CreamA Cream article
Article

ಸತ್ಯದ ನೋವು ಮತ್ತು ಲೋಕಾಪವಾದದ ಭಾರ

shrinath joshi

ಸತ್ಯದ ನೋವು ಮತ್ತು ಲೋಕಾಪವಾದದ ಭಾರ ಭದ್ರನಿಗೆ ಅದು ಅಸಾಧ್ಯವಾಗಿತ್ತು. ಕರ್ತವ್ಯವೆಂಬುದು ಎಲ್ಲವನ್ನೂ ಅನಿವಾರ್ಯವಾಗಿಸುತ್ತದೆ. ಮನಸ್ಸಿಗೆ ನೋವಾದರೂ ಶರಣಾಗತ ಮುದ್ರೆಯಲ್ಲಿ ಕೈಮುಗಿದು, ಕಠಿಣ ಸತ್ಯವೊಂದನ್ನು ಪ್ರಭು ರಾಮನ ಮುಂದೆ ಇಟ್ಟಿದ್ದ. "ಪ್ರಭು, ತಾವು ಸಮುದ್ರಕ್ಕೆ ಸೇತುವೆ ಕಟ್ಟಿದ್ದೀರಿ, ರಾವಣನನ್ನು ಸಮೂಲವಾಗಿ ನಾಶ ಮಾಡಿದ್ದೀರಿ ಎಂದು ಪ್ರಜೆಗಳು ನಿಮ್ಮನ್ನು ಕಂಡರೆ ಹೆಮ್ಮೆಪಡುತ್ತಾರೆ, ಕೊಂಡಾಡುತ್ತಾರೆ. ಆದರೆ, ರಾವಣನು ತನ್ನ ಲಂಕೆಗೆ ಕರೆದೊಯ್ದು, ಅಷ್ಟು ಕಾಲ ತನ್ನ ಅಧೀನದಲ್ಲಿ ಇಟ್ಟುಕೊಂಡ ಸೀತೆಯನ್ನು ಮರಳಿ ಕರೆತಂದ ನಿಮಗೆ ಒಳ್ಳೆಯದು-ಕೆಟ್ಟದ್ದು ತಿಳಿಯದೇನು ಎನ್ನುತ್ತಿದ್ದಾರೆ. 'ನಾಳೆ ತಮ್ಮ ಹೆಂಡತಿಗೆ ಇಂಥಹದ್ದೇ ಸ್ಥಿತಿ ಬಂದರೆ, ಯಾರಾದರೂ ಎತ್ತಿಕೊಂಡು ಹೋದ ಘಟನೆ ನಡೆದರೂ, ತಾವು ವಿಧಿಯಿಲ್ಲದೆ ಸ್ವೀಕರಿಸಬೇಕು. ಅದೆಲ್ಲವನ್ನು ರಾಮರಾಜ್ಯದ ಪ್ರಜೆಗಳು ಸಹಿಸಬೇಕು ತಾನೇ? 'ಯಥಾ ರಾಜಾ ತಥಾ ಪ್ರಜಾ' ಎನ್ನುತ್ತ, ಜನರು ಗುಂಪು ಗುಂಪಾಗಿ ಕೂಡಿ ಈ ಮಾತುಗಳನ್ನೇ ಆಡುತ್ತಿದ್ದಾರೆ" ಎಂದು ತಾನು ಸಂಗ್ರಹಿಸಿದ ಮಾಹಿತಿಯನ್ನು ಪ್ರಭುವಿನ ಮುಂದೆ ಮಂಡಿಸಿದ. ಈ ಮಾತುಗಳಿಂದ ರಾಮನು ಒಳಗೆ ತೀವ್ರವಾಗಿ ನೊಂದುಕೊಳ್ಳುತ್ತಾ, ತನ್ನ ಸಭಾ ಸದಸ್ಯರ ಕಡೆಗೆ ತಿರುಗಿ, "ಈ ಮಾತು ನಿಜವೇನು?" ಎಂದು ಕೇಳಿದನು. ಎಲ್ಲರೂ ತಲೆಬಗ್ಗಿಸಿಕೊಂಡು, ಪ್ರಜೆಗಳಲ್ಲಿ ಈ ಲೋಕಾಪವಾದ ಹರಡಿರುವುದು ನಿಜವೇ ಎಂದು ಮೌನವಾಗಿಯೇ ಸಭಾ ಸದಸ್ಯರು ಒಪ್ಪಿಕೊಂಡರು. ರಾಮನು ಅವರೆಲ್ಲರನ್ನೂ ಕಳುಹಿಸಿಬಿಟ್ಟು, ಸಮೀಪದಲ್ಲಿದ್ದ ದ್ವಾರಪಾಲಕನನ್ನು ಕರೆದು, ತಮ್ಮಂದಿರಾದ ಲಕ್ಷ್ಮಣ, ಭರತ, ಮತ್ತು ಶತ್ರುಘ್ನರನ್ನು ಕರೆದು ತರುವಂತೆ ಹೇಳಿದ. ಶೀಘ್ರವೇ ಅವರೆಲ್ಲರೂ ರಾಮನ ಬಳಿಗೆ ಬಂದರು. ಕಾಂತಿಯಿಲ್ಲದ ಮುಖದೊಂದಿಗೆ, ಕಣ್ಣೀರು ಸುರಿಸುತ್ತಾ ರಾಮನು ತನ್ನ ತಮ್ಮಂದಿರನ್ನು ಆಲಿಂಗಿಸಿಕೊಂಡು, ಆಸನಗಳ ಮೇಲೆ ಕುಳ್ಳಿರಿಸಿ, ತಾನು ಕೇಳಿದ ಸೀತೆಯ ಬಗೆಗಿನ ಜನಾಪವಾದದ ಬಗ್ಗೆ ತಿಳಿಸಿದನು. "ಸೀತೆ ನಿರ್ದೋಷಿ ಎಂದು ಅಗ್ನಿಯೂ, ಇತರ ದೇವತೆಗಳೂ ಸಾಕ್ಷಿ ಹೇಳಿದರು. ನನ್ನ ಅಂತರಾತ್ಮದಲ್ಲಿ ಕೂಡ ಹಾಗೆಯೇ ಅನಿಸಿದೆ. ಲಕ್ಷ್ಮಣಾ, ಇದು ನಿನ್ನ ಎದುರಿಗೇ ತಾನೇ ನಡೆದಿದ್ದು? ಆದರಿಂದಲೇ ನಾನು ಸೀತೆಯನ್ನು ಅಯೋಧ್ಯೆಗೆ ಕರೆತಂದೆ. ಆದರೆ ಈ ಅಪವಾದವನ್ನು ಸಹಿಸುವುದು ನನಗೆ ಬಹಳ ನೋವು ತರುತ್ತಿದೆ. ನಾನು ಪ್ರಾಣಗಳನ್ನೂ, ನಿಮ್ಮನ್ನಾದರೂ ಬಿಡುವೆನು, ಆದರೆ ಅಪಕೀರ್ತಿಯನ್ನು ಸಹಿಸಲಾರೆ. ಸೀತೆಯನ್ನು ಬಿಟ್ಟುಬಿಟ್ಟರೆ, ಈ ಅಪವಾದವನ್ನು ಮೀರಿದ ದುಃಖವು ನನ್ನನ್ನು ಬಾಧಿಸದು," ಎಂದು ರಾಮನು ತನ್ನ ಆಂತರಿಕ ಸಂಘರ್ಷವನ್ನು ಹೊರಹಾಕಿದನು. ಕೊನೆಗೆ ರಾಮನು ದೃಢ ನಿರ್ಧಾರದಿಂದ, "ಆದರಿಂದ ಲಕ್ಷ್ಮಣಾ, ನಾಳೆ ಬೆಳಗಿನ ಜಾವ ಸೀತೆಯನ್ನು ರಥದ ಮೇಲೆ ತಮಸಾ ನದೀತೀರದಲ್ಲಿ ವಾಲ್ಮೀಕಿ ಆಶ್ರಮದ ಪ್ರದೇಶದಲ್ಲಿ ಬಿಟ್ಟುಬಂದುಬಿಡು. ನನ್ನ ಮಾತಿಗೆ ಎದುರಾಡಬೇಡ. ಸೀತೆಯ ಬಗ್ಗೆ ಏನನ್ನೂ ಹೇಳಬೇಡ. ಹೇಳಿದರೆ ನನ್ನ ಮೇಲೆ ಆಣೆ! ಸೀತೆ ಋಷಿಗಳ ಆಶ್ರಮವನ್ನು ನೋಡಬೇಕೆಂದು ಬಯಸಿದ್ದಳು. ಆ ಬಯಕೆ ತೀರುತ್ತದೆ" ಎಂದು ಕಠೋರ ಆದೇಶ ನೀಡಿದನು. ಈ ಮಾತುಗಳನ್ನು ಹೇಳಿ ಅವನು ಬಾಧೆಯಿಂದ ನಿಟ್ಟುಸಿರು ಬಿಡುತ್ತಾ ಅಂತಃಪುರಕ್ಕೆ ಹೊರಟುಹೋದ. ಲೋಕಾಪವಾದ ತಪ್ಪಿಸಿಕೊಳ್ಳಲು ಮತ್ತು ರಾಜಧರ್ಮವನ್ನು ಪಾಲಿಸಲು ರಾಮನಿಗೆ ಅನಿವಾರ್ಯವಾದ ಕಾರಣ ಇಂಥದೊಂದು ಕಠೋರ ನಿರ್ಣಯವನ್ನು ಶ್ರೀರಾಮ ತೆಗೆದುಕೊಂಡನು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಮನು ಸೀತಾ ಪರಿತ್ಯಾಗ ಮಾಡಿಬಿಟ್ಟಿದ್ದ. ________________________________________ ಕಥಾ ಮಂಥನಕ್ಕೆ ನಮ್ಮ ಕಡೆಯಿಂದ ನಾಲ್ಕು ಪ್ರಮುಖ ಚರ್ಚಾ ಅಂಶಗಳು... 1. ಲೋಕಾಪವಾದದ ಶಕ್ತಿ: ಸೀತೆ ನಿರ್ದೋಷಿ ಎಂದು ಅಗ್ನಿಪರೀಕ್ಷೆ ಮತ್ತು ದೇವತೆಗಳು ಸಾಕ್ಷಿ ನುಡಿದಿದ್ದರೂ, ಪ್ರಜೆಗಳ ಕೇವಲ ವದಂತಿ ಮತ್ತು ಅಪವಾದವು ರಾಮನಂತಹ ಧರ್ಮಾತ್ಮನನ್ನು ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು ಏಕೆ? ರಾಜಕಾರಣದಲ್ಲಿ ಸತ್ಯಕ್ಕಿಂತ ಜನರ ನಂಬಿಕೆ ಮತ್ತು ಅಭಿಪ್ರಾಯ ಏಕೆ ಹೆಚ್ಚು ಪ್ರಭಾವ ಬೀರುತ್ತದೆ? 2. ಅಪಕೀರ್ತಿ vs. ವೈಯಕ್ತಿಕ ಪ್ರೀತಿ: "ಪ್ರಾಣಗಳನ್ನೂ, ನಿಮ್ಮನ್ನಾದರೂ ಬಿಡುವೆನು, ಆದರೆ ಅಪಕೀರ್ತಿಯನ್ನು ಸಹಿಸಲಾರೆ" ಎಂಬ ರಾಮನ ಮಾತು ಅವನ ಪಾತ್ರದ ಕೇಂದ್ರತೆಯನ್ನು ತಿಳಿಸುತ್ತದೆ. ಒಬ್ಬ ನಾಯಕನಿಗೆ ವೈಯಕ್ತಿಕ ಸಂತೋಷ ಅಥವಾ ಪ್ರೀತಿಗಿಂತ, ತನ್ನ ಕೀರ್ತಿ ಮತ್ತು ಪ್ರಜಾಧರ್ಮ ಏಕೆ ಮಿಗಿಲಾದುದು? ಈ ನಿರ್ಧಾರದ ಮೂಲಕ ಅವನು ನೀಡಿದ ಆದರ್ಶವೇನು? 3. ಲಕ್ಷ್ಮಣನ ಕರ್ತವ್ಯ: ಕಠಿಣವಾದರೂ, ಲಕ್ಷ್ಮಣನು ರಾಮನ ಆದೇಶವನ್ನು ಪ್ರಶ್ನಿಸದೆ ಪಾಲಿಸಿದ. ಒಬ್ಬ ಆಪ್ತ ಮಿತ್ರ ಮತ್ತು ಸಹೋದರನಾಗಿ, ಸತ್ಯ ಮತ್ತು ಧರ್ಮಕ್ಕೆ ವಿರುದ್ಧವಾದರೂ ನಾಯಕನ ಅಥವಾ ಪ್ರೀತಿಪಾತ್ರರ ಆದೇಶವನ್ನು ಪಾಲಿಸುವುದು ಸರಿಯೇ? ಲಕ್ಷ್ಮಣನ ಪಾತ್ರದಲ್ಲಿ "ಸಹೋದರ ಧರ್ಮ"ದ ಮಹತ್ವ ಏನು? 4. ರಾಮನ ಅಂತರಾತ್ಮದ ಸಂಘರ್ಷ: ಸೀತೆ ನಿರ್ದೋಷಿ ಎಂದು ತಿಳಿದಿದ್ದರೂ, ಆಕೆಯನ್ನು ಪರಿತ್ಯಾಗ ಮಾಡಲು ನಿರ್ಧರಿಸಿದ ರಾಮನ ಆಂತರಿಕ ದುಃಖವು ಎಷ್ಟು ತೀವ್ರವಾಗಿತ್ತು? ವೈಯಕ್ತಿಕ ನೋವನ್ನು ನುಂಗಿ ಪ್ರಜಾಹಿತವನ್ನು (ಇಲ್ಲಿ, ಆಡಳಿತದ ಸ್ಥಿರತೆಯನ್ನು) ಕಾಪಾಡಲು ಹೊರಟ ರಾಮನ ಈ ನಡೆಯು, ನಾಯಕತ್ವದ ಕಠಿಣತೆಗೆ ಹಿಡಿದ ಕನ್ನಡಿಯೇ? ಈ ಕಥೆಯು ನಿಮಗೆ ಇದರ ಹೊರತಾಗಿ ಬೇರೆ ಯಾವುದೇ ಹೊಸ ಆಲೋಚನೆಗಳನ್ನು ತಂದಿದೆಯೇ? ತಿಳಸಿ..

Read More