ಪತ್ರಿಕಾ ಪ್ರಕಟಣೆ
ಸಚಿವ ಸ್ಥಾನ ಹಿಂಪಡೆದಿದ್ದರ ಕುರಿತು ಮುಖ್ಯಮಂತ್ರಿಗಳಿಗೆ ಕನ್ನಡಿಗರ ಒತ್ತಾಯದ ಮೇರೆಗೆ ನಾಡೋಜ ಡಾ.ಮಹೇಶ ಜೋಶಿ ಪತ್ರ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನವನ್ನು ಏಕಾಏಕಿ ಹಿಂಪಡೆದಿದ್ದರ ಕುರಿತು ಹಿರಿಯ ಬರಹಗಾರರ, ಕನ್ನಡಿಗರ ಮತ್ತು ಸಾಹಿತ್ಯಾಸ್ತಕರ ಒತ್ತಾಯದ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಇತಿಹಾಸದಲ್ಲಿಯೇ ಮೊದಲನೆ ಬಾರಿಗೆ ‘ರಾಜ್ಯ ಸಚಿವ ದರ್ಜೆ ಸ್ಥಾನಮಾನ’ವನ್ನು ನೀಡಿದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ನೀಡಿದ ಈ ಸ್ಥಾನಮಾನ, ನನ್ನ ಅವಧಿ ಮುಗಿಯುವರೆಗೂ ಅಥವಾ ಸರ್ಕಾರದ ವಿವೇಚನೆ ಮತ್ತು ಅದರ ಆನಂದ ಸಿದ್ದಾಂತ(Doctrine of Pleasure) ವನ್ನು ಅವಲಂಬಿಸಿದೆಯೋ ಎಂಬುದನ್ನು ಸ್ಪಷ್ಟೀಕರಿಸುವಂತೆ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ತಾವು ಪತ್ರ ಬರೆದಿದ್ದನ್ನು ಮತ್ತು ಅದಕ್ಕೆ ಅವರು “ರಾಜ್ಯ ಸಚಿವ ದರ್ಜೆ ಸ್ಥಾನಮಾನವನ್ನು ಕರ್ನಾಟಕ ಸರ್ಕಾರ ಆನಂದ ಸಿದ್ದಾಂತದ ಅಡಿಯಲ್ಲಿ ನೀಡದೆ ಕನ್ನಡ ಕೆಲಸಗಳನ್ನು ನಿರ್ವಹಿಸಲು ನನ್ನ (ಅಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ) ಅವಧಿ ಮುಗಿಯವವರೆಗೆ ನೀಡಿದೆ” ಎಂದು ಸ್ಪಷ್ಟವಾಗಿ ತಿಳಿಸಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ನಿಖರ ಸ್ಪಷ್ಟೀಕರಣ ದೊರೆತ ನಂತರವೇ ತಾವು ಸಚಿವ ಸ್ಥಾನವನ್ನು ಒಪ್ಪಿಕೊಂಡಿದ್ದಾಗಿ ಹೇಳಿ, ಹೀಗಿದ್ದರೂ ರಾಜ್ಯಸಚಿವ ಸ್ಥಾನಮಾನಕ್ಕೆ ದೊರಕುವ ಇಂಧನ ಭತ್ಯ, ನೀರು, ವಿದ್ಯುತ್ ಸೌಲಭ್ಯ, ಸಿಬ್ಬಂದಿಗಳ ನೇಮಕಾತಿ ಮುಂತಾದ ಸೌಲಭ್ಯಗಳನ್ನು ಬಳಸಿ ಕೊಳ್ಳದೇ, ಕೇವಲ ಶಿಷ್ಟಾಚಾರ ಹಾಗೂ ಕನ್ನಡದ ಹಿತದೃಷ್ಟಿಯಿಂದ ಅನಿವಾರ್ಯತೆ ಬಂದಾಗ ಮಾತ್ರ ಕೆಲವು ಸೌಲಭ್ಯಗಳನ್ನು ಬಳಸಿ ಕೊಂಡಿದ್ದು ಇದರಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾವುದೇ ಆರ್ಥಿಕ ಹೊರೆಯಾಗಿಲ್ಲವೆನ್ನುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಸಚಿವ ಸ್ಥಾನಮಾನದ ಆದೇಶವನ್ನು ಹಿಂಪಡೆಯುವಾಗ ರಾಜ್ಯ ಸರ್ಕಾರವು ಸೌಜನ್ಯಕ್ಕಾದರೂ ತಮ್ಮ ಪ್ರತಿಕ್ರಿಯೆ ಕೇಳದೆ ಏಕಮುಖ ಚಿಂತನೆಯಿಂದ ಕೈಗೊಂಡ ಕ್ರಮವು ‘ನೈಸರ್ಗಿಕ ನ್ಯಾಯ ಪ್ರಕ್ರಿಯೆಗೆ’ (Principle of Natural Justice) ವಿರುದ್ಧವಾಗಿದೆ ಎನ್ನುವುದರ ಕುರಿತು ಮುಖ್ಯಮಂತ್ರಿಗಳ ಗಮನವನ್ನು ಸೆಳೆದಿರುವ ನಾಡೋಜ ಡಾ.ಮಹೇಶ ಜೋಶಿಯವರು ಇದು ನನಗೆ ನೀಡಿದ ‘ವೈಯಕ್ತಿಕ ಸ್ಥಾನಮಾನ’ವಾಗಿರದೆ ‘ಕನ್ನಡ ಸಾಹಿತ್ಯ ಪರಿಷತ್ತಿನ’ ಅಧ್ಯಕ್ಷರಿಗೆ ನೀಡಿದ ಸ್ಥಾನಮಾನ’ವಾಗಿರುತ್ತದೆ ಎನ್ನುವ ಸಮಸ್ತ ಕನ್ನಡಿಗರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವ ನಾಡೋಜ ಡಾ.ಮಹೇಶ ಜೋಶಿಯವರು ಸಚಿವ ಸ್ಥಾನವನ್ನು ಹಿಂಪಡೆದ ಕೂಡಲೇ ಮಂಡ್ಯದಲ್ಲಿ ಕೆಲವರು ಬಾಡೂಟದ ಮೂಲಕ ಸಂಭ್ರಮಿಸಿರುವದನ್ನು ಪ್ರಸ್ತಾಪಿಸಿ ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡವಿತ್ತು ಎನ್ನುವ ಆತಂಕವನ್ನು ಕನ್ನಡಿಗರು ಸಾಮಾಜಿಕ ಜಾಲತಾಣದ ಮೂಲಕ ಹಂಚಿ ಕೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಜುಗರ ತಂದಿದೆ ಎನ್ನುವುದರ ಕಡೆಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಪ್ರಾಮಾಣಿಕವಾಗಿ ತಮ್ಮ ಗಮನಕ್ಕೆ ತಂದಿರುವುದಾಗಿ ಹೇಳಿರುವ ನಾಡೋಜ ಡಾ.ಮಹೇಶ ಜೋಶಿಯವರು “ಪುನ: ಸಚಿವ ಸ್ಥಾನಮಾನವನ್ನು ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಘನತೆ, ಗೌರವಗಳನ್ನು ಮರಳಿ ಸ್ಥಾಪಿಸಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸರ್ಕಾರದ ನಡುವಿನ ಸೌಹಾರ್ದವನ್ನು ಕಾಪಾಡ ಬೇಕೆಂದು ಏಳು ಕೋಟಿ ಕನ್ನಡಿಗರ ಪರವಾಗಿ ವಿನಂತಿಸುತ್ತಿರುವುದಾಗಿ” ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಪ್ರಕಟಣಾ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
(ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಪ್ರತಿಯನ್ನು ಲಗತ್ತಿಸಲಾಗಿದೆ)
