ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರ ಅಗಲುವಿಕೆಗೆ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ
ಬೆಂಗಳೂರು: ನಾಡಿನ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿಗಳ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ತಮ್ಮ ಕಾವ್ಯದ ಮೂಲಕ ನಾಡನ್ನು ಚೇತನಗೊಳಿಸಿದ್ದ ಅವರು ಅಂತ:ಕರಣದ ಕಡಲಿನಂತಿದ್ದರು. ಅವರ ಒಡನಾಟದ ಆಪ್ತತೆಯನ್ನು ಹಲವು ಕಾಲ ಪಡೆದಿದ್ದ ನನಗೆ ಖಾಲಿತನದ ಭಾವ ಕಾಡುತ್ತಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಗುಲ್ಬರ್ಗದಲ್ಲಿ ನಡೆದ 85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಎಚ್.ಎಸ್.ವಿ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಅಪಾರ ವಿಶ್ವಾಸವನ್ನು ಇಟ್ಟು ಕೊಂಡವರು. ಹತ್ತಾರು ಕಾರ್ಯಕ್ರಮಗಳಿಗೆ ಬಂದಿದ್ದಲ್ಲದೆ ಸದಾ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿ ಕೊಂಡು ತಾವು ದೂರದರ್ಶನದಿಂದ ರೂಪಿಸುತ್ತಿದ್ದ ‘ಮಧುರ ಮಧುರ ವೀ ಮಂಜುಳಗಾನ’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಆನಂದ ಭಾಷ್ಪ ಸುರಿಸಿದ್ದನ್ನು ನೆನಪು ಮಾಡಿ ಕೊಂಡು ನನ್ನ ಕಣ್ಣುಗಳೂ ಈಗ ಒದ್ದೆಯಾಗುತ್ತಿವೆ ಎಂದು ಹೇಳಿದ್ದಾರೆ.
ಎಚ್.ಎಸ್.ವಿಯವರ ಬದುಕಿನ ಯಾನದತ್ತ ಒಮ್ಮೆ ಕಣ್ಣು ಹಾಯಿಸಿದರೆ ಪ್ರತಿ ಹಂತವೂ ಹೋರಾಟವೇ, ಹುಟ್ಟುವ ಮುನ್ನವೇ ತಂದೆಯನ್ನು ಕಳೆದು ಕೊಂಡು ತಾಯಿಯ ಛಲದ ಬದುಕಿನ ನೆರಳಲ್ಲಿ ಸಾಗಿದ ಬಾಲ್ಯ, ತುಂಬು ಸಂಸಾರದ ಚೊಕ್ಕಾಣಿ ಹಿಡಿಯಲು ಕಿರಿಯ ವಯಸ್ಸಿನಲ್ಲಿಯೇ ಉದ್ಯೋಗ ಹಿಡಿಯುವ ಅನಿವಾರ್ಯತೆ, ಛಲ ಬಿಡದೆ ಸ್ನಾತಕೊತ್ತರ ಪದವಿ ಓದಿದ ಕಾರಣ ಬೆಂಗಳೂರು ತಲುಪಿದ ಬದುಕು, ಇಲ್ಲಿ ಸ್ವಯಂ ಪರಿಶ್ರಮದಿಂದ ಎತ್ತರಕ್ಕೆ ಏರಿ ಇನ್ನೇನು ಬದುಕು ಸಹನೀಯ ಎನ್ನುವಾಗ ಮಡದಿ ಶ್ರೀಮತಿ ರಾಜಲಕ್ಷ್ಮಿಯವರ ಅಗಲುವಿಕೆ ಉತ್ತರಾಯಣದಲ್ಲಿ ಸಂಸಾರದ ನೆಲೆ ಅರಸುವಾಗ ಮಗನ ಅನಾರೋಗ್ಯ ಹೀಗೆ ಶೋಕದ ನೆಲೆಗಳು ಅವರನ್ನು ಬೆನ್ನಟ್ಟಿವೆ, ಆದರೆ ಶೋಕ ಅವರನ್ನು ಮಾಗಿಸುತ್ತದೆ. ಅವರ ಕಾವ್ಯಕ್ಕೆ ಶೋಕ ಅನಿವಾರ್ಯ ಎನ್ನುವ ಅರಿವಿದೆ. ಅದನ್ನು ಸಹನೀಯವಾಗಿಸಿ ಬದುಕಿನ ‘ಸ್ಥಿತಿ’ಯನ್ನಾಗಿಸುವುದು ಎಚ್.ಎಸ್.ವಿ ಕಾವ್ಯದ ಹೆಚ್ಚುಗಾರಿಕೆ. ನೋವನ್ನೋ ನಲಿವನ್ನೋ ಕಾಡುವ ಭಾಗವಾಗಿ ಉಳಿಸದೆ ಅರಿವಿನ ಸಾಧನವನ್ನಾಗಿಸುವ ಮೂಲಕ ಎಚ್.ಎಸ್.ವಿ ಎಂದೆಂದಿಗೂ ಕನ್ನಡದ ಮಹತ್ವದ ಕವಿಯಾಗಿ ಉಳಿಯುತ್ತಾರೆ . ಅವರು ನಿಜಕ್ಕೂ ಅವರ ಕವಿತೆಯಲ್ಲಿ ಬರೆದಂತೆ ‘ಅಗ್ನಿಯಿಂದ ಎದ್ದ ಬೆಳಕಾಗಿದ್ದರು’ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದ್ದಾರೆ.
ಎಚ್ಎಸ್ವಿ ಅವರು ವಿವಿಧ ಪ್ರಾಕಾರಗಳಲ್ಲಿ ಸಮರ್ಥವಾದ ಸಾಹಿತ್ಯ ಸಾಧನೆಗಳ ಪ್ರತೀಕವಾಗಿದ್ದರು. ನಮ್ಮ ನಾಡಿನಲ್ಲಿ ಇಂದು ವಿರಳವಾಗುತ್ತಿರುವ ಕನ್ನಡದ ಮೂಲ ಸಾಂಸ್ಕೃತಿಕ ಪರಂಪರೆಗಳ ಮೇರು ಪ್ರತಿನಿಧಿಯಾಗಿದ್ದರು. ಅವರಿಗೆ ಬರವಣಿಗೆ ಎಂಬುದೊಂದು ಪ್ರೀತಿ. ಅಲ್ಲಿ ‘ನಾನು’ ಎಂಬ ಅವರು ಕಳೆದುಹೋಗಿರುತ್ತಿದ್ದರು ಅಥವಾ ಅವರು ಅವರ ಬರವಣಿಗೆಯಲ್ಲಿ ಕಾಣುವ ಹನಿ ಹನಿಯಲ್ಲೂ ತಮ್ಮನ್ನು ಪ್ರೀತಿಯಿಂದ ಅಧ್ಯಾತ್ಮವಾಗಿರಿಸಿಕೊಂಡಿರುತ್ತಿದ್ದರು. ಅವರ ‘ಅನಾತ್ಮ ಕಥನ’ ಓದುತ್ತಿದ್ದಂತೆ ಅವರಲ್ಲಿ ತಾವು ಕಂಡಿದ್ದರಲ್ಲೆಲ್ಲಾ ಪ್ರೀತಿಯೇ ಆಗಿಬಿಡುವ ಮನೋಜ್ಞ ಸರಳತೆ ಆತ್ಮೀಯವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಅವರನ್ನು ವಂಚಿಸಿದವರ ಕಥೆ ಹೇಳುವಾಗ ಕೂಡಾ ಅವರ ಬಗ್ಗೆ ಅವರಲ್ಲಿರುವುದು ಒಂದು ರೀತಿಯ 'ಪ್ರೀತಿಯೇ ಏನೋ' ಎಂಬ ಭಾವ ಹುಟ್ಟಿಸುತ್ತಾರೆ. ಅವರ ಅಗಲುವಿಕೆ ಕನ್ನಡ ಸಾಹಿತ್ಯದಲ್ಲಿ ಮಹಾಶೂನ್ಯವನ್ನು ನಿರ್ಮಿಸಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿ ಅವರ ಕುಟುಂಬವರಿಗೆ ಈ ಅಗಲುವಿಕೆ ಸಹಿಸುವ ಶಕ್ತಿ ಬರಲಿ ಎಂದು ಪ್ರಾರ್ಥಿಸಿ ‘ತಿಳಿ ನೀಲದಲ್ಲಿ ನೀಲವಾಗಿ ಅವ ಹೋದ ದೂರ ದೂರ’ ಎಂಬ ಡಿ.ಎಸ್.ಕರ್ಕಿಯವರ ಕವಿತೆಯಂತೆ ಎಚ್.ಎಸ್.ವಿ ನಮ್ಮಿಂದ ದೂರವಾಗಿದ್ದಾರೆ. ಅವರ ಬಿಟ್ಟು ಹೋದ ಬೆಳಕು ಸದಾ ನಮ್ಮೊಡನಿರುತ್ತದೆ ಎಂದಿದ್ದಾರೆ.
ಎನ್.ಎಸ್. ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
