ಪಂಚ ಭಾಷಾ ತಾರೆ ಬಿ.ಸರೋಜ ದೇವಿಯವರ ನಿಧನಕ್ಕೆ ನಾಡೋಜ ಡಾ.ಮಹೇಶ ಜೋಶಿ ತೀವ್ರಸಂತಾಪ
ಬೆಂಗಳೂರು : ತಮ್ಮದೇ ಆದ ಗಾಂಭೀರ್ಯತೆ-ಘನತೆಯನ್ನು ಹೊಂದಿದ್ದ ಸರೋಜ ದೇವಿ ಅದನ್ನು ಕೊನೆಯವರೆಗೂ ಉಳಿಸಿ ಕೊಂಡು ಬಂದಿದ್ದರು ಅವರ ನಿಧನದೊಂದಿಗೆ ದಕ್ಷಿಣ ಭಾರತ ಚಿತ್ರರಂಗದ ವರ್ಣರಂಜಿತ ಅಧ್ಯಾಯವೊಂದು ಮುಕ್ತಾಯವಾದಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ. 1997ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಮಗಳು ಬಿ.ಭುವನೇಶ್ವರಿಯ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದ ಬಿ.ಸರೋಜ ದೇವಿಯವರು ನಿರಂತರವಾಗಿ ಅದು ನಡೆದು ಕೊಂಡು ಬರುವಲ್ಲಿ ಕಾಳಜಿ ತೋರಿಸಿದ್ದರು. ಕಾಲಮಾನಕ್ಕೆ ತಕ್ಕಂತೆ ಮೂಲ ಧನವನ್ನು ಹೆಚ್ಚಿಸುತ್ತಲೂ ಬಂದಿದ್ದು ಅವರ ಸಾಂಸ್ಕೃತಿಕ ಕಾಳಜಿಯನ್ನು ತೋರಿಸುತ್ತದೆ. ಈಗ ಎರಡು ವರ್ಷಗಳ ಕೆಳಗೆ ಅವರಿಗೆ ಡಾ.ರಾಜ್ ಕುಮಾರ್ ದತ್ತಿ ಪುರಸ್ಕಾರ ನೀಡಿದಾಗ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ನೈಜ ಕಾಳಜಿಯನ್ನು ಹೊಂದಿದ್ದ ಅವರು ಉಪಯುಕ್ತ ಸಲಹೆಗಳನ್ನೂ ನೀಡುತ್ತಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿ ಕೊಂಡಿದ್ದಾರೆ. ‘ಕಿತ್ತೂರು ರಾಣಿ ಚನ್ನಮ್ಮ’ನಾಗಿ ಅವರು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ಅವಿಸ್ಮರಣೀಯ ಪಾತ್ರವನ್ನು ಮಾಡಿದ್ದರು, ಅವರ ‘ಕಪ್ಪದ’ ಸಂಭಾಷಣೆ ಮತ್ತು ‘ತನ ಕರಗದವರಲ್ಲಿ’ ಗೀತೆ ಕನ್ನಡಿಗರ ನೆನಪಿನಲ್ಲಿ ಸದಾ ಇರುತ್ತದೆ ಎಂದು ಅವರು ಹೇಳಿದರು. ಅವರು ಇಂದು ಪದ್ಮಭೂಷಣ ಬಿ.ಸರೋಜ ದೇವಿಯರಿಗೆ ಅಂತಿಮ ನಮನ ಸಲ್ಲಿಸಿದ ನಂತರ ನುಡಿನಮನವನ್ನು ಸಲ್ಲಿಸಿದರು.
ಡಾ. ಬಿ. ಸರೋಜಾದೇವಿ ಅವರು ಕನ್ನಡದ ಮಹಾನ್ ಕಲಾವಿದರಾಗಿದ್ದ ದಿವಂಗತ ಹೊನ್ನಪ್ಪ ಭಾಗವತರ್ ಅವರ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ 1955ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು1957ರಲ್ಲಿ ಎನ್. ಟಿ. ರಾಮರಾಯರ ಚಿತ್ರ ‘ಪಾಂಡುರಂಗ ಮಹಾತ್ಮೆ’ಯಲ್ಲಿ ನಟಿಸಿದರು. ಅದೇ ವರ್ಷ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ 'ರತ್ನಗಿರಿ ರಹಸ್ಯ'ದಲ್ಲಿ ಕೂಡಾ ನಟಿಸಿದರು. 1958ರಲ್ಲಿ ‘ಅಣ್ಣ ತಂಗಿ’, ‘ಭೂ ಕೈಲಾಸ’ ಚಿತ್ರಗಳಲ್ಲಿ ನಟಿಸಿದ ಅವರು ತಮಿಳು ಚಿತ್ರರಂಗದಲ್ಲಿ ಜೆಮಿನಿ ಗಣೇಶನ್ ಅಭಿನಯದ ಚಿತ್ರವೊಂದಕ್ಕೆ ಆಹ್ವಾನ ಪಡೆದರು. ಅದೇ ವರ್ಷದಲ್ಲಿ ತಮಿಳಿನಲ್ಲಿ ಮೇರು ನಟ ಎಂ. ಜಿ. ರಾಮಚಂದ್ರನ್ ಅವರ ‘ನಾಡೋಡಿ ಮನ್ನನ್’, ಶಿವಾಜಿ ಗಣೇಶನ್ ಅವರ ‘ಶಬಾಸ್ ಮೀನ’ ಮತ್ತು ಕನ್ನಡದ ಮೇರು ಚಿತ್ರ ನಿರ್ಮಾಪಕ-ನಿರ್ದೇಶಕ-ನಟ ಬಿ. ಆರ್. ಪಂತುಲು ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಬೆಳಗಿದರು. ಮುಂದಿನ ವರ್ಷದಲ್ಲಿ ಹಿಂದೀ ಚಿತ್ರರಂಗದ ಧ್ರುವ ತಾರೆ ದಿಲೀಪ್ ಕುಮಾರ್ ಅವರೊಂದಿಗೆ ‘ಪೈಗಮ್’, ತೆಲುಗಿನ ಮತ್ತೋರ್ವ ಮಹಾನ್ ಕಲಾವಿದ ಅಕ್ಕಿನೇನಿ ನಾಗೇಶ್ವರರಾಯರೊಂದಿಗೆ ‘ಪೆಳ್ಳಿ ಸಂದಡಿ’ ಚಿತ್ರಗಳಲ್ಲಿ ಅಭಿನಯಿಸಿದರು. ಹಿಂದಿಯಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಅಜಿತ್, ಭರತ್ ಭೂಷಣ್, ಸುನಿಲ್ ದತ್ ಮುಂತಾದ ಜನಪ್ರಿಯ ನಟರೊಡನೆ ಕೂಡ, ಹಲವಾರು ಚಿತ್ರಗಳಲ್ಲಿ ನಟಿಸಿದರು. ಕನ್ನಡದ ಕುಮಾರತ್ರಯರಾದ ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಅವರೊಡನೆ ನಟಿಸಿದ ಹೆಗ್ಗಳಿಕೆ ಅವರದು ಎಂದು ಅವರ ಕೊಡುಗೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿ ಕೊಂಡಿದ್ದಾರೆ.
ಬಿ. ಸರೋಜಾದೇವಿ ಅವರು ಕನ್ನಡ ಚಲನಚಿತ್ರ ವಾಣಿಜ್ಯ ನಿಗಮ, ಕಂಠೀರವ ಸ್ಟುಡಿಯೋಗಳಿಗೆ ಅಧ್ಯಕ್ಷರಾಗಿ ಕೂಡ ಕೆಲವು ಸಮಯ ಕಾರ್ಯ ನಿರ್ವಹಿಸಿದರು. ರಾಷ್ಟ್ರೀಯ ಚಲನಚಿತ್ರ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿ ಎರಡು ಸಲ ಕಾರ್ಯ ನಿರ್ವಹಿಸಿದ ಅವರು ತಾವು ಅಧ್ಯಕ್ಷರಾದಾಗ ಕನ್ನಡ ಚಿತ್ರರಂಗಕ್ಕೆ ಮಹತ್ವದ ಪ್ರಶಸ್ತಿಗಳು ದೊರಕುವಂತೆ ನೋಡಿ ಕೊಂಡಿದ್ದರು. ಪದ್ಮಭೂಷಣ ಪಡೆದಿದ್ದ ಅವರಿಗೆ ಫಾಲ್ಕೆ ದೊರಕುತ್ತದೆ ಎನ್ನುವ ನಿರೀಕ್ಷೆ ಕಳೆದ ಕೆಲವು ವರ್ಷಗಳಿಂದ ಇದ್ದೇ ಇತ್ತು. ದಿವಂಗತರಾದ ಪತಿ ಶ್ರೀಹರ್ಷ, ಮಗಳು ಭುವನೇಶ್ವರಿ ಮತ್ತು ತಾಯಿಯವರ ಹೆಸರಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದ ಅವರ ನೆನಪುಗಳನ್ನು ಉಳಿಸುವ ಕೆಲಸವಾಗ ಬೇಕು ಎಂದು ನಾಡೋಜ ಡಾ.ಮಹೇಶ ಜೋಶಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
