ಮಾಸ್ತಿ, ಖಾದ್ರಿ, ಮ.ನ.ಮೂರ್ತಿ, ನಾ.ಡಿಸೋಜ ಕನ್ನಡದ ಕಟ್ಟಾಳುಗಳು: ನಾಡೋಜ ಡಾ.ಮಹೇಶ ಜೋಶಿ
ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್, ಖಾದ್ರಿ ಶಾಮಣ್ಣ, ಮ.ನ.ಮೂರ್ತಿ ಮತ್ತು ನಾ.ಡಿಸೋಜ ಕನ್ನಡದ ಕಟ್ಟಾಳುಗಳು, ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಇಂದು ಸದೃಡತೆ ಪಡೆದಿದ್ದರೆ ಈ ನಾಲ್ವರು ನೀಡಿದ ಕೊಡುಗೆ ಕಾರಣ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಈ ನಾಲ್ವರು ಮಹನೀಯರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು, ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮಾಸ್ತಿಯವರು ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗ ಬೇಕು ಎಂದು ಸೂಚಿಸಿದವರಲ್ಲಿ ಪ್ರಮುಖರು. ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು 1943ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾಸರರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದರು. ‘ಕನ್ನಡ ಸರಸ್ವತಿ ಹಳ್ಳಿಗೆ ಬಂದಳು’ ಎನ್ನುವ ಯೋಜನೆಯಡಿ ಹಳ್ಳಿ-ಹಳ್ಳಿಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ನಡೆದವು. ಅವರ ಅವಧಿಯಲ್ಲಿಯೇ ಪರಿಷತ್ತಿಗೆ ದೂರವಾಣಿ ಸೌಲಭ್ಯ ಬಂದಿತು ಅಶುಭಾಷಣ, ಕಂಠಪಾಠ, ದೇವರನಾಮ, ಅಭಿನಯ, ಹಾಡುಗಾರಿಕೆ ಹೀಗೆ ವಿವಿಧ ಸ್ಪರ್ಧೆಗಳು ನಡೆದವು. ಮಾಸ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಷ್ಟೇ ದೂರ ಪ್ರಯಾಣ ಮಾಡಿದರೂ ಪ್ರಯಾಣ ಭತ್ಯವನ್ನು ಪಡೆಯುತ್ತಿರಲಿಲ್ಲ. ಮಾಸ್ತಿ ವೆಂಕಟೇಶ ಅಯ್ಯಂಗಾರರು 1929ರ ಮೇ 12,13,14 ರಂದು ಬೆಳಗಾವಿಯಲ್ಲಿ ನಡೆದ 15ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಮಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಸ್ತು ಮತ್ತು ಮೌಲ್ಯಗಳನ್ನು ನೀಡಿದರು. ಇಂದಿಗೂ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ಹೇಳಿ ಮಾಸ್ತಿಯವರ ಜೊತೆಗಿನ ತಮ್ಮ ಒಡನಾಟದ ಘಟನೆಗಳನ್ನು ಸ್ಮರಿಸಿ ಕೊಂಡು ತಮ್ಮ ನುಡಿ ನಮನವನ್ನು ಸಲ್ಲಸಿದರು.
ಖಾದ್ರಿ ಶಾಮಣ್ಣ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ತೀಕ್ಷ್ಣ ಸಂಪಾದಕೀಯಗಳಿಗೆ, ರಂಗುರಂಗಾದ ನುಡಿ ಚಿತ್ರಗಳಿಗೆ, ರೋಚಕ ತಲೆಬರಹಗಳಿಗೆ, ವ್ಯಕ್ತಿ-ಊರು-ದೇಶಗಳ ಹೆಸರುಗಳನ್ನು ಕರಾರುವಾಕ್ಕಾಗಿ ಹೇಳುವ ಪ್ರತಿಭಾವಂತಿಕೆಗೆ ಮತ್ತೊಂದು ಹೆಸರು ಖಾದ್ರಿ ಶಾಮಣ್ಣ ಎಂಬ ಮಾತಿತ್ತು. ಅವರಿಗೆ ಪತ್ರಿಕೋದ್ಯಮ ಒಂದು ದೀಕ್ಷೆಯಾಗಿತ್ತು. ಕನ್ನಡದ ಕೂಗಾಗಲಿ, ಸಮಾಜದ ತುಳಿತಕ್ಕೊಳಗಾದವರ ದನಿಯಾಗಲಿ, ಮಹಿಳೆಯರ ಆರ್ತನಾದವಾಗಲಿ, ಖಾದ್ರಿಯವರ ಲೇಖನಿಗೆ ಅವನ್ನೆಲ್ಲಾ ಮನಮುಟ್ಟುವಂತೆ ಚಿತ್ರಿಸುವ ಸತ್ವ-ಕಸುವು ಇತ್ತು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಖಾದ್ರಿಯವರ ವ್ಯಕ್ತಿಚಿತ್ರಗಳು ಚಿತ್ತಾಕರ್ಷಕವಾಗಿದ್ದವು. ಪುಟ್ಟ ಪುಟ್ಟ ವಾಕ್ಯಗಳಿಂದ, ಕನ್ನಡಕ್ಕೆ ಹೊಸತನತಂದರು.. ಖಾದ್ರಿಯವರ ಬಾನುಲಿ ಭಾಷಣಗಳು, ಚಿಂತನ ಕಾರ್ಯಕ್ರಮಗಳು ಶ್ರೋತೃಗಳಿಗೆ ರಸದೂಟವಾಗಿದ್ದವು. ಅವರು ಜೀವನದಲ್ಲೂ ಶಿಸ್ತು, ಅಚ್ಚುಕಟ್ಟುತನಕ್ಕೆ ಆದ್ಯತೆ ನೀಡಿದ್ದರು ಎಂದು ಹೇಳಿ ತಮ್ಮ ನುಡಿನಮನವನ್ನು ಸಲ್ಲಿಸಿದರು.
ತಾವು ನಿಕಟವಾಗಿ ಬಲ್ಲ ಮ.ನ.ಮೂರ್ತಿಯವರ ವಿಶೇಷತೆಗಳನ್ನು ಸ್ಮರಿಸಿ ಕೊಂಡ ನಾಡೋಜ ಡಾ.ಮಹೇಶ ಜೋಶಿಯವರು, ಅವರ ‘ಶಾಂತಲಾ’ ಕಾದಂಬರಿ ಹೊಸ ದಾಖಲೆಯ್ನನೇ ಸೃಷ್ಟಿಸಿತ್ತು. ಇವರ ಕಾದಂಬರಿಗಳಲ್ಲಿ ‘ದೇವರ ಮಕ್ಕಳು’ (1970), ‘ಸ್ವಯಂವರ’ (1973), ಮತ್ತು ‘ಬಿಳೀ ಹೆಂಡ್ತಿ’ (1975) ಚಲನಚಿತ್ರಗಳಾಗಿ ಜನಪ್ರಿಯಗೊಂಡವು. ‘ಗಾನಯೋಗಿ ರಾಮಣ್ಣ’ ಬಿಡುಗಡೆ ಕಾಣದಿದ್ದರೂ ಅದರ ಗೀತೆಗಳು ಜನಪ್ರಿಯವಾದವು ಎಂದು ಹೇಳಿ ಕನ್ನಡ ಲಿಪಿ ಸುಧಾರಣೆಗೆ ಮತ್ತು ಕನ್ನಡ ರಾಜ್ಯ ಭಾಷೆಯಾಗಲು ಅವರು ನಡೆಸಿದ ಹೋರಾಟವನ್ನು ನೆನಪು ಮಾಡಿಕೊಂಡು ತಮ್ಮ ನುಡಿನಮನಗಳನ್ನು ಸಲ್ಲಿಸಿದರು.
ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು ಐದು ನೂರು ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯ ಬರಹ ಮಾಡಿದ್ದರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಇವರ 'ಮುಳುಗಡೆಯ ಊರಿಗೆ ಬಂದವರು' ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ’ ಸಂದಿದೆ. 'ದ್ವೀಪ' ಮತ್ತು 'ಕಾಡಿನ ಬೆಂಕಿ' ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ. 2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಬಹಳ ಸ್ಪಷ್ಟವಾಗಿ ಜಾಗತೀಕರಣದ ಆತಂಕಗಳನ್ನು ತೆರೆದಿಟ್ಟಿದ್ದರು. ʼರೈತನನ್ನು ತಾನು ಬೆಳೆಯುತ್ತಿದ್ದ ಭೂಮಿಯ ಮೇಲಿನ ಕಾರ್ಖಾನೆಯ ಕಾವಲುಗಾರನನ್ನಾಗಿ ನಿಲ್ಲಿಸುವುದು ಇಂದಿನ ದು:ಸ್ಥಿತಿಯ ರೂಪಕವಾಗಿದೆʼ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದ್ದರು ಎಂದು ನೆನಪು ಮಾಡಿಕೊಂಡು ತಮ್ಮ ನುಡಿನಮನವನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್.ಎಸ್. ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
