ಡಾ.ಎಸ್.ಎಲ್.ಭೈರಪ್ಪನವರ ನಿಧನಕ್ಕೆ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ
ಬೆಂಗಳೂರು: ಕನ್ನಡದ ಮೇರು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಡಾ. ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಭೈರಪ್ಪನವರ ಸಾಂಸ್ಕೃತಿಕ ಮಹತ್ವವನ್ನು ಸ್ಮರಿಸಿ ಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಡಾ.ಎಸ್.ಎಲ್. ಭೈರಪ್ಪನವರು ಹೊಂದಿದ್ದ ನಿಕಟ ಸಂಬಂಧವನ್ನು ಸ್ಮರಿಸಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು 1999ರ ಫೆಬ್ರವಿ 26ರಿಂದ 28ರವರೆಗೂ ಕನಕಪುರದಲ್ಲಿ ನಡೆದಿದ್ದ 67ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮೌಲಿಕ ಮಾತುಗಳನ್ನಾಡಿರುವುದನ್ನು ಸ್ಮರಿಸಿ ಕೊಂಡು ತಮ್ಮ ಅವಧಿಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಉಪನ್ಯಾಸವನ್ನು ಭೈರಪ್ಪನವರು ಡಾ.ಪ್ರಧಾನ ಗುರುದತ್ ಅವರ ಜೊತೆಗೆ ಬರೆದು ಕಳುಹಿಸಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ ಎನ್ನುವ ಕನ್ನಡ ಸಾಹಿತ್ಯ ಪರಿಷತ್ತಿನ ದುಂಡು ಮೇಜಿನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದ ಭೈರಪ್ಪನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನಿರಂತರವಾಗಿ ಸಲಹೆ ಸೂಚನೆಗಳನ್ನು ನೀಡುತ್ತಾ ಮಾರ್ಗದರ್ಶನ ಮಾಡುತ್ತಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿ ಕೊಂಡಿದ್ದಾರೆ.
ಡಾ.ಎಸ್.ಎಲ್.ಭೈರಪ್ಪನವರೊಂದಿಗೆ ತಮಗಿದ್ದ ವೈಯಕ್ತಿಕ ಒಡನಾಟವನ್ನು ಸ್ಮರಿಸಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ಭೈರಪ್ಪನವರು ಭಾಗವಹಿಸಿದ್ದರು. ನಾನು ನವದೆಹಲಿಯಲ್ಲಿದ್ದಾಗ ಯಾವುದೇ ಕಾರ್ಯಕ್ರಮಗಳಿಗೆ ಬಂದಿದ್ದರೂ ನನ್ನನ್ನು ಕಚೇರಿಯಲ್ಲಿ ಭೇಟಿ ಮಾಡುತ್ತಿದ್ದರು. ಕಳೆದ ವರ್ಷದ ನವಂಬರ್ 22ರಂದು ಅವರೊಂದಿಗಿನ ಕೊನೆಯ ಭೇಟಿಯಾಯಿತು. ಅಂದು ನನಗಾಗಿ ಕಾದಿದ್ದು ಸಾಕಷ್ಟು ಮೌಲಿಕ ವಿಷಯಗಳ ಬಗ್ಗೆ, ಕನ್ನಡ ಸಾಹಿತ್ಯ ಪರಿಷತ್ತು ಸಾಗಬೇಕಾದ ದಾರಿಯ ಬಗ್ಗೆ ಮಾತನಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸದಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತದೆ. ಅವರ ಸಲಹೆಗಳನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿವರು ತಮ್ಮ ಸಂತಾಪ ಸೂಚಕೆ ಸಂದೇಶದಲ್ಲಿ ತಿಳಿಸಿದ್ದಾರೆ.
ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು. 1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ತರಗಳ ಬಗೆಗೆ ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕನ್ನಡಿಗರಿಗೆ ನೀಡಿವೆ ಎಂದಿರುವ ನಾಡೋಜ ಡಾ.ಮಹೇಶ ಜೋಶಿಯವರು ಅವರ ಪ್ರತಿ ಕಾದಂಬರಿಯೂ ಪುನರ್ ಮುದ್ರಣಗಳನ್ನು ಕಾಣುತ್ತಲೇ ಬಂದಿರುವುದು ಅವರ ಜನಪ್ರಿಯತೆಗೆ ಅಷ್ಟೇ ಅಲ್ಲ, ಅವರ ಬರಹಗಳಲ್ಲಿನ ಸತ್ವದ ಸಾರ್ವಕಾಲಿಕತೆಯ ಪ್ರತೀಕವೂ ಆಗಿದೆ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿನೆರಳು, ಮತದಾನಗಳು ಚಲನಚಿತ್ರ ರೂಪ ಪಡೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದರೆ ‘ಗೃಹಭಂಗ’ ಟೆಲಿ ಧಾರಾವಾಹಿಯಾಗಿ ಜನ ಮನ್ನಣೆ ಪಡೆದಿತ್ತು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.
ಜ್ಞಾನಪೀಠವೂ ಸೇರಿದಂತೆ ಹಲವು ಪುರಸ್ಕಾರಗಳು ಅವರಿಗೆ ಸಲ್ಲ ಬೇಕಿತ್ತು ಎನ್ನುವ ಕೊರಗು ಕನ್ನಡಿಗರ ಪಾಲಿಗೆ ಉಳಿದು ಹೋಯಿತು ಎಂದಿರುವ ನಾಡೋಜ ಡಾ.ಮಹೇಶ ಜೋಶಿ ಕರ್ನಾಟಕ ಸರ್ಕಾರ ಅವರ ನೆನಪು ಚಿರಂತನವಾಗಿ ಉಳಿಯುವಂತಹ ಯೋಜನೆಗಳನ್ನು ರೂಪಿಸಿ ಗೌರವ ಸಲ್ಲಿಸ ಬೇಕು ಎಂದು ಆಶಿಸಿದ್ದಾರೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
