ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಸರಹದ್ದುಗಳು ಹಿಗ್ಗುತ್ತಿವೆ: ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರದಿಂದಾಚೆಗೂ ತನ್ನ ಸಾಂಸ್ಕೃತಿಕ ಸರಹದ್ದನ್ನು ವಿಸ್ತರಿಸಿ ಕೊಳ್ಳುತ್ತಿದ್ದು, ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಸಾಧಕರಿಗೆ ನೀಡುವ ಎಂ.ಎಲ್.ಮಾದಯ್ಯ ದತ್ತಿ ಪುರಸ್ಕಾರ ಅದಕ್ಕೆ ಸಾಕ್ಷಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರಿಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ಎಂ.ಎಲ್.ಮಾದಯ್ಯ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಿದ್ದರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಅರ್ಬಿಟ್ರೇಟರ್ಸ್ ನ ಕರ್ನಾಟಕ ವಲಯದ ಛೇರ್ಮನ್ ಆಗಿದ್ದ ಎಂ.ಎಲ್.ಮಾದಯ್ಯನವರು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿದವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನದಿಂದ ದತ್ತಿ ನಿಧಿಯನ್ನು ಸ್ಥಾಪಿಸಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದವರಿಗೆ ಪುರಸ್ಕಾರ ನೀಡುವಂತೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆಗೆ ಕಾರಣಕರ್ತರಾದ ಸರ್.ಎಂ.ವಿಶ್ವೇಶ್ವರಯ್ಯನವರೂ ಇಂಜಿನಿಯರ್ ಆಗಿ ದೊಡ್ಡ ಹೆಸರನ್ನು ಪಡೆದವರು ಎಂದು ಸ್ಮರಿಸಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಸಾಧನೆಗೆ ಸವಾಲುಗಳು ಜಾಸ್ತಿ, ಹಣ್ಣು ಇರುವ ಮರಕ್ಕೆ ಕಲ್ಲು ಹೊಡೆಯುವವರು ಜಾಸ್ತಿ, ಟೀಕಿಸುವವರೇ ಮುಂದೆ ಸಾಧನೆಗೆ ಬೆರಗಾಗಿ ಆರಾಧಿಸಲು ತೊಡಗುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಸಮಯ ಸಾಧಕರನ್ನು ದೂರವಿಟ್ಟು ಇಂತಹ ಸಾಧಕರನ್ನು ಗುರುತಿಸಿ ಪುರಸ್ಕಾರಗಳನ್ನು ನೀಡುತ್ತದೆ ಅದು ಬೇರೆಯವರಿಗೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಗಾಂದಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ಅವರು ಮಾತನಾಡಿ ಮಾದಯ್ಯನವರು ಪರಿಶುದ್ಧ ಮನಸ್ಸಿನ ಆದರ್ಶ ಜೀವಿ, ರೈತರ ಕುರಿತ ಅವರ ಕಾಳಜಿ ನೈಜವಾದದ್ದು, ನಾಡೋಜ ಡಾ.ಮಹೇಶ ಜೋಶಿಯವರೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಆಡಳಿತದ ಮೂಲಕ ಪರಿಶುದ್ಧತೆಯನ್ನು ತಂದಿದ್ದಾರೆ. ಇಂತಹ ಪರಿಶುದ್ಧತೆ ಈ ಪುರಸ್ಕಾರಕ್ಕೂ ಇದೆ ಎಂದು ಶ್ಲಾಘಿಸಿದರು. ಪ್ರಶಸ್ತಿ ಪ್ರದಾನ ಮಾಡಿದ ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರರಾದ ಎಸ್.ರಾಮದಾಸ್ ಕೋಲಾರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಇದ್ದ ನೀರಿನ ಕಷ್ಟಕರ ಸ್ಥಿತಿಯನ್ನು ವಿವರಿಸಿ ಪ್ರಶಸ್ತಿ ಪುರಸ್ಕೃತರಾದ ಎಂ.ಕೃಷ್ಣ ಅವರು ಜಿಲ್ಲೆಗೆ ನೀರನ್ನು ಒದಗಿಸಲು ಮಾಡಿದ ಸಾಹಸವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕರಾದ ಡಾ.ಕೆ.ಪಿ.ಪುತ್ತೂರಾಯ ಅವರು ಬಾಗುವ ಗುಣವನ್ನು ಮಾನವರು ಕಲಿಯಬೇಕು ಎಂದು ಹೇಳಿ, ಪುರಸ್ಕಾರಗಳು ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ, ಪುರಸ್ಕಾರ ನೀಡುವವರ ಮೌಲ್ಯಗಳು ಬಿಂಬಿತವಾಗುತ್ತವೆ ಎಂದು ಸ್ವಾರಸ್ಯಕರ ಘಟನೆಗಳ ಮೂಲಕ ಪುರಸ್ಕಾರದ ಮಹತ್ವವನ್ನು ವಿವರಿಸಿದರು.
ದತ್ತಿದಾನಿಗಳಾದ ಎಂ.ಎಸ್.ಮಾದಯ್ಯನವರು, ಪುರಸ್ಕೃತರಾದ ಎಂ.ಕೃಷ್ಣ ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ ಇನ್ನೊಬ್ಬ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು , ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
