CreamA Cream article
Article

ಕನ್ನಡಕ್ಕೆ ಮೊದಲ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್ ಅವರಿಗೆ ನಾಡೋಜ ಡಾ.ಮಹೇಶ ಜೋಶಿ ಅಭಿನಂದನೆ

ಕಸಾಪ

ಕನ್ನಡಕ್ಕೆ ಮೊದಲ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್ ಅವರಿಗೆ ನಾಡೋಜ ಡಾ.ಮಹೇಶ ಜೋಶಿ ಅಭಿನಂದನೆ

ಬೆಂಗಳೂರು: ಕನ್ನಡಕ್ಕೆ ಮೊದಲ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ತಂದು ಕೊಟ್ಟ ಲೇಖಕಿ ಬಾನು ಮುಷ್ತಾಕ್ ಮತ್ತು ಈ ಕೃತಿಯನ್ನು ಸಮರ್ಥವಾಗಿ ಇಂಗ್ಲಿಷ್ ಗೆ ಅನುವಾದಿಸಿ ಪುರಸ್ಕಾರ ಬರಲು ಕಾರಣಕರ್ತರಾದ ಅನುವಾದಕಿ ದೀಪಾ ಭಸ್ತಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಭಿನಂದಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ, ಅನುವಾದದ ಮಹತ್ವವೂ ರುಜುವಾತಾಗಿದೆ. ಕನ್ನಡದ ಅನೇಕ ಕೃತಿಗಳು ಇಂಗ್ಲೀಷ್ ಗೆ ಸಮರ್ಥವಾಗಿ ಅನುವಾದವಾಗಿದ್ದರೆ ನೋಬಲ್ ಪುರಸ್ಕಾರಕ್ಕೆ ಖಂಡಿತ ಅರ್ಹವಾಗಿದ್ದವು. ಈ ಕುರಿತು ಯೋಚಿಸಲು ಇದು ಸಕಾಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಾನು ಮುಷ್ತಾಕ್ ಅವರ ‘ಹಸೀನಾ’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಿತ್ರ ರಾಷ್ಟ್ರ ಪುರಸ್ಕಾರವನ್ನು ಪಡೆದಿರುವುದನ್ನು ನೆನಪು ಮಾಡಿ ಕೊಂಡಿರುವ ಅವರು, ಇನ್ನೊಮ್ಮೆ ಬಾನು ಮುಷ್ತಾಕ್ ಅವರಿಂದ ಅಂತಹದೇ ಇತಿಹಾಸ ಸೃಷ್ಟಿಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪ್ರಶಂಸಿಸಿದ್ದಾರೆ.

ಬಾನು ಮುಷ್ತಾಕ್ ಅವರು 1990ರಿಂದ 2023ರ ನಡುವೆ ಬರೆದ ಹನ್ನೆರಡು ಕಥೆಗಳ ಇಂಗ್ಲೀಷ್ ಅನುವಾದವನ್ನು ದೀಪಾ ಭಸ್ತಿಯವರು "ಹಾರ್ಟ್ ಲ್ಯಾಂಪ್" ಶೀರ್ಷಿಕೆಯಲ್ಲಿ ಮಾಡಿದರು. ಈ ಕೃತಿಗೆ ಮೊದಲು ಅಂತರರಾಷ್ಟ್ರೀಯ ಪೆನ್ ಟ್ರಾನ್ಸ್ ಲೇಟ್ಸ್ ಪ್ರಶಸ್ತಿ ದೊರಕಿತು. ನಂತರ ಸಂಕಲನದ ‘ರೆಡ್ ಲುಂಗಿ’ ಕಥೆ, 2024ರ ಜೂನ್ ಜುಲೈ ತಿಂಗಳ ದ ಪ್ಯಾರಿಸ್ ರಿವ್ಯೂ ಮ್ಯಾಗಝೀನ್ ನಲ್ಲಿ ಪ್ರಕಟವಾಯಿತು. ಸಂಕಲನದ ಇನ್ನೊಂದು ಕಥೆ " ಒಮ್ಮೆ ಹೆಣ್ಣಾಗು ಪ್ರಭುವೆ"ಯ ಅನುವಾದ ಇನ್ನೊಂದು ಸಾಹಿತ್ಯಕ ಪತ್ರಿಕೆ ಯಾದ "ದಿ ಬ್ಯಾಫ್ಲರ್" ನಲ್ಲಿ ಪ್ರಕಟವಾಯಿತು. ನಂತರ ಹಾರ್ಟ್ ಲ್ಯಾಂಪ್ ಕಥಾ ಸಂಕಲನವು ಅಮೆರಿಕದಲ್ಲಿ ಹಾಗೂ ಬ್ರಿಟನ್ ನಲ್ಲಿ ನಂತರ ಭಾರತದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ನಿಂದ 2025ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರಕಟಣಾ ಪೂರ್ವದಲ್ಲಿಯೇ ಕಥಾ ಸಂಕಲನ 2025 ರ ಅಂತರ ರಾಷ್ಟ್ರೀಯ ಬುಕ್ಕರ್ ಬಹುಮಾನದ ಪ್ರಧಾನ ಸುತ್ತಿಗೆ ಆಯ್ಕೆಯಾಗಿದ್ದು ಈಗ ಅಂತಿಮವಾಗಿ ಪುರಸ್ಕಾರವನ್ನು ಪಡೆದಿದೆ. ಇದು ಕನ್ನಡಕ್ಕೆ ದೊರೆತ ಮೊದಲ ಬೂಕರ್ ಪುರಸ್ಕಾರ ಮತ್ತು ಭಾರತಕ್ಕೆ ದೊರೆತ ಆರನೆಯದು ಎಂದು ಪ್ರಸ್ತಾಪಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಪುರಸ್ಕಾರದ ಹಾದಿಯನ್ನು ನೆನಪು ಮಾಡಿಕೊಂಡು, ಬಾನು ಮುಷ್ತಾಕ್ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಪರ್ಕ ಇಟ್ಟು ಕೊಂಡವರು. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು “ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು” ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಬಹು ಮೌಲಿಕವಾದ ಮಾತುಗಳನ್ನಾಡಿದ್ದರು. ವಿಧಾನ ಸೌಧದ ಆವರಣದಲ್ಲಿ ಅಯೋಜಿತವಾಗಿದ್ದ ‘ಪುಸ್ತಕ ಮೇಳ’ದ ಸಂದರ್ಭದಲ್ಲಿ 2.03.2025ರಂದು ನಡೆದ “ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು” ಗೋಷ್ಠಿಯಲ್ಲಿ ನನ್ನ ಸಹ ಭಾಷಣಕಾರರಾಗಿದ್ದರು, ಆಗ ಅವರಿಗೆ “ಬೂಕರ್ ಪುರಸ್ಕಾರ ಲಭಿಸಲಿ” ಎಂದು ಸಮಸ್ತ ಕನ್ನಡಿಗರ ಪರವಾಗಿ ಹಾರೈಸಿದ್ದೆ, ಅದು ಈಗ ನಿಜವಾಗಿ ಅವರಿಗೆ ದೊರೆತ ವಿಶ್ವಮನ್ನಣೆಗಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಭ್ರಮಿಸುತ್ತದೆ. ಶೀಘ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅವರಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗುವುದು. ಕನ್ನಡದ ಮಹತ್ವದ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವ ಯೋಜನೆಯೊಂದನ್ನೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆರಂಭಿಸಲಾಗುವುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More