CreamA Cream article
Article

ಹಣ್ಣು ಬಿಡುವ ಮರಕ್ಕೆ ಹೆಚ್ಚು ಕಲ್ಲು: ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು

ಕಸಾಪ

ಹಣ್ಣು ಬಿಡುವ ಮರಕ್ಕೆ ಹೆಚ್ಚು ಕಲ್ಲು: ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು

ಬೆಂಗಳೂರು: ‘ಹಣ್ಣು ಬಿಡುವ ಮರಕ್ಕೆ ಹೆಚ್ಚು ಕಲ್ಲು’ ಎಂಬ ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಹತ್ವದ ಕಾರ್ಯಗಳನ್ನು ಮಾಡುತ್ತಿರುವ ನಾಡೋಜ ಡಾ.ಮಹೇಶ ಜೋಶಿಯವರ ಕುರಿತು ಟೀಕೆಗಳು ಬರುತ್ತಿವೆ. ಇಂತಹ ಕನ್ನಡದ ಕಟ್ಟಾಳುವಿಗೆ ಸರ್ಕಾರವೂ ಅಗೌರವ ತೋರಿದೆ. ಅದನ್ನು ನಾನು ಖಂಡಿಸುತ್ತೇನೆ ಎಂದು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು ಹೇಳಿದರು. ಅವರಿಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ದತ್ತಿ ಪ್ರಶಸ್ತಿಗಳಲ್ಲೊಂದಾದ ‘ಶ್ರೀಮತಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ’ ಪುರಸ್ಕಾರದ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿಗಳ ಗೌರವವನ್ನು ಉಳಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ. ಅಕ್ಷರ ಸಂಸ್ಕೃತಿಯಂತೆಯೇ ನೆಲೆ ಜಲ ಸಂಸ್ಕೃತಿಯನ್ನೂ ಉಳಿಸುವ ಮಹತ್ವದ ಕೆಲಸವನ್ನು ಮಾಡುತ್ತಿದೆ ಎಂಬ ತಮ್ಮ ಮೆಚ್ಚುಗೆಯನ್ನು ಇದೇ ಸಂದರ್ಭದಲ್ಲಿ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಭಾರತೀಯ ಸಂಸ್ಕೃತಿ, ಕೃಷಿ ಹಾಗೂ ಋಷಿ ಸಂಸ್ಕೃತಿಯಾಗಿದೆ. ಎಲ್ಲಾ ಸಂಸ್ಕೃತಿಗಳಿಗೂ ಕೃಷಿ ಮೂಲವಾಗಿದೆ ಎಂದು ಹೇಳಿದರು. ಅಕ್ಷರ ಸಾಕ್ಷರತೆಯಷ್ಟೇ ನೆಲ-ಜಲ ಸಾಕ್ಷರತೆಯೂ ಮುಖ್ಯ, ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ಪ್ರಶಸ್ತಿಗಳು ಮೂಲ ಸೆಲೆ ಇದ್ದ ಹಾಗೆ, ಇಲ್ಲಿ ಸಾಧಕರನ್ನು ಗುರುತಿಸಿ ಸಮಯ ಸಾಧಕರನ್ನು ದೂರವಿಟ್ಟು ಪಾರದರ್ಶಕವಾಗಿ ಆಯ್ಕೆಯನ್ನು ಮಾಡಲಾಗುತ್ತದೆ. ಈ ಮೂಲಕ ನಾಡಿನ ಗುಣಾತ್ಮಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಇದೇ ಸಂದರ್ಭದಲ್ಲಿ 48ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ.ಜಯದೇವಿತಾಯಿ ಲಿಗಾಡೆಯವರ 113ನೆಯ ಮತ್ತು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರ 81ನೆಯ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು. ಈ ಇಬ್ಬರೂ ಮಹನೀಯರಿಗೆ ನುಡಿನಮನ ಸಲ್ಲಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಗಡಿಭಾಗದಲ್ಲಿ ಅದರಲ್ಲಿಯೂ ವಿಶೇಷವಾಗಿ ಬೆಳಗಾವಿ ಭಾಗದಲ್ಲಿ ಕನ್ನಡ ಕಹಳೆಯನ್ನು ಮೊಳಗಿಸಿದ ಡಾ.ಜಯದೇವಿ ತಾಯಿ ಲಿಗಾಡೆ ಮತ್ತು ‘ಅಗ್ನಿಯಿಂದ ಎದ್ದ ಬೆಳಕಾಗಿ’ ಬದುಕಿನ ನೋವುಗಳನ್ನು ಹಾಡಾಗಿಸಿದ ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರ ಸಾಂಸ್ಕೃತಿಯ ಮಹತ್ವವನ್ನು ನೆನಪು ಮಾಡಿ ಕೊಂಡರು.

ಪ್ರಶಸ್ತಿ ಪ್ರದಾನ ಮಾಡಿದ ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಬಿ.ಪಾಟೀಲರು ರೈತರ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡುವುದು ಮಹತ್ತರವಾದ ಕಾರ್ಯ. ಸತ್ವಯುತ ಜೀವಂತ ಮಣ್ಣನ್ನು ಸತ್ತ ಮಣ್ಣನ್ನಾಗಿ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಪುರಸ್ಕಾರಗಳ ಮಹತ್ವ ಹೆಚ್ಚು. ಮುಂಗಾರಿನಲ್ಲಿ ಪ್ರವಾಹ, ಹಿಂಗಾರಿನಲ್ಲಿ ಬರಗಾಲ ಎಂಬ ಪ್ರಕೃತಿವಿಕೋಪದ ಕಾಲದಲ್ಲಿ ಈ ಪುರಸ್ಕಾರಗಳು ಸಮಾಜದಲ್ಲಿ ಜಾಗೃತಿ ತರಬಹದು ಎಂದು ಹೇಳಿದರು.

2024ನೆಯ ಸಾಲಿನ ಪುರಸ್ಕಾರವನ್ನು ಮಳವಳ್ಳಿಯ ಸಂಪೂರ್ಣ ಸಾವಯವ ಕೃಷಿಕರ ಸಂಘದ ಪರವಾಗಿ ಅಧ್ಯಕ್ಷರಾದ ಎಂ.ಎನ್.ಮಹೇಶ್ ಕುಮಾರ್ ಮತ್ತು 2025ನೆಯ ಸಾಲಿನ ಪುರಸ್ಕಾರವನ್ನು ಬೆಳ್ತಂಗಡಿಯ ಕೃಷಿಕರು ಹಾಗೂ ಹಣ್ಣು ಬೆಳೆಗಾರರಾದ ಅನಿಲ್ ಬಳಂಜ ಅವರು ಸ್ವೀಕರಿಸಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ದತ್ತಿದಾನಿಗಳಾದ ಡಾ.ಚಿಕ್ಕಕೊಮಾರಿ ಗೌಡರು ದತ್ತಿಯ ಹಿನ್ನೆಲೆಯನ್ನು ವಿವರಿಸಿದರು.

ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು , ಕನ್ನಡ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು

Read More