CreamA Cream article
Article

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನು ಎತ್ತಿ ಹಿಡಿದಿದ್ದ ನಾಲ್ವಡಿ ಶ್ರೀಕೃಷ್ಣ ರಾಜ ಒಡೆಯರ್: ನಾಡೋಜ ಡಾ.ಮಹೇಶ ಜೋಶಿ

ಕಸಾಪ

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯನ್ನು ಎತ್ತಿ ಹಿಡಿದಿದ್ದ ನಾಲ್ವಡಿ ಶ್ರೀಕೃಷ್ಣ ರಾಜ ಒಡೆಯರ್: ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಇದ್ದ ಸಂಬಂಧ ತಾಯಿ-ಮಗುವಿನಷ್ಟೇ ನಿಕಟವಾದದ್ದು. ಅವರು ಕೇವಲ ಸಂಸ್ಥಾಪಕರು ಮಾತ್ರವಲ್ಲದೆ ಅದರ ಬೆಳವಣಿಗೆಯಲ್ಲಿಯೂ ಕೂಡ ನಿರಂತರವಾಗಿ ಆಸಕ್ತಿ ವಹಿಸುತ್ತಾ ಪೋಷಕರಾಗಿ, ಮಾರ್ಗದರ್ಶಕರಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವುದರ ಜೊತೆಗೆ ಅದು ಸ್ವಾಯತ್ತ ಸಂಸ್ಥೆಯಾಗ ಬೇಕು ಎಂದು ಆರಂಭದಿಂದಲೇ ಪ್ರತಿಪಾದಿಸುತ್ತಾ ಬಂದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ,ಮಹೇಶ ಜೋಶಿಯವರು ಹೇಳಿದರು. ಅವರು ಜೂನ್ 4ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ನಡೆದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 141ನೆಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

1918ರಲ್ಲಿ ನಾಲ್ಕನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಅಯೋಜಿತವಾದಾಗ ಸಮ್ಮೇಳನಾಧ್ಯಕ್ಷತೆಯ ಕಲ್ಪನೆ ಬಂದಿತು. ಸಮ್ಮೇಳನಾಧ್ಯಕ್ಷತೆಯ ಕುರಿತು ಮಹಾರಾಜರ ಸೂಚನೆಯನ್ನು ಅಪೇಕ್ಷಿಸಿ ಪಂಡಿತರ ನಿಯೋಗವು ಬಂದಾಗ ‘ಕನ್ನಡ ಸಾಹಿತ್ಯ ಪರಿಷತ್ತನ್ನು ನೋಡಿ ಕೊಳ್ಳಲು ಪರಿಣಿತರು ಇದ್ದಾರೆ, ಅವರು ನಿರ್ಣಯಿಸಲಿ, ಅರಮನೆ ಇದರಲ್ಲಿ ಮಧ್ಯ ಪ್ರವೇಶಿಸುವುದಿಲ್ಲ” ಎಂದು ಬಹಳ ಸ್ಪಷ್ಟವಾಗಿ ಹೇಳಿ ಪರಿಷತ್ತು, ಸಾಗ ಬೇಕಾದ ದಾರಿಯನ್ನು ಅವರು ಖಚಿತ ಪಡಿಸಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿ ಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ರಜತಮಹೋತ್ಸವದಲ್ಲಿ ಸಭಿಕರು ದರ್ಬಾರು ಉಡುಗೆ ಧರಿಸ ಬೇಕು ಎನ್ನುವ ಪ್ರಸ್ತಾಪ ಬಂದಾಗ ಬಹಳ ಸ್ಪಷ್ಟವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯತ್ತ ಸಂಸ್ಥೆ ಅದರ ಆಡಳಿತದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದರು. ಇಂತಹ ಘಟನೆಗಳು ನಾಲ್ವಡಿಯವರ ಸ್ವಾಯತ್ತತೆಯ ಕಲ್ಪನೆಯನ್ನು ತೋರಿಸುವಂತಿದ್ದು, ಇದು ಇಂದಿಗೂ ಮಾದರಿಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿವರಿಸಿದರು. ನಾಲ್ವಡಿಯವರು ಪ್ರತಿಪಾದಿಸಿದ್ದ ಸ್ವಾಯತ್ತತೆಯ ಅಂಶ ಇವತ್ತು ಎಂದಿಗಿಂತಲೂ ಹೆಚ್ಚು ಮಹತ್ವನ್ನು ಪಡೆದು ಕೊಂಡಿದೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ದಿನನಿತ್ಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಮೂಗು ತೂರಿಸಿ ಕನ್ನಡಪರ ಚಟುವಟಿಕೆಗಳಿಗೆ ಅಡ್ಡಗಾಲನ್ನು ಹಾಕಿ, ಹಿಂಬಾಗಿಲಿನಿಂದ ಆಡಳಿತ ನಡೆಸಲು ಪ್ರಯತ್ನಿಸುತ್ತಿವೆ ಎಂದು ನೇರವಾಗಿ ಹೇಳಿದರು.

ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ನಾಲ್ವಡಿಯವರ ನಿಲುವಿಗೆ ತದ್ವಿರುದ್ದ ಎನ್ನಿಸುವಂತೆ, ಇಂತಹವರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿರುವುದು ನಮ್ಮ ಮೌಲ್ಯಗಳು ಹೇಗೆ ಕುಸಿದಿವೆ ಎಂಬುದರ ಸೂಚಕ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇರವಾಗಿ ಸಂಬಂಧವಿಲ್ಲದ, ಜಿಲ್ಲಾಡಳಿತದ ವ್ಯಾಪ್ತಿಯಲ್ಲಿರುವ ವಿಷಯಗಳ ಬಗ್ಗೆ, ತಕರಾರು ತೆಗೆದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮತ್ತು ಚುನಾಯಿತ ಅಧ್ಯಕ್ಷರಿಗೆ ಅಗೌರವ ಸೂಚಿಸುವುದರ ಜೊತೆಗೆ ನಿರಂತರ ಅಪಪ್ರಚಾವನ್ನು ನಡೆಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಪರಂಪರೆಯನ್ನು ಆರಂಭಿಸಿದವರೇ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರು, ಇದನ್ನು ಮುಂದಿನ ಎಲ್ಲಾ ಕನ್ನಡ ಸರ್ಕಾರಗಳೂ ಮುಂದುವರೆಸಿ ಕೊಂಡು ಬಂದಿವೆ. ಆದರೆ ಈ ಕುರಿತು ಸಂಬಂಧವಿಲ್ಲದ ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಮೇಲೆ ಒತ್ತಡ ತಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಜ್ಯ ಸರ್ಕಾರದ ನಡುವೆ ಇರುವ ಸಮಧುರ ಬಾಂಧವ್ಯಕ್ಕೆ ಹುಳಿ ಹಿಂಡುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಮನೋಭಾವದ ಕುರಿತು ಸರ್ಕಾರ ಎಚ್ಚರಿಕೆ ವಹಿಸ ಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಸರ್ಕಾರವನ್ನು ವಿನಂತಿಸಿ ಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ತಿದ್ದುಪಡಿ ಸಂಪೂರ್ಣ ಅಂತರಿಕ ವಿಷಯವಾಗಿದ್ದು ಇದಕ್ಕಾಗಿ ತಿದ್ದುಪಡಿ ಸಲಹಾ ಸಮಿತಿ ರಚನೆಯಾಗಿ ಕಾರ್ಯಕಾರಿ ಸಭೆಯಲ್ಲಿ ಚರ್ಚಿತವಾಗಿ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಂಗೀಕಾರವಾಗುವ ಪ್ರಕ್ರಿಯೆ ಸಂಪೂರ್ಣ ನಿಯಮಬದ್ದವಾಗಿ ನಡೆದಿದೆ. ಹೀಗಿದ್ದರೂ ಈ ಕುರಿತು ಆಕ್ಷೇಪಣೆ ಸೂಚಿಸಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾದವು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಇದು ನಾಲ್ವಡಿಯವರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಸಮಿತಿ, ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಮುಂದೆ ವಾಸ್ತವಿಕಾಂಶವನ್ನು ತೆರೆದಿಟ್ಟು ಪಟ್ಟಭದ್ರ ಹಿತಾಸಕ್ತಿಗಳ ಮುಖವಾಡವನ್ನು ಕಳಚುವ ಕೆಲಸವನ್ನು ಮಾಡಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದಾಗ ನೆರೆದಿದ್ದ ಕನ್ನಡಾಭಿಮಾನಿಗಳೆಲ್ಲರೂ ಜೋರಾದ ಕರತಾಡನದ ಮೂಲಕ ಅದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ರಾಜ್ಯ ಚುನಾವಣಾ ಆಯುಕ್ತರಾದ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅವರು ಸಾಮಾಜಿಕ ಕಾಳಜಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಸೂರು ಸಂಸ್ಥಾನಕ್ಕೆ ಪರಿಚಯಿಸಿದ ನಾಲ್ವಡಿಯವರ ಜನ್ಮದಿನವನ್ನು ‘ಸಾಮಾಜಿಕ ಕಾಳಜಿ’ ದಿನವನ್ನಾಗಿ ಆಚರಿಸ ಬೇಕು ಎಂದು ಅಭಿಪ್ರಾಯ ಪಟ್ಟು, ಅವರ ಸ್ಪಷ್ಟತೆ ಮತ್ತು ಮುನ್ನೋಟಗಳು ನಮಗೆ ಇಂದಿಗೂ ಮಾರ್ಗದರ್ಶಕ ಎಂದರು. ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಕುರಿತು ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ನಾಲ್ವಡಿಯವರ ಕುರಿತು ವಿಶೇಷ ಉಪನ್ಯಾಸ ನೀಡಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ ಸಾಧನೆಯ ಹಿಂದೆ ಹತ್ತನೆಯ ಚಾಮರಾಜ ಒಡೆಯರ್ ರೂಪಿಸಿದ ಹಿನ್ನೆಲೆ ಇದೆ. ಅಂದಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವೂ ಅವರಿಗೆ ಪೂರಕವಾಗಿತ್ತು. ಅವರು ವರ್ತಮಾನದ ಸಾಧ್ಯತೆಗಳನ್ನು ನಿಖರವಾಗಿ ಬಳಿಸಿ ಕೊಂಡು ಮಹತ್ತರವಾದ ಕೊಡುಗೆಗಳನ್ನು ನೀಡಿದರು ಎಂದು ವಿಶ್ಲೇಷಿಸಿದರು. ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ನಾಗಯ್ಯನವರು ನಾಲ್ವಡಿಯವರ ಕಾಲವಾಧಿಯನ್ನು ಸುವರ್ಣ ಸಂದರ್ಭ ಎಂದು ವರ್ಣಿಸಿದರು. ದತ್ತಿದಾನಿಗಳಾದ ಟಿ.ಕೃಷ್ಣರಾಜು ಮತ್ತು ಡಾ.ಎಂ.ಜಿ.ನಾಗರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಮಹಾಲಕ್ಷ್ಮಿ ಟಿ.ಕೃಷ್ಣರಾಜು ಸವಿನೆನಪಿನ ದತ್ತಿ ಪುರಸ್ಕಾರವನ್ನು ಕು.ಚಿನ್ಮಯಿ.ಪಿ.ಎಸ್, ಕು.ಗಂಗಶ್ರೀ.ಡಿ, ಕು.ಲಿಖಿತಾ, ಕು.ಸುಶೀಲಾ.ಎಸ್ ಅವರಿಗೂ ಶ್ರೀಮತಿ ವಿ.ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿಯನ್ನು ಎಂ.ಟಿ.ತಿಮ್ಮಪ್ಪ ಮತ್ತು ಶ್ರೀಮತಿ.ಎಸ್.ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿಯನ್ನು ಜಿ.ಸೀತಾರಾಮು ಅವರಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ ಇನ್ನೊಬ್ಬ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು , ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More