ತಮಿಳಿನಿಂದ -ಕನ್ನಡ ಎಂದು ಹೇಳಿಕೆ ನೀಡಿ ಕನ್ನಡ ಭಾಷೆಗೆ ಅಪಮಾನ ಮಾಡಿದಂತಹ ಕಮಲ್ ಹಾಸನ್ ವಿವಾದ ಕುರಿತ ರಿಟ್ ಪಿಟಿಷನ್ ನಲ್ಲಿ ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಮಹತ್ವದ ಕುರಿತು ಮಧ್ಯಸ್ಥಗಾರನಾಗಲು ಕನ್ನಡ ಸಾಹಿತ್ಯ ಪರಿಷತ್ತು ಅರ್ಜಿ
ಬೆಂಗಳೂರು: ತಮ್ಮ ‘ಥಗ್ ಲೈಫ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ‘ತಮಿಳಿನಿಂದ -ಕನ್ನಡ ಭಾಷೆ’ ಹುಟ್ಟಿದೆ ಎಂದು ಕಮಲ್ ಹಾಸನ್ ವಿವಾದಾತ್ಮಕ ನೀಡಿದ ಹೇಳಿಕೆ, ಕರ್ನಾಟಕದಲ್ಲಿ ತೀವ್ರ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಕೂಡ ತನ್ನ ಆಕ್ಷೇಪಣೆಯನ್ನು ವ್ಯಕ್ತ ಪಡಿಸಿ ಕನ್ನಡ ಭಾಷೆಯ ಹಿರಿಮೆಯ ಕುರಿತು ಸ್ಪಷ್ಟ ಚಿತ್ರಣವನ್ನು ನೀಡಿತ್ತು.
ಈಗ ‘ಥಗ್ ಲೈಫ್’ ಚಿತ್ರದ ನಿರ್ಮಾಪಕರಾದ ರಾಜ್ ಕಮಲ್ ಫಿಲಂಸ್ ಇಂಟರ್ ನ್ಯಾಷನಲ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂಬರ್ 15580 ಆಫ್ 2025ರಂತೆ ಅರ್ಜಿಯನ್ನು ಸಲ್ಲಿಸಿ ತಮ್ಮ ಚಿತ್ರದ ಬಿಡುಗಡೆಗೆ ಪೋಲೀಸ್ ರಕ್ಷಣೆಯನ್ನು ಕೋರಿದೆ. ಇಡೀ ಅರ್ಜಿಯು ವಾಣಿಜ್ಯಿಕ ಸ್ವರೂಪದ್ದಾಗಿದ್ದು ತಮ್ಮ ಚಿತ್ರ ಬಿಡುಗಡೆಯನ್ನು ಮಾತ್ರ ಗಮನದಲ್ಲಿರಿಸಿದೆಯೇ ಹೊರತು ಕಮಲಾ ಹಾಸನ್ ಹೇಳಿಕೆಯಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ಅಘಾತದ ಕುರಿತು ಪ್ರಸ್ತಾಪಿಸಿಲ್ಲ ಅಷ್ಟೇ ಅಲ್ಲ ವಿಷಾದವನ್ನು ಕೂಡ ವ್ಯಕ್ತ ಪಡಿಸಿಲ್ಲ, ಅಂತಹ ಉದ್ದೇಶವೂ ಅರ್ಜಿದಾರರಿಗಿಲ್ಲ ಎನ್ನುವುದು ಅರ್ಜಿಯ ಸ್ವರೂಪದಲ್ಲಿಯೇ ಖಚಿತವಾಗಿದೆ. ಇದರ ಜೊತೆಗೆ ಕಮಲ್ ಹಾಸನ್ ಇದುವರೆಗೂ ಈ ಕುರಿತು ವಿಷಾದವನ್ನು ವ್ಯಕ್ತ ಪಡಿಸದೆ ತಮ್ಮ ಹಠವನ್ನು ಮುಂದುವರೆಸಿ ಕೊಂಡು ಬಂದು ಕನ್ನಡಿಗರ ಮನಸ್ಸಿಗೆ ಇನ್ನಷ್ಟು ನೋವ ಮತ್ತು ಆಘಾತವನ್ನು ಉಂಟು ಮಾಡಿದ್ದಾರೆ ಎಂಬ ಘಟನೆಗಳನ್ನು ಸ್ಮರಿಸಿ ಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಧ್ಯಸ್ಥಗಾರರಾಗಲು (Intervention Applicant) ಇರುವ ಕಾರಣಗಳನ್ನು ಗುರುತಿಸಿದ್ದಾರೆ.
1915ರಲ್ಲಿಯೇ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಂದ ಸಂಸ್ಥಾಪಿಸಲ್ಪಟ್ಟು ಕನ್ನಡಿಗರೆಲ್ಲರ ಮಾತೃಸಂಸ್ಥೆ ಎನ್ನಿಸಿ ಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ನ್ಯಾಯಾಲಯದಲ್ಲಿ ಕಮಲ್ ಹಾಸನ್ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಪರಂಪರೆಯ ಕುರಿತ ಪ್ರಶ್ನೆಗಳಿವೆ ಎನ್ನುವ ಅಂಶವನ್ನು ಗಮನಿಸಿ ನ್ಯಾಯಾಂಗ ಕಲಾಪದಲ್ಲಿ ವಾಣಿಜ್ಯಿಕ ಅಂಶಗಳಿಗೆ ಮಹತ್ವ ದೊರೆತರೆ ಈ ಮುಖ್ಯವಾದ ಸಾಹಿತ್ಯಿಕ, ಸಾಂಸ್ಕೃತಿಕ ಪ್ರಶ್ನೆ ಮರೆಯಾಗಿ ಬಿಡ ಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಮಹತ್ವದ ಕುರಿತಾಗಿ ಸಂವಿಧಾನಿಕ ಚೌಕಟ್ಟಿನಲ್ಲಿ ಕನ್ನಡಿಗರೆಲ್ಲರ ಪರವಾಗಿ ಮಧ್ಯಸ್ಥಗಾರನಾಗಲು ಅರ್ಜಿಯನ್ನು ಸಲ್ಲಿಸಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರ ತಿಳಿಸಿದ್ದಾರೆ.
ಕನ್ನಡ ನಾಡು, ನುಡಿ, ಕನ್ನಡಿಗರ ಕುರಿತು ಕಳೆದ 110 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ದಾಖಲೆ ಆಧಾರಗಳನ್ನು ನೀಡಿ ಕನ್ನಡದ ಅಸ್ಮಿತೆ ಮತ್ತು ಸ್ವಂತಿಕೆಯ ಕುರಿತಾಗಿ ಸಂವಿಧಾನಿಕ ಚೌಕಟ್ಟಿನಲ್ಲಿ ಕನ್ನಡಿಗರೆಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ತನ್ನ ವಾದವನ್ನು ಮಂಡಿಸಲು ಇಚ್ಚಿಸಿದೆ. ಕಮಲಾಹಾಸನ್ ಅವರ ಬೇಜವಾಬ್ದಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಹಿರಿಮೆ ಮತ್ತು ಪರಂಪರೆಗೆ ಉಂಟಾಗಿರುವ ಅಘಾತವನ್ನು ಸಂಶೋಧನಾತ್ಮಕ ದಾಖಲೆ, ಭಾಷಾಶಾಸ್ತ್ರದ ಕೃತಿಗಳು, ಭಾಷಾ ಸಂಬಂಧಿ ವಿವರಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿಯನ್ನು ನೀಡಿ ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟ ಪಡಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲವೆಂದೂ ಇದು ಕನ್ನಡಿಗರ ಘನತೆ, ಗೌರವಗಳಿಗೆ ಅರ್ಜಿದಾರರಿಂದ ಆಗಿರುವ ಹಾನಿಯನ್ನು ಗಮನಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿರುವ ಅರ್ಜಿ ಎಂದೂ ನಾಡೋಜ ಡಾ.ಮಹೇಶ ಜೋಶಿಯವರ ಸ್ಪಷ್ಟ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕನ್ನಡಗರೆಲ್ಲರ ಮಾತೃಸಂಸ್ಥೆ ಮತ್ತು ಎಲ್ಲಾ ಕನ್ನಡ ಸಂಘಗಳ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯ ಹುಟ್ಟು ಬೆಳವಣಿಗೆಯ ಕುರಿತ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಲು ಇಚ್ಚಿಸಿ ತನ್ನನ್ನು ಮಧ್ಯಸ್ಥಗಾರರನ್ನಾಗಿ ಮಾಡ ಬೇಕೆಂದು ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ನ್ಯಾಯಾಲಯದಲ್ಲಿ ಸಲ್ಲಿಸಿದೆ. ಇದು ಇತಿಹಾಸದಲ್ಲಿ ದಾಖಲಾಗ ಬಹುದಾದ ಪ್ರಸಂಗವಾದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು ಈ ಸಂದರ್ಭವನ್ನು ಬಳಸಿ ಕೊಂಡು ಸ್ಪಷ್ಟ ಚಿತ್ರಣವನ್ನು ನೀಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡಿಗರ ಭಾವನೆಗಳನ್ನು ಗೌರವಿಸುವ ಮತ್ತು ವಾಸ್ತವಾಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಡುವ ಈ ಪ್ರಯತ್ನವು ಅತ್ಯುತ್ತಮವಾದ ಕಾರ್ಯವಾಗಿದೆ ಎಂದು ಸಾಹಿತ್ಯಿಕ, ಸಾಂಸ್ಕೃತಿಕ ವಲಯಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಜನಸಾಮಾನ್ಯರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಎನ್.ಎಸ್. ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
