ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಲೋಕಾಯುಕ್ತಕ್ಕೆ ದೂರು
ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ.ಗಾಯತ್ರಿಯವರು ದುರಾಡಳಿತದಿಂದ ಪೂರ್ವಗ್ರಹಪೀಡಿತರಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ಸರ್ಕಾರ ನೀಡುವ ವಾರ್ಷಿಕ ಅನುದಾನವನ್ನು ದುರುದ್ದೇಶದಿಂದ ಹಾಗೂ ಅನವಶ್ಯಕವಾಗಿ ತಡೆ ಹಿಡಿದು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸ್ಥಗಿತಗೊಳ್ಳಲು ಹಾಗು ಸಿಬ್ಬಂದಿ ವೇತನ ಸರಿಯಾದ ಸಮಯದಲ್ಲಿ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲು ದೂರು ನೀಡಿ ಕಾನೂನಿನ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಕೋರಲಾಗಿದೆ.
1915ರ ಮೇ 5ರಂದು ಕನ್ನಡ ಸಾಹಿತ್ಯ ಪರಿಷತ್ತು ವಿಧಿವತ್ತಾಗಿ ಉದಯವಾದ ದಿನದಿಂದಲೂ ಮಹಾಪೋಷಕರಾಗಿದ್ದ ಮೈಸೂರು ಅರಸು ಮನೆತನ ನಿರಂತರವಾಗಿ ಅನುವಾನವನ್ನು ನೀಡುತ್ತಾ ಬಂದಿದ್ದು ಮುಂದೆ ಸ್ವಾತಂತ್ರ್ಯಾನಂತರ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳೆಲ್ಲವೂ ಅದನ್ನು ಮುಂದುವರೆಸಿಕೊಂಡು ಬಂದಿವೆ. 1-6-1996 ರಿಂದ ಕನ್ನಡ ಸಾಹಿತ್ಯ ಪರಿಷತ್ತು ಅನುದಾನ ಸಂಹಿತೆಗೆ ಒಳಪಟ್ಟಿದ್ದು ಕರ್ನಾಟಕ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಸಿಬ್ಬಂದಿಗಳ ವೇತನಕ್ಕೆ ಪ್ರತಿ ವರ್ಷವೂ ಅನುದಾನ ನೀಡುತ್ತಲೇ ಬಂದಿದೆ.
2025-26ನೆಯ ಸಾಲಿನ ಆಯವ್ಯಯದಲ್ಲಿ ಕಡತ ಸಂಖ್ಯೆ ಕಸಂವಾ 153 ಕಸಧ 2025ರಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ 5ಕೋಟಿ (ಐದು ಕೋಟಿ) ರೂಪಾಯಿಗಳ ಅನುದಾನವನ್ನು ನಿಗಧಿ ಪಡಿಸಲಾಗಿತ್ತು. ಈ ಅನುದಾನವನ್ನು ಪ್ರತಿ ವರ್ಷವೂ ಮೂರು ಇಲ್ಲವೆ ನಾಲ್ಕು ಕಂತುಗಳಲ್ಲಿ ನೀಡುತ್ತಿತ್ತು. ಇದರಲ್ಲಿ ಮೊದಲ ಕಂತು ವರ್ಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರುತ್ತಿತ್ತು. ಆದರೆ ಈ ವರ್ಷ ಅಕ್ಟೋಬರ್ ಮಧ್ಯಭಾಗಕ್ಕೆ ಬಂದಿದ್ದರೂ ಇನ್ನೂ ಅನುದಾನ ಬಿಡುಗಡೆಯಾಗಿರುವುದಿಲ್ಲ, ಇದೇ ಸಮಯದಲ್ಲಿ ಬೇರೆ ಅನುದಾನಿತ ಸಂಘ ಸಂಸ್ಥೆಗಳಿಗೆ ಅನುವಾನವನ್ನು ಬಿಡುಗಡೆ ಮಾಡಿದ್ದು, ಕೆ.ಎಂ.ಗಾಯತ್ರಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಹಗೆತನ ಸಾಧಿಸುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕನ್ನಡ ಸಾಹಿತ್ಯ ಪರಿಷತ್ತು ಇವರ ಆಡಳಿತ ವೈಖರಿ ಮತ್ತು ದುರಾಡಳಿತದ ವಿರುದ್ಧ ಧ್ವನಿ ಎತ್ತಿರುವುದು.
ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ನಿರಂತರವಾಗಿ ಹಗೆ ಸಾಧಿಸುತ್ತಿರುವ ದೂರುದಾರರ ಜೊತೆಗೆ ಶಾಮೀಲಾಗಿ ಅನುದಾನವನ್ನು ತಡೆ ಹಿಡಿದಿದ್ದಾರೆ ಎಂಬ ಸ್ಪಷ್ಟ ಆಧಾರಗಳು ದೊರೆತ ಹಿನ್ನೆಲೆಯಲ್ಲಿ , ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ತನ್ನ 30.07.2025ರ ಸಭೆಯಲ್ಲಿ, “ ಖಂಡನಾ ನಿರ್ಣಯ”ವನ್ನು ಶ್ರೀಮತಿ ಗಾಯತ್ರಿ ಅವರ ವಿರುದ್ಧ ತೆಗೆದುಕೊಂಡಿತ್ತು.
ಕೆ.ಎಂ.ಗಾಯತ್ರಿಯವರು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ನಂತರ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿರುತ್ತಾರೆ. ಕಲಾವಿದರಿಗೆ ಸಲ್ಲ ಬೇಕಾದ ಗೌರವಧನಗಳನ್ನು ಅನಗತ್ಯವಾಗಿ ಹಿಡಿದಿಟ್ಟು ಕೊಂಡಿರುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರತಿಭಟನೆ ಕೂಡ ನಡೆದಿದೆ. 14.07.2025ರಂದು ಸಿಲ್ವರ್ ಜ್ಯೂಬಲಿ ಪಾರ್ಕ್ ಪೋಲೀಸ್ ಠಾಣೆಯಲ್ಲಿ ಅವರ ಮೇಲೆ ಜಾತಿ ನಿಂದನೆ/ದೌರ್ಜನ್ಯದಂತಹ ಗಂಭೀರ ಅಪಾದನೆ ದಾಖಲಾಗಿದ್ದು, ಪ್ರಸ್ತುತ ಅವರು ಜಾಮೀನಿನ ಮೇಲೆ ಇರುತ್ತಾರೆ. ಈ ಎಲ್ಲಾ ಅಂಶಗಳನ್ನು ಲೋಕಾಯುಕ್ತರ ಗಮನಕ್ಕೆ ತರಲಾಗಿದ್ದು ಸರ್ಕಾರದ ಆದೇಶದಲ್ಲಿಯೇ ‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಾಗಿ ದುಡಿಯುತ್ತಿರುವ ಏಕೈಕ ಸಾರ್ವಭೌಮ ಸಂಸ್ಥೆ’ ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಇದರ ಹಿತಾಸಕ್ತಿಯನ್ನು ಕಾಪಾಡಲು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ.ಗಾಯತ್ರಿಯವರ ವಿರುದ್ಧ ತನಿಖೆ ಹಾಗು ವಿಚಾರಣೆ ನಡೆಸಿ, ಮುಂದಿನ ಕ್ರಮಗಳನ್ನು ಲೋಕಾಯುಕ್ತ ಕಾನೂನಿನ ಪ್ರಕಾರ ತೆಗೆದು ಕೊಳ್ಳಬೇಕೆಂದು ದಿನಾಂಕ 16.07.2025ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಅನುಮೋದನೆ ಪಡೆದಿದ್ದರ ಅನ್ವಯ ಲೋಕಾಯುಕ್ತರಿಗೆ ದೂರನ್ನು ನೀಡಲಾಗಿದೆ.
ಎನ್.ಎಸ್.ಶ್ರೀಧರ ಮೂರ್ತಿ ಸಂಚಾಲಕರು, ಮಾಧ್ಯಮ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು
