ಕೃಷಿ ಸಂಸ್ಕೃತಿ ಈ ನಾಡಿನ ಹಿರಿಮೆ: ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಋಷಿ ಸಂಸ್ಕೃತಿ ಈ ನಾಡಿನ ಹಿರಿಮೆ, ಅದು ನಿಂತಿರುವುದು ಕೃಷಿ ಸಂಸ್ಕೃತಿಯ ಮೇಲೆ, ಎಂದು ಕಳಸದ ಗುರು ಗೋವಿಂದ ಭಟ್ಟರು ಸಂತ ಶಶಿನಾಳ ಶರೀಫರಿಗೆ ಹೇಳಿದ ಮಾತನ್ನ ನೆನಪು ಮಾಡಿ ಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ‘ಬಾಳು ನಿಂತಿರುವುದು ಕಾಳಿನ ಮೇಲೆ’ ಎಂಬ ಮಾತಿನ ಮಹತ್ವವನ್ನು ಒತ್ತಿ ಹೇಳುತ್ತಾ,. ದುಡಿಮೆಯ ಬದುಕನ್ನು ಪುರಸ್ಕರಿಸುವ ಪುರಸ್ಕಾರ ಬಹು ಮೌಲಿಕವಾದದ್ದು ಎಂದು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಯೋಜಿತವಾಗಿದ್ದ ಕೂ.ಗಿ. ಗಿರಿಯಪ್ಪ ಮತ್ತು ಶ್ರೀಮತಿ ಲಕ್ಷ್ಮಿದೇವಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ದತ್ತಿನಿಧಿ ಯೋಜನೆ ಇರಲಿಲ್ಲ. ಕೇವಲ ದಾನಿಗಳಿಂದ ದೇಣಿಗೆ ಸಂಗ್ರಹ ಮತ್ತು ವಿವಿಧ ವರ್ಗಗಳ ಸದಸ್ಯರಿಂದ ಚಂದಾ ವಸೂಲಿಯ ಆಧಾರದ ಮೇಲೆ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟು 2218 ದತ್ತಿ ಪುರಸ್ಕಾರಗಳಿದ್ದು, ಅನೇಕ ಅಭಿಮಾನಿಗಳು, ಸಂಸ್ಥೆಗಳು, ಸಂಘಟನೆಗಳು ಪರಿಷತ್ತಿಗೆ ನಿಧಿ ನೀಡಿ ದತ್ತಿ ಸ್ಥಾಪಿಸಿದ್ದಾರೆ. ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ವಾಸಿಸಿರುವ ಕನ್ನಡಿಗರೂ ಈ ನೆರವಿನಲ್ಲಿ ತಮ್ಮ ಪಾಲನ್ನು ನೀಡಿ ಅಭಿಮಾನ ಮೆರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಯಾವುದೇ ಅರ್ಜಿ-ಮರ್ಜಿಗಳಿಲ್ಲದೆ ಸಮಯ ಸಾಧಕರನ್ನು ದೂರವಿಟ್ಟು ಸಾಧಕರನ್ನು ಗುರುತಿಸಿ ಪಾರದರ್ಶಕವಾಗಿ ಪುರಸ್ಕಾರಗಳನ್ನು ನೀಡಲಾಗುತ್ತದೆ. ಬೆವರಿನಿಂದ ಬಂದ ಹಣವನ್ನಿಟ್ಟು ಕೂ.ಗಿ.ಗಿರಿಯಪ್ಪನವರು ಸ್ಥಾಪಿಸಿರುವ ದತ್ತಿಗೆ ವಿಶೇಷ ಮಹತ್ವವಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಉದ್ಘಾಟಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎಸ್.ವಿ.ಸುರೇಶ ಅವರು ನಾಡಿನಲ್ಲಿ ಇಂದಿಗೂ ಕೃಷಿ ಜನಜೀವನದ ಜೀವಾಳವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಶೇ 54ರಷ್ಟು ಜನ ಕೃಷಿಯನ್ನು ಅವಲಂಭಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ಕೃಷಿ ದೇಶದಲ್ಲಿ ಜೀವಂತವಾಗಿತ್ತು. ಕೃಷಿ, ಜನಪದ ಮತ್ತು ಸಾಹಿತ್ಯ ಪರಿಸ್ಪರ ಬೆಸೆದು ಕೊಂಡಿರುವಂತಹದು. ಈ ಮೂರು ಕ್ಷೇತ್ರಗಳ ಸಾಧಕರನ್ನು ಒಟ್ಟಿಗೆ ಗುರುತಿಸುವ ಈ ಪುರಸ್ಕಾರಕ್ಕೆ ವಿಶೇಷ ಮಹತ್ವವಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಕನಕಪುರದ ನೇಗಿಲುಯೋಗಿ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಿ.ಪಿ.ಕಾಡೇಗೌಡ ಗಬ್ಬಾಡಿಯವರು ಕೂ.ಗಿ.ಗಿರಿಯಪ್ಪನವರ ವ್ಯಕ್ತಿತ್ವದ ಹಿರಿಮೆಯನ್ನು ಬಣ್ಣಿಸಿದರು. ದತ್ತಿ ದಾನಿಗಳಾದ ಕೂ.ಗಿ.ಗರಿಯಪ್ಪನವರು ಮಾತನಾಡಿ ‘ಕಾಯ ಅಳಿಯುತ್ತದೆ, ಕಾಯಕ ಉಳಿಯುತ್ತದೆ’ ಎಂದು ಹೇಳಿ ದತ್ತಿ ರೂಪಿಸಿದ ಹಿನ್ನೆಲೆಯನ್ನು ವಿವರಿಸಿದರು. 2024ನೆಯ ಸಾಲಿಗೆ ಜಾನಪದ ಕ್ಷೇತ್ರದಲ್ಲಿ ಶಿವರುದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಬೊಮ್ಮನಾಯಕನಹಳ್ಳಿ ಕೃಷ್ಪಪ್ಪ ಅವರಿಗೆ ಮತ್ತು 2025ನೆಯ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಕೆ.ವಿ.ರವಿಕುಮಾರ್ ಅವರಿಗೆ ಶಿಕ್ಣಣ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪೂರ್ಣಚಂದ್ರ ಅವರಿಗೆ ಇದೇ ಸಂದರ್ಭದಲ್ಲಿ ಪುರಸ್ಕಾರಗಳನ್ನು ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ ಇನ್ನೊಬ್ಬ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು , ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
