ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆಯನ್ನು ಹೆಚ್ಚಿಸಿದ ದತ್ತಿ ಪುರಸ್ಕಾರಗಳು-ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ದತ್ತಿನಿಧಿ ಯೋಜನೆ ಇರಲಿಲ್ಲ. ಕೇವಲ ದಾನಿಗಳಿಂದ ದೇಣಿಗೆ ಸಂಗ್ರಹ ಮತ್ತು ವಿವಿಧ ವರ್ಗಗಳ ಸದಸ್ಯರಿಂದ ಚಂದಾ ವಸೂಲಿ ಆಧಾರದ ಮೇಲೆ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿತ್ತು. 1935ನೇ ಇಸವಿಯಲ್ಲಿ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರು, ಗಮಕ ಕಲೆಯ ಪ್ರೋತ್ಸಾಹಕ್ಕಾಗಿ ರೂ. 1೦೦೦ ಗಳ ನಿಧಿಯನ್ನು ಸ್ಥಾಪಿಸಿದುದು ಪರಿಷತ್ತಿನ ಮೊಟ್ಟ ಮೊದಲ ದತ್ತಿನಿಧಿಯಾಗಿದೆ.ಇಂದು ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟು 2061ಎರಡು ಸಾವಿರದ ಅರವತ್ತೊಂದು) ದತ್ತಿನಿಧಿಗಳಿದ್ದು ಅವುಗಳು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಯೋಜಿತವಾಗಿದ್ದು ಅಭಯಲಕ್ಷ್ಮಿ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವೈವಿಧ್ಯಮಯ ಆಶಯಗಳನ್ನೊಳಗೊಂಡಿರುವ ದತ್ತಿಪುರಸ್ಕಾರಗಳಿಂದ ಸಾಹಿತ್ಯಕ ಕಾರ್ಯಕ್ರಮಗಳನ್ನು ನಾಡಿನ ವಿವಿಧ ಸ್ಥಳದಲ್ಲಿ ಪರಿಷತ್ತಿನ ಪರವಾಗಿ ನಡೆಸಲು ಸಾಧ್ಯವಾಗಿದೆ. ದಾನಿಗಳ ಕೊಡುಗೆ ಸಾರ್ಥಕವಾಗಿದೆ. ದತ್ತಿನಿಧಿ ಕಾಣಿಕೆ ನಿರಂತರವಾಗಿ ಬರುತ್ತಿರಬೇಕು. ಈ ಮೂಲಕ ಪರಿಷತ್ತು ನಾಡಿನ ಮೂಲೆ ಮೂಲೆಗಳಲ್ಲಿ ತನ್ನ ತೋಳನ್ನು ಚಾಚಬೇಕು, ನಾಡಿನ ಭಾವೈಕ್ಯತೆಗೆ ಇಂಬು ದೊರಕಬೇಕು ಎಂಬುದು ಪರಿಷತ್ತಿನ ಹಾರೈಕೆ.ನಾನು ಅಧ್ಯಕ್ಷರಾದ ಮೇಲೆ ರೂ 1,65,87,500 (ಒಂದು ಕೋಟಿ ಅರವತ್ತೈದು ಲಕ್ಷದ ಎಂಬತ್ತೊಂಬತ್ತು ಸಾವಿರದ ಐದು ನೂರು ರೂಪಾಯಿಗಳ) ಸುಮಾರು ಇನ್ನೂರು ದತ್ತಿಗಳು ಹೊಸದಾಗಿ ಸ್ಥಾಪಿತವಾಗಿದೆ. ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಂಡಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ವಿವರಗಳನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾದ ಕೆ.ವಿ.ನಾಗರಾಜ ಮೂರ್ತಿಯವರು ಮಾತನಾಡಿ ನಾಡೋಜ ಡಾ.ಮಹೇಶ ಜೋಶಿಯವರು ತಾವು ಎಲ್ಲೇ ಕಾರ್ಯ ನಿರ್ವಹಿಸಲಿ ಆ ಸ್ಥಾನದ ಮಹತ್ವನವನ್ನು ಹೆಚ್ಚಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಎತ್ತರವನ್ನು ತಲುಪಿದೆ. ದತ್ತಿ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ವೈಶಿಷ್ಟ್ಯ. ಬಿ.ಎಂ.ಶ್ರೀ ಅಂತಹವರಿಂದ ದತ್ತಿ ಸ್ಥಾಪಿತವಾಗಿದೆ ಎನ್ನುವ ಸಂಗತಿಯೇ ರೋಮಾಂಚನವನ್ನು ತರಬಲ್ಲಂತಹದು ಎಂದು ನುಡಿದರು. ಪ್ರಶಸ್ತಿ ಪ್ರದಾನ ಮಾಡಿ ಐ.ಎಸ್.ಡಿ ಪೋಲೀಸ್ ಅಧೀಕ್ಷಕರಾದ ಜಿನೇಂದ್ರ ಖನಗಾವಿ ಕನ್ನಡ ಸಾಹಿತ್ಯ ಪರಿಷತ್ತಿಗೂ ತಮಗೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿ ಕೊಂಡು ಕನ್ನಡ ಭಾಷೆಗಿರುವ ವೈಶಿಷ್ಟ್ಯ ಮತ್ತು ವೈವಿಧ್ಯತೆಗಳು ಆ ಪರಂಪರೆಗಿರುವ ಅರಿವು ಮುಂದಿನ ಪೀಳಿಗೆಯನ್ನು ತಲುಪ ಬೇಕು ಎಂದು ಆಶಿಸಿದರು.
ದತ್ತಿ ದಾನಿಗಳಾದ ಪಿ.ಜಯಲಕ್ಷ್ಮಿ ಅಭಯಕುಮಾರ್ ದತ್ತಿ ಸ್ಥಾಪನೆಯ ಹಿಂದಿನ ಉದ್ದೇಶಗಳನ್ನು ವಿವರಿಸಿದರು. 2024ನೆಯ ಸಾಲಿಗೆ ಡಾ.ಜಯಮಾಲಾ.ಎಸ್ ಮತ್ತು ಆರ್.ವೆಂಕಟರಾಜು ಅವರಿಗೆ ಮತ್ತು 2025ನೆಯ ಸಾಲಿಗೆ ಶಾಂತಲಾ ಧರ್ಮರಾಜ್ ಮತ್ತು ಆರ್.ರಾಮಚಂದ್ರ ಅವರಿಗೆ ದತ್ತಿ ಪುರಸ್ಕಾರಗಳನ್ನು ನೀಡಲಾಯಿತು. ಪುರಸ್ಕೃತರು ತಮ್ಮ ಮನದಾಳದ ಭಾವನೆಗಳನ್ನು ಹಂಚಿ ಕೊಂಡರು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ನಿರೂಪಿಸಿದರು. ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಸ್ವಾಗತವನ್ನು ಮತ್ತು ಡಾ.ಪದ್ಮಿನಿ ನಾಗರಾಜು ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಜಯರಾಮರಾಜೇ ಅರಸ್, ಹಿರಿಯ ಕಲಾವಿದ ಎಚ್.ಜಿ.ದತ್ತಾತ್ರೇಯ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು, ಪರಿಷತ್ತಿನ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
