರು. ಈ ಮಾಲಿಕೆಯಲ್ಲಿ 20ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾದವು. ಸಂಶೋಧನಾತ್ಮಕ ಪ್ರಬಂಧಗಳನ್ನು ಪ್ರಕಟಿಸುವ ಯೋಜನೆ ಕುಡ ರೂಪುಗೊಂಡಿತು.ಸ್ವತಃ ಕವಿಗಳಾದ ಜಿ. ಎಸ್. ಸಿದ್ಧಲಿಂಗಯ್ಯನವರು ತಮ್ಮ ಅವಧಿಯಲ್ಲಿ ರಾಜ್ಯೋತ್ಸವ, ಯುಗಾದಿಯಂದು ಕವಿಗೋಷ್ಠಿ ಏರ್ಪಡಿಸುವ ಪದ್ಧತಿ ಪ್ರಾರಂಭಿಸಿದರು. ಹೀಗೆ ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಹುಮುಖಿ ಕೊಡುಗೆಗಳನ್ನು ನೀಡಿದ್ದಾರೆ. ಸದಾ ತಮಗೆ ಮಾರ್ಗದರ್ಶಕರಾಗಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರು ಇತ್ತೀಚಿನವರೆಗೂ ಪರಿಷತ್ತಿನ ಏಳ್ಗೆಗೆ ಸಲಹೆಗಳನ್ನು ನೀಡುತ್ತಿದ್ದರು. ಅವರ ಅಗಲುವಿಕೆ ವೈಯಕಿಕವಾಗಿಯೂ ತಮಗೆ ನಷ್ಟವನ್ನು ಉಂಟು ಮಾಡಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ನುಡಿ ನಮನವನ್ನು ಸಲ್ಲಿಸಿದರು.
ಶ್ರೀ ನಿಡುಮಾಮಡಿ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಕಪಟತನವಿರದ ಆತ್ಮರತಿಗೆ ಒಳಗಾಗದ ಪರಿಶುದ್ಧ ವ್ಯಕ್ತಿತ್ವ ಸಿದ್ದಲಿಂಗಯ್ಯನವರದು, ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದೂ ಅವರಂತೆ ನಿಷ್ಕಳಂಕವಾಗಿ ಬಾಳಿದವರು ಅಪರೂಪ ಎಂದು ಸಿದ್ದಲಿಂಗಯ್ಯನವರ ವ್ಯಕ್ತಿತ್ವವನ್ನು ವರ್ಣಿಸಿದರು. ಬೇಲಿಮಠದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಸ್ವಾಮಿಗಳು ಮಾತನಾಡಿ ಎಲ್ಲರೊಂದಿಗೆ ಒಂದಾಗಿ ಎಲ್ಲರಿಗೂ ಬೇಕಾಗಿ ಬಾಳಿದವರು ಸಿದ್ದಲಿಂಗಯ್ಯನವರು ಅವರು ಬೆಳಕಾಗಿ ಬಂದರು, ಬೆಳಗಾಗಿ ಉಳಿದರು ಎಂದು ಅವರ ವ್ಯಕ್ತಿತ್ವವನ್ನು ವರ್ಣಿಸಿದರು. 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪನವರು ಮಾತನಾಡಿ ಸಿದ್ದಲಿಂಗಯ್ಯನವರಿಗೆ ಎಷ್ಟು ಸಿಟ್ಟು ಇತ್ತೋ ಅಷ್ಟೇ ಸಂಯಮ ಕೂಡ ಇತ್ತು ಎಂದು ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ದುಡಿದ ಪ್ರಸಂಗಗಳನ್ನು ನೆನಪು ಮಾಡಿಕೊಂಡರು.
ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾದ ಕೆ.ವಿ.ನಾಗರಾಜ ಮೂರ್ತಿಯವರು ಮಾತನಾಡಿ ಸಿದ್ದಲಿಂಗಯ್ಯನವರ ಜೊತೆಗಿನ ಒಡನಾಟ ಎಂದರೆ ಅದು ಬೆಂಕಿಯ ಜೊತೆಗೆ ಗುದ್ದಾಟವೇ ಸರಿ, ಪಂಪನ ಕಾವ್ಯ ವೈಭವ ನೃತ್ಯ ರೂಪಕ ಮಾಡಲು ಅವರ ನೀಡಿದ ಮಾರ್ಗದರ್ಶನವನ್ನು ನೆನೆಪು ಮಾಡಿ ಕೊಂಡರು. ಹಿರಿಯ ಬರಹಗಾರ ಮಂಡಗದ್ದೆ ಶ್ರೀನಿವಾಸಯ್ಯನವರು ಮಾತನಾಡಿ ಸಿದ್ದಲಿಂಗಯ್ಯನವರ ಹಿರಿಮೆ ಎಂದರೆ ಅವರ ಜೀವನೋತ್ಸಾಹ, ಅವರ ವಿದ್ಯಾರ್ಥಿಯಾಗಿ ನಾನು ಪಡೆದು ಕೊಂಡಿದ್ದು ಅಪಾರ ಎಂದು ಸ್ಮರಿಸಿ ಕೊಂಡರು. ಬರಹಗಾರ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ ಸಿದ್ದಲಿಂಗ್ಯಯನವರನ್ನು ಕೈ ಬೆರಳು ಕೇಳದೆ ನನ್ನ ಕೈ ಹಿಡಿದು ನಡೆಸಿದ ದ್ರೋಣಾಚಾರ್ಯ ಎಂದು ವರ್ಣಿಸಿದರು. ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರು ಸಿದ್ದಲಿಂಗಯ್ಯನವರ ತುಮಕೂರಿನ ನಂಟಿನ ಕುರಿತು ಮಾತನಾಡಿದರೆ, ಬಿ.ಎಂ.ಶ್ರೀ ಪ್ರತಿಷ್ಟಾನದ ಗೌರವಾಧ್ಯಕ್ಷರಾದ ಡಾ.ಆರ್.ಲಕ್ಷ್ಮೀನಾರಾಯಣ ಅವರು ಅಪಾರ ವಿದ್ವತ್ತು, ಸೃಜನಶೀಲತೆ ಮತ್ತು ದಕ್ಷ ಆಡಳಿತ ಬೆರೆತ ಅಪರೂಪದ ವ್ಯಕ್ತಿತ್ವ ಸಿದ್ದಲಿಂಗಯ್ಯನವರದು ಎಂದು ಹೇಳಿದರು. ಬರಹಗಾರರಾದ ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ ಮತ್ತು ಡಾರುದ್ರೇಶ ಅದರಂಗಿ ಸಿದ್ದಲಿಂಗಯ್ಯನವರ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿ ಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗ ನೇ.ಭ.ರಾಮಲಿಂಗ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಮತ್ತು ಅಪಾರ ಸಂಖ್ಯೆಯ ಸಿದ್ದಲಿಂಗಯ್ಯನವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
