CreamA Cream article
Article

ಅವ್ವೆ ಹೇಳಿದ್ದು - ೫೯

shrinath joshi

ಅವ್ವೆ ಹೇಳಿದ್ದು - ೫೯

ನಮ್ಮ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುವ ಕಾಲ

ʻʻಅವ್ವೆ ನಿನ್ನಾಗೆ ಒಬ್ಬರು ಪೊಲೀಸ್ ಆಫೀಸರ್ ಸಿಕ್ಕಿದ್ರು.. ಅವರು ಹೇಳಿದ್ದು ಕೇಳಿ ನಂಗೆ ನಗುವನ್ನ ತಡಿಯೋಕೆ ಆಗ್ಲಿಲ್ಲ..." ಎಂದಾಗ ಅವ್ವೆ ʻʻಅಂಥಾದೇನಾಯ್ತು...́ʼʼ? ಎಂದು ಪ್ರಶ್ನೆ ಮಾಡಿದ್ದಳು. ʻʻಸಾಯ್ಲಿ.. ಈ ಮಂದಿಗೆ ಸೀರಿಯಸ್ನೆಸ್ ಅಂಬುದೇ ಇಲ್ಲಾ" ಎನ್ನುತ್ತ ನನ್ನ ಮಾತು ಮುಂದುವರೆಸಿದೆ. ಸಾರ್ವಜನಿಕರ ತುರ್ತು ಸಂದರ್ಭಕ್ಕೆಂದು ಇರುವ ಪೊಲೀಸ್ ಇಲಾಖೆಯ '112 ಸಹಾಯವಾಣಿ' ಸಂಪೂರ್ಣ ದುರ್ಬಳಕೆ ಆಗುವುದು ಹೆಚ್ಚಾಗಿದೆ. ವಾಸ್ತವದಲ್ಲಿ ಕಳವು, ರಸ್ತೆ ಅಪಘಾತ, ಕೊಲೆ ಪ್ರಕರಣ, ಅಗ್ನಿ ಆಕಸ್ಮಿಕ, ಜಗಳ ಸೇರಿದಂತೆ ಇತರೆ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೆ ತಕ್ಷಣ ನೆರವು ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಪೊಲೀಸ್ ಕಂಟ್ರೋಲ್ ರೂಂನವರು ಈಗ ತಮ್ಮ ಕೆಲಸವೇನು? ಎನ್ನುವ ಪರಸ್ಥಿತಿಗೆ ಬಂದಿದ್ದಾರಂತೆ. ಪೊಲೀಸರಿಗೆ ಈಗ ಬೇಡದ ತಲೆಬಿಸಿನೇ ಜಾಸ್ತಿ ಆಗಿದೆಯಂತೆ ಎಂದು ಹೇಳಿದೆ.

ನನ್ನ ಮಾತಿಗೆ ನಗುವುದಕ್ಕೆ ಆರಂಭಿಸಿದ ಅವ್ವೆ ʻʻನಾನೂ ‘ಪ್ರಮೋದ’ನ ಸುದ್ದಿ ಓದಿದ್ದೆ. ಈಗಿನ ಪರಸ್ಥಿತಿನೇ ತಲೆಕೆಳಗಾಗುದು. ಅರ್ಥ ಇಲ್ಲಾಗಿದ್ದೆ ಜಾಸ್ತಿಯಾಗಿದು. ಹಿಂದೆಲ್ಲಾ ಅತ್ತೆ ಸೋಸೆ ಜಗಳ ಅಂದ್ರೆ, ʻಬಿಟ್ಟಾಕೊ.. ನಾಳೆ ನೋಡ್ವನಿʼ ಅಂತಿದ್ರು. ಈಗೆಲ್ಲಾ ಹಂಗಿಲ್ಲ. ಬರಿ ಕುಡುಕರದ ಕಾಟನೇ ಹೆಚ್ಚಾಗಿದ ಕಣಾ." ಎಂದಳು.

ಅವ್ವೆ ಹೇಳಿದ್ದರಲ್ಲಿ ಅರ್ಥವಿತ್ತು. ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಈಗ ಕುಡುಕರದ್ದೇ ತಲೆನೋವಾಗಿದೆ. ಸಾರಾಯಿ ಕುಡಿದು ಗಲಾಟೆ ಮಾಡುವವರೇ ಹೆಚ್ಚಾಗಿ ಬಿಟ್ಟಿದ್ದಾರೆ. ಕುಡುಕರ ಆಟಾಟೋಪ ಅತಿರೇಕಕ್ಕೆ ಹೋಗುತ್ತಿದೆ. ಕುಡುಕರ ಕಿರಿಕಿರಿ ನಿಭಾಯಿಸುವುದಕ್ಕೆ ಪೊಲೀಸರು ಹೆಚ್ಚಾಗಿ ಹೆಣಗಾಡುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಕುಡುಕರ ಹಾವಳಿಯ ಬಗ್ಗೆ ಸಾರ್ವಜನಿಕರು, ಮನೆಯವರು ಸೇರಿದಂತೆ ಎಲ್ಲರ ಕಡೆಯಿಂದ ಪೊಲೀಸ್ ಸಹಾಯವಾಣಿಗೆ ದೂರುಗಳು ಬರುತ್ತವೆ. ಕುಡುಕರ ಹಾವಳಿ ಎಂದು ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ. ಏನಾದರೂ ಹೆಚ್ಚುಕಮ್ಮಿ ಆಗಿಬಿಟ್ಟರೆ ಎನ್ನುವ ಭಯವಂತೂ ಇದ್ದೇ ಇರುತ್ತದೆ. ತುರ್ತು ಪರಿಸ್ಥಿತಿಯ ಗಂಟೆಯ ಕರೆಗಳ ನಡುವೆ, ಕುಡುಕರು ಮತ್ತು ಗೃಹ ಕಲಹದ ಕರೆಗಳನ್ನು ನಿಭಾಯಿಸುವುದೇ 112 ಸಹಾಯವಾಣಿಯ ಶೇ. 25 ರಷ್ಟು ಕೆಲಸವಾಗಿದೆ. ಇದರಿಂದ ನಿಜವಾದ ಸಹಾಯ ಬೇಕಿರುವವರಿಗೆ ತೊಂದರೆಯಾಗುತ್ತದೆ. ರಾತ್ರಿಯೆಲ್ಲಾ ಗಲಾಟೆ ಮಾಡಿದ ಕೆಲವರಿಗೆ ಬೆಳಿಗ್ಗೆ ಏನೂ ನೆನಪಿರುವುದಿಲ್ಲ. ಇನ್ನೂ ಕೆಲವರು ನೆನಪಿದ್ದರೂ, ಏನೂ ಆಗಲೇ ಇಲ್ಲವೇನೋ ಎನ್ನುವ ನಟನೆ ಮಾಡುತ್ತಾರೆ. ಒಟ್ಟಾರೆ ಸರಿ ಇದ್ದವರಿಗೆ ಇವರಿಂದ ಕಾಟ ತಪ್ಪಿದ್ದಲ್ಲ ನೋಡು ಎಂದು ಅವ್ವೆ ವಿವರಿಸಿದಳು.

ʻʻಇದಕ್ಕೆಲ್ಲಾ ಕಾರಣ ಏನೆ ಅವ್ವೆ..?ʼʼ ಎಂದಾಗ

ʻʻನೋಡ ಸೀನಾ ಇಲ್ಲಿ ಗೋವಾ ಸಾರಾಯಿ ಬೇಕಷ್ಟು ಸಿಗ್ತಿದು. ಗಟ್ಟದ ಮ್ಯಾನೆ ಕಳ್ಳಭಟ್ಟಿ ಬೇಕಾದಂಗೆ ಮಾಡ್ತಿರು. ಕುಡಕಿರಿಗೆ ಕೈಗೊಂದು ಕಾಲಿಗೊಂದು ಅಂಬುಹಂಗೆ ಹೆಂಡದ ಅಂಗಡಿ ಸಿಗ್ತಿದು. ಅದ್ರಾಗೂ ಮನಿಗೆ ಅಕ್ಕಿ ತರಬೇಕು, ಮನೆಬದಿ ಕಾಳಜಿ ಮಾಡಬೇಕು ಅಂಬುದಂತು ಇಲ್ಲವೇ ಇಲ್ಲಾ. ಸರಕಾರ ಅಕ್ಕಿ ಫುಕಟ್ ಕೊಡ್ತಿದು. ಹೆಂಗಸ್ರಿಗೆ ಖರ್ಚಿಗೆ ದುಡ್ಡು ಬರ್ತಿದು. ಮತ್ತೇನು ಏನಾದ್ರು ಕೆಲಸಾ ಮಾಡುದು ಬಂದ ದುಡ್ಡಾನಾಗೆ ಕುಡುದು ಗಲಾಟೆ ಮಾಡುದು ಇದೇ ಆಗಿ ಹೋಗಿದು." ಎಂದು ಕುಡುಕರ ಬಗ್ಗೆ ಅವ್ವೆ ಶರಾ ಬರೆದೇ ಬಿಟ್ಟಳು.

ʻʻಅವರದು ಬಿಟ್ಟಾಕು.. ನಮ್ಮ ಜಿಲ್ಲೆದಾಗೆ ಬ್ಯಾರೆ ಕಡೆಂತೆ ಬಂದವರದ್ದೆ ದರ್ಬಾರು ಆತೇ ಇದು ಅಂತಿರು ಖರೆನಾ..?" ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಹೌದು ಎಂದು ತಲೆಯಾಡಿಸಿದವಳು. ʻʻದರ್ಬಾರ ಅಂತಲ್ಲಾ.. ಬಹುತೇಕ ನಮ್ಮ ಮಂದಿ ಊರ ಬಿದಗೆ ಇಲ್ಲಾ. ಮತ್ತೇನು ಮಾಡುಕೆ ಆತಿದು.. ಅನಿವಾರ್ಯ ಬ್ಯಾರೆ ಕಡೆಂತೆ ಬಂದವರು ಇಲ್ಲಿ ಕಾರಭಾರ ಮಾಡುಕೆ ತಾಂಗೆರು." ಎನ್ನುತ್ತ ವಿವರಗಳನ್ನು ನೀಡುವುದಕ್ಕೆ ಮುಂದಾದಳು. ಕಳೆದ ಒಂದು ವಾರದ ಹಿಂದಿನ ದಾಖಲೆ ಪ್ರಕಾರ, ಕಳೆದ 7−8 ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 48 ಸಾವಿರ ಕುಟುಂಬದಲ್ಲಿ 3.6 ಲಕ್ಷ ಜನ ಹೊರಗಿನವರು ಇದ್ದಾರಂತೆ. ಅಂದರೆ ಸರಿಸುಮಾರು 7.6 ರಷ್ಟು. ಇದು ಒಂದು ಜಿಲ್ಲೆಯ ಸಮಸ್ಯೆ ಅಲ್ಲಾ.. ಬಹುತೇಕ ಎಲ್ಲಾ ಕಡೆಗೂ ಇಂಥದ್ದು ನೋಡುವುದಕ್ಕೆ ಸಿಗುತ್ತದೆ. ಅದರಲ್ಲಿಯೂ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಲಸಿಗರ ಹಾವಳಿ ಗಂಭೀರ ಸಮಸ್ಯೆಯಾಗಿ ತಲೆದೋರುತ್ತಿದೆ. ಪರಿಣಾಮ ಸ್ಥಳೀಯರ ಉದ್ಯೋಗ, ಸಂಪನ್ಮೂಲ ಮತ್ತು ಸಂಸ್ಕೃತಿಯ ಮೇಲಿನ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಅಷ್ಟೇ ಅಲ್ಲ, ಕುತೂಹಲದ ವಿಷಯವೆಂದರೆ, ಕರಾವಳಿ ಭಾಗದಲ್ಲಿ ವಲಸೆ ಬಂದವರ ಪೈಕಿ ಶೇ. 59.01 ರಷ್ಟು ಜನರು ಕೇರಳದವರೇ ಎನ್ನುವ ಇನ್ನೊಂದು ಸತ್ಯವನ್ನು ಅವ್ವೆ ಹೇಳಿದಳು.

ʻʻಇದಲ್ಲಾ ಹೆಂಗೆ ತಡುದೇ..? ಮುಂದೆನಾತಿ ಯಾರ್ಬಲಾ..?" ಎಂದು ನಾನು ಕಳವಳ ವ್ಯಕ್ತಪಡಿಸಿದೆ.

ʻʻಮುಂದೆನಾಗುದು... ಇಡಿ ಕರ್ನಾಟಕದಾಗೆ ಬ್ಯಾರೆ ಊರಿಂದೆ ಬಂದವರೇ ದರ್ಬಾರ ಮಾಡ್ತಿರು. ಮುಂದೊಂದ ದಿನೆ ಬೇರೆ ಭಾಷೆ ಮಾತಾಡವರು ಕನ್ನಡಿಗರಿಗೆ ನಿವೆಲ್ಲಾ ಇಲ್ಲಿ ಯಾಕೆ ಬಂದ್ರಿ..? ಅನ್ನು ಕಾಲ ಬರ್ತಿಯಾಬರ್ಲಾ." ಎಂದು ನಾಡಿನ ಭವಿಷ್ಯವನ್ನು ಊಹಿಸಿಕೊಂಡಳು. ಅವ್ವೆಯ ನಿರೀಕ್ಷೆಯನ್ನು ನಾವು ತಳ್ಳಿಹಾಕುವಂತಿಲ್ಲ. ಕಾರಣ ಮುಂದೊಂದು ದಿನ, ಕಾರವಾರದ ಕಡಲತೀರದಲ್ಲಿ ಪರೂರಿನವರೆಲ್ಲಾ ಸೇರಿ ‘ಎಲ್ಲಾ ಕನ್ನಡಿಗರಿಗೂ ಸ್ವಾಗತ’ ಅನ್ನುವ ಕಾಲ ಬಂದ್ರು ಆಶ್ಚರ್ಯವಿಲ್ಲ. ಇನ್ನೊಂದು ಆಯಾಮದಲ್ಲಿ ವಿಚಾರ ಮಾಡುವುದಾದರೆ, ಹೊರಗಿನಿಂದ ಬರುವ ಜನರನ್ನು ತಡೆಯುವುದು ಸಾಧ್ಯವೂ ಇಲ್ಲ ಮತ್ತು ಅದು ಸರಿಯಲ್ಲ. ಆದರೆ ಅದರ ಬದಲಿಗೆ ಸರ್ಕಾರ ಸ್ಥಳೀಯರಿಗೆ ಉದ್ಯೋಗದ ಆದ್ಯತೆ, ಸಂಪನ್ಮೂಲಗಳನ್ನು ನ್ಯಾಯಯುತವಾಗಿ ವಿತರಣೆ ಮಾಡಿದಾಗ ನಮ್ಮ ಭಾಷೆ-ಸಂಸ್ಕೃತಿಯ ರಕ್ಷಣೆಗೆ ನೀಡಿದಂತಾಗುವುದು. ಇಲ್ಲದಿದ್ದರೆ ಮುಂದೊಂದು ದಿನ ಕರಾವಳಿ ಭಾಗದ ಕನ್ನಡಿಗರೇ ತಮ್ಮ ಸ್ವಂತ ನೆಲದಲ್ಲಿ ಅಪ್ರಸ್ತುತರಾಗುವ ಭಯವಿದೆ ಎನ್ನುವ ಮಾತನ್ನು ಅವ್ವೆ ಗಂಭೀರವಾಗಿ ಹೇಳಿದಳು.

ʻʻಅವ್ವೆ ಮತ್ತೊಂದು ಗಮ್ಮತ್ತಿನ ಸುದ್ದಿ ಕೇಳೆ. ರೇಷನ್ ಕಾರ್ಡ್ನಾಗೆ ಹೊಸದಾಗಿ ಹೆಸರು ಸೇರಿಸಬೇಕು ಅಂದ್ರೆ ಮುಂಚೆ ಇದ್ದವರ ಹೆಸರು ತೆಗೆದು ಹಾಕಿದ್ರಕಣಾ.." ಎಂದಾಗ ಅವ್ವೆ ಹಣೆ ಚಚ್ಚಿಕೊಳ್ಳುತ್ತಾ ನಿರಾಶೆ ವ್ಯಕ್ತಪಡಿಸಿದಳು. ಕಾರಣ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳಲ್ಲಿ ಕುಟುಂಬದ ಸ್ತ್ರೀಯರಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಗಣತಿಯಲ್ಲಿ ಹೊಸ ಆಯಾಮಗಳನ್ನು ಅಳವಡಿಸಲು ನಿರ್ಧಾರವಾಗಿದೆಯಂತೆ. ಕುಟುಂಬದ ಮುಖ್ಯಸ್ಥರ ಪಟ್ಟಿಯಲ್ಲಿ ಅಲ್ಲೊಂದು ಇಲ್ಲೊಂದು ವಿಶೇಷ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಬಹುತೇಕ ಗಂಡನ ಹೆಸರು ಮಾತ್ರ ಇರುತ್ತಿತ್ತು. ಆದರೆ ಹೊಸ ಸಮೀಕ್ಷೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ, ಎನ್ನುವ ಗುಲ್ಲು ಜಿಲ್ಲೆಯಾಧ್ಯಂತ ಕೇಳಿಬರುತ್ತಿದೆ. ಹಿಂದೆಲ್ಲಾ ಶೇ. 95 ರಷ್ಟು ಕುಟುಂಬಗಳಲ್ಲಿ ಗಂಡಸರನ್ನು ಕುಟುಂಬದ ಮುಖ್ಯಸ್ಥ ಎನ್ನುತ್ತಿದ್ದರು. ಆದರೆ ಈಗ ಈ ಸಮೀಕ್ಷೆ ಶುರುವಾದ ಮೇಲೆ ಶೇ. 25 ರಷ್ಟು ಕುಟುಂಬಗಳಲ್ಲಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಘೋಷಿಸಿದ್ದಾರಂತೆ.

ಅವ್ವೆಯ ಈ ಮುಗುಮ್ಮ ರೀತಿಯ ಮಾತು ನನಗೆ ಅರ್ಥವಾಗಲಿಲ್ಲ. ʻʻನಿನು ಏನು ಹೇಳ್ತೆ ಅಂಬುದೇ ನಂಗೆ ಅರ್ಥಾ ಆಗ್ಲಾ.." ಎಂದೆ..

ʻʻನೋಡ ಪೋರ್ನೆ.. ಒಂದು ಮಾನೆಲಿ ಐದಾರ ಮಂದಿ ಇವ್ರು ಅಂದಾಗೆ, ಮನೆ ಯಜಮಾನ್ತಿಗೆ ʻತಾಯಿʼ ಅಂಬುದು ಬಿಟ್ಕಂಡೆ ʻಮನೆಯವರುʼ ಅಂತಾ ಬರಿತೇರು. ಅದೇ ಈಗ ಎಲ್ಲಾರ ಕಣ್ಣ ಕೆಂಪಾಗಿದ್ದು" ಎನ್ನುವ ಸ್ಪಷ್ಟನೆ ನೀಡಿದರು. ಹಿಂದೆಲ್ಲಾ ಕುಟುಂಬದ ಮುಖ್ಯಸ್ಥರಾಗಿ ತಂದೆ ಇದ್ದರೆ ತಾಯಿ, ಮಗಳು ಮತ್ತು ಮಗ ಇವರ ಸಂಬಂಧಗಳನ್ನು ಬರೆಯುತ್ತಿದ್ದರು. ಆದರೆ ಈಗ ಹೊಸ ನಿಯಮಗಳಲ್ಲಿ ಗಂಡು/ಹೆಣ್ಣು ಇಬ್ಬರ ಹೆಸರನ್ನೂ ಕುಟುಂಬದ ಮುಖ್ಯಸ್ಥರು ಎಂದು ನಮೂದಿಸಲು ಅವಕಾಶ ನೀಡಿದೆ. ಆದರೆ ಇಲ್ಲಾಗಿರುವ ದೊಡ್ಡ ಅವಾಂತರವೆಂದರೆ, ತಾಯಿಯ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿ, ಆ ಸ್ಥಾನದಲ್ಲಿ 'ಮನೆಯವರು' ಎಂದು ನಮೂದಿಸುವುದರಿಂದ, ಆ ಮಹಿಳೆ ಹೊರತು ಪಡಿಸಿ ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳಿಂದ ವಂಚಿತರಾಗುವ ಗಂಭೀರ ಅಪಾಯವಿದೆ. 'ಮನೆಯ ಮುಖ್ಯಸ್ಥ' ಎನ್ನುವ ಬದಲಿಗೆ 'ಮನೆಯವರು' ಆಗಿದ್ದು. ಈ ಸರಕಾರ ಗಂಡಸರಿಗೆ ಈಗಾಗಲೇ ಸೌಲಭ್ಯ ವಂಚಿತರನ್ನಾಗಿಸಿದೆ. ಜೊತೆಗೆ ಎಲ್ಲಾ ಅಧಿಕಾರದಿಂದಲೂ ದೂರ ಇಡುವ ಒಂದು ಪ್ರಯತ್ನ ನಡೆಯುತ್ತಿದೆಯೇ? ಎನ್ನುವುದು ಈಗ ಜನ ಮದ್ಯ ಒಂದು ರೀತಿಯ ಅನುಮಾನ ಕಾಡುತ್ತಿದೆ ಎಂದಳು.

ಇಂದು ಅವ್ವೆಯ ಮಾತುಗಳನ್ನು ಕೇಳುತ್ತಿದ್ದ ನನಗೆ ಒಂದು ಅರ್ಥವಾಯ್ತು. ಉತ್ತರ ಕನ್ನಡಿಗರ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುವ ಕಾಲ ಹತ್ತಿರವಿದೆ. ಅಭಿವೃದ್ಧಿ ಎನ್ನುತ್ತ ಸ್ವಚ್ಛಂದದ ಬದುಕು ಆತಂಕಕ್ಕೆ ದುಡುವುದು. ಇನ್ನೂ ಉದ್ಯೋಗ ಎಂದು ಊರು ಬಿಟ್ಟವರಿಗೆ ಮುಂದೊಂದು ದಿನ ಊರೇ ಇಲ್ಲದಾಗುವುದು.

(ಮುಂದುವರೆಯುವುದು)

✍️ ಶ್ರೀನಾಥ್ ಜೋಶಿ, ಸಿದ್ದರ. 9060188081

Read More