ಮಹಿಳಾ ಕ್ರಿಕೆಟ್ಗೆ ಆದ್ಯತೆ ಅಗತ್ಯ: ಮಂದಿರಾ ಬೇಡಿಯಿಂದ ವಿಶ್ವಕಪ್ವರೆಗೆ – ಬೆಳಗಬೇಕಿದೆ ಕರುನಾಡ ಹೆಮ್ಮೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇತ್ತೀಚೆಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ವಿಜಯವು ಮಹಿಳೆಯರ ಕ್ರೀಡಾ ಶಕ್ತಿಯ ಪ್ರತಿಬಿಂಬವಾಗಿದ್ದರೂ, ಈ ಯಶಸ್ಸಿನ ಹಿಂದಿನ ದಶಕಗಳ ಕಷ್ಟ, ಅವಮಾನ ಮತ್ತು ಮಂದಿರಾ ಬೇಡಿ ಅವರಂತಹ 'ಅನ್ಸಂಗ್ ವಾರಿಯರ್'ಗಳ ತ್ಯಾಗದ ಕಥೆ ಇದೆ. ಪುರುಷರ ಕ್ರಿಕೆಟ್ಗೆ ದೊರೆಯುವ ವಿರಾಟ್ ಸ್ಥಾನಮಾನವನ್ನು ಮಹಿಳಾ ಕ್ರಿಕೆಟ್ಗೆ ಕಲ್ಪಿಸುವುದು ಇಂದು ಭಾರತಕ್ಕೆ ಅತ್ಯಗತ್ಯವಾಗಿದೆ.
ಪುರುಷ ಮತ್ತು ಮಹಿಳಾ ಕ್ರಿಕೆಟ್ನ ತುಲನಾತ್ಮಕ ಚಿತ್ರಣ ಮತ್ತು ಕಠಿಣ ವಾಸ್ತವ
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಅಪಾರ ಪ್ರಗತಿ ಕಂಡಿದ್ದರೂ, ಮೂಲಸೌಕರ್ಯ, ಪ್ರಚಾರ ಮತ್ತು ಆರ್ಥಿಕ ಬೆಂಬಲದಲ್ಲಿ ಪುರುಷರ ಕ್ರಿಕೆಟ್ಗಿಂತ ಹಿಂದುಳಿದಿರುವುದು ಕಠಿಣ ವಾಸ್ತವ. 2000ರ ದಶಕದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರೆ, ಪುರುಷರ ಕ್ರಿಕೆಟ್ ಪಂದ್ಯಗಳಿಗೆ ದೊಡ್ಡ ಪ್ರಾಯೋಜಕತ್ವ, ಉತ್ತಮ ಮೂಲಸೌಕರ್ಯ ಮತ್ತು ಮಾಧ್ಯಮದ ಸಂಪೂರ್ಣ ಬೆಂಬಲ ಲಭ್ಯವಿರುತ್ತಿತ್ತು. ಆದರೆ, ಅದೇ ಸಮಯದಲ್ಲಿ, ಮಹಿಳಾ ಆಟಗಾರ್ತಿಯರು ತಮ್ಮ ಸ್ವಂತ ಹಣದಿಂದ, ರೈಲುಗಳ ಸಾಮಾನ್ಯ ದರ್ಜೆಯ ಕೋಚ್ಗಳಲ್ಲಿ ಪ್ರಯಾಣಿಸಬೇಕಾಗಿತ್ತು. ಆರ್ಥಿಕ ನೆರವು ಎಷ್ಟು ಕಡಿಮೆಯಿತ್ತು ಎಂದರೆ, ನ್ಯೂಜಿಲೆಂಡ್ನಂತಹ ಪ್ರಬಲ ತಂಡದ ವಿರುದ್ಧ ಸರಣಿ ಗೆದ್ದ ನಂತರವೂ ಪ್ರತಿ ಆಟಗಾರ್ತಿಗೆ ಸಿಕ್ಕಿದ್ದು ಕೇವಲ ₹7,500 ಮಾತ್ರ. ಈ ಪರಿಯ ಧನ ಸಹಾಯದಿಂದ ಕ್ರೀಡೆಯನ್ನು ಪೂರ್ಣಾವಧಿ ವೃತ್ತಿಜೀವನವನ್ನಾಗಿ ಮಾಡಲು ಸಾಧ್ಯವಾಗದ ದುಸ್ಥಿತಿ ಆ ಕಾಲದಲ್ಲಿತ್ತು.
ಕ್ರಿಕೆಟ್ ಎಂದರೆ ಕೇವಲ ಪುರುಷರ ಆಟ ಎಂಬ ಭಾವನೆಯು ವ್ಯಾಪಕವಾಗಿತ್ತು. ಮಹಿಳೆಯರು ಕ್ರಿಕೆಟ್ ಆಡುವುದರಿಂದ ಅಪವಾದಗಳೇ ಹೆಚ್ಚಾಗಿದ್ದವು. ಅವುಗಳಲ್ಲಿ ಮುಖ್ಯವಾದವು ʻಬಿಸಿಲಿನಲ್ಲಿ ಆಡುವುದರಿಂದ ಬಣ್ಣ ಕಪ್ಪಾಗುತ್ತದೆ, ಮದುವೆಯಾಗುವುದಿಲ್ಲ, ಅವರ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ ಇತ್ಯಾದಿ' ಸಾಮಾಜಿಕ ನಿರ್ಬಂಧಗಳಿದ್ದವು. ಪರಿಣಾಮ ಪೋಷಕರು ಹೆಣ್ಣುಮಕ್ಕಳಿಗೆ ಕ್ರಿಕೆಟ್ ಆಡಲು ಅನುಮತಿ ನೀಡಲು ಹಿಂಜರಿಯುತ್ತಿದ್ದರು. ಇನ್ನೊಂದೆಡೆ, ಮಾಧ್ಯಮ ಮತ್ತು ಪ್ರಸಾರದ ವೇದಿಕೆಗಳಲ್ಲಿಯೂ ತಾರತಮ್ಯವಿತ್ತು. ಬಹುತೇಕ ನಿವೃತ್ತ ಪುರುಷ ಕ್ರಿಕೆಟಿಗರು ಪ್ಯಾನೆಲ್ಗಳಲ್ಲಿ ಸಿಗುವ ಗೌರವ ಮತ್ತು ಅಧಿಕಾರವನ್ನು ಅನುಭವಿಸುತ್ತಿದ್ದರು. ಅದೇ ʻಮಂದಿರಾ ಬೇಡಿʼಯಂತಹ ನಿರೂಪಕಿಯರು ಮಾಜಿ ಆಟಗಾರರಿಂದ ನಿರ್ಲಕ್ಷ್ಯ, ಪ್ರಶ್ನೆಗಳಿಗೆ ಉತ್ತರವಿಲ್ಲದಿರುವುದು ಮತ್ತು 'ಡಮ್ಮಿ' ಎಂದು ಅವಮಾನಕ್ಕೆ ಒಳಗಾಗಬೇಕಿತ್ತು. ಇಂದಿನ ಸ್ಥಿತಿಯನ್ನು ಗಮನಿಸಿದರೆ, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪುರುಷರ ಲೀಗ್ಗಳಿಂದ ಸಾವಿರಾರು ಕೋಟಿ ರೂ. ಆದಾಯ ಹರಿದುಬರುತ್ತಿದೆ. ಮಹಿಳೆಯರ WPL ಪ್ರಾರಂಭವಾಗಿದ್ದರೂ, ಆರ್ಥಿಕ ಮೌಲ್ಯ ಮತ್ತು ಪ್ರಚಾರದಲ್ಲಿ ಪುರುಷರ ಲೀಗ್ಗಿಂತ ಇನ್ನೂ ಹಿಂದುಳಿದಿರುವುದು ಸ್ಪಷ್ಟ.
ನಮ್ಮ ಹೆಮ್ಮೆಯ ಕನ್ನಡತಿಯರ ಶ್ರಮ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ಮಹೋನ್ನತ ಪಯಣದಲ್ಲಿ ಕರುನಾಡಿನ ಹೆಣ್ಣುಮಕ್ಕಳ ಪಾತ್ರ ನಿರ್ಣಾಯಕ ಮತ್ತು ಅವಿಸ್ಮರಣೀಯ. ನಮ್ಮ ಕನ್ನಡ ನೆಲದ ಹಲವಾರು ಆಟಗಾರ್ತಿಯರು, ಆರ್ಥಿಕ ಸಂಕಷ್ಟಗಳ ನಡುವೆಯೂ ರಾಷ್ಟ್ರೀಯ ತಂಡವನ್ನು ಬಲಪಡಿಸಿದ್ದಾರೆ.
ವೇದಾ ಕೃಷ್ಣಮೂರ್ತಿ: ಕಡೂರು ಮೂಲದ ವೇದಾ ಕೃಷ್ಣಮೂರ್ತಿ ಅವರು ಭಾರತೀಯ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿ ಮಿಂಚಿದ್ದಾರೆ. ವೇದಾ ಅವರಂತಹ ಆಟಗಾರ್ತಿಯರು ಪುರುಷರ ಕ್ರಿಕೆಟ್ನಂತೆ ಆದ್ಯತೆ ಇಲ್ಲದಿದ್ದಾಗಲೂ, ಬೆಂಗಳೂರಿನಲ್ಲಿ ಕಠಿಣ ತರಬೇತಿ ಪಡೆದು ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದರು.
ವನಿತಾ ವಿ.ಆರ್.: ಬೆಂಗಳೂರಿನ ವನಿತಾ ವಿ.ಆರ್. ಅವರು ಅನೇಕ ವರ್ಷಗಳ ಕಾಲ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಅವರು ಸಹ ಆರ್ಥಿಕ ಅಸ್ಥಿರತೆ ನಡುವೆ ಅವರು ಆಟವನ್ನು ಬಿಡದೆ, ತಮ್ಮ ಪರಿಶ್ರಮದಿಂದ ಮುನ್ನಡೆದರು.
ರಾಜೇಶ್ವರಿ ಗಾಯಕ್ವಾಡ್: ವಿಜಯಪುರ ಜಿಲ್ಲೆಯಂತಹ ಸಣ್ಣ ಪ್ರದೇಶದಿಂದ ಬಂದಿರುವ ರಾಜೇಶ್ವರಿ ಗಾಯಕ್ವಾಡ್ ಅವರು ಭಾರತೀಯ ಸ್ಪಿನ್ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಬಯಲು ಸೀಮೆಯ ಹಿನ್ನೆಲೆಯ ಆಟಗಾರ್ತಿ ವಿಶ್ವಕಪ್ನಂತಹ ಟೂರ್ನಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಕರುನಾಡಿಗೆ ದೊಡ್ಡ ಹೆಮ್ಮೆ.
ಈ ಆಟಗಾರ್ತಿಯರು ಸವಾಲುಗಳನ್ನು ಎದುರಿಸಿ ಯಶಸ್ವಿಯಾದಂತೆ, ರಾಜ್ಯದ ಅನೇಕ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ. ಆದರೆ, ಇವರ ಯಶಸ್ಸನ್ನು ರಾಷ್ಟ್ರೀಯ ಹೆಮ್ಮೆಯಾಗಿ ಮುಂದುವರಿಸಲು, ಇವರ ತವರು ನೆಲವಾದ ಕರ್ನಾಟಕದಲ್ಲಿ ಇನ್ನಷ್ಟು ಕ್ರೀಡಾ ಉತ್ತೇಜನದ ಅಗತ್ಯವಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.
ಆಶಾದೀಪವಾದ ಮಂದಿರಾ ಬೇಡಿಯ ಹೋರಾಟ ಮತ್ತು ತ್ಯಾಗ
ಮಂದಿರಾ ಬೇಡಿ ಅವರು ಕೇವಲ ಟಿವಿ ಪರದೆಗೆ ಸೀಮಿತರಾಗದೆ, ಮಹಿಳಾ ಕ್ರಿಕೆಟ್ನ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದರು. 2004-05ರ ಅವಧಿಯಲ್ಲಿ ಮಹಿಳಾ ಕ್ರಿಕೆಟ್ಗೆ ಆರ್ಥಿಕವಾಗಿ ಮತ್ತು ಪ್ರಾಯೋಜಕತ್ವದ ವಿಚಾರದಲ್ಲಿ ಸಂಪೂರ್ಣ ನೆರವು ಇಲ್ಲದಿದ್ದಾಗ, ಮಂದಿರಾ ತಮ್ಮ ವೈಯಕ್ತಿಕ ಪ್ರಭಾವವನ್ನು ಬಳಸಿದರು. ಅಸ್ಮಿ ಜ್ಯುವೆಲ್ಲರಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅವರು, ತಮ್ಮ ಸಂಪೂರ್ಣ ಎಂಡಾರ್ಸ್ಮೆಂಟ್ ಶುಲ್ಕವನ್ನು WCAI (ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾ) ಗೆ ದಾನ ಮಾಡಿದರು. ಅತ್ಯಂತ ಗಮನಾರ್ಹವೆಂದರೆ, ಈ ಹಣವನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿದ್ದ ಭಾರತೀಯ ತಂಡಕ್ಕೆ ವಿಮಾನ ಟಿಕೆಟ್ಗಳನ್ನು ಖರೀದಿಸಲು ಬಳಸಲಾಯಿತು. ದೇಶವನ್ನು ಪ್ರತಿನಿಧಿಸುವ ತಂಡಕ್ಕೆ ವಿಮಾನ ಟಿಕೆಟ್ ಖರೀದಿಸಲು ಒಬ್ಬ ನಟಿಯ ಖಾಸಗಿ ಗಳಿಕೆಯನ್ನು ಬಳಸಬೇಕಾದ ಸ್ಥಿತಿ ಆ ಕಾಲದಲ್ಲಿತ್ತು. ಮಂದಿರಾ ಅವರ ಈ ತ್ಯಾಗದ ಹೆಜ್ಜೆಯ ನಂತರವೇ ಅಸ್ಮಿಯಂತಹ ಕಂಪನಿಗಳು ತಂಡಕ್ಕೆ ಪ್ರಾಯೋಜಕರಾದವು. ಮುಂದೆ ಸಹಾರಾದಂತಹ ದೊಡ್ಡ ಕಾರ್ಪೊರೇಟ್ಗಳು ಆಸಕ್ತಿ ತೋರಿಸಲು ಪ್ರಾರಂಭಿಸಿದವು. ಮಂದಿರಾ ಅವರು ಹಾಕಿದ ಈ ಅಡಿಪಾಯದ ಮೇಲೆ 2006 ರಲ್ಲಿ ಬಿಸಿಸಿಐ ಮಹಿಳಾ ಕ್ರಿಕೆಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸೌಲಭ್ಯಗಳನ್ನು ಸುಧಾರಿಸಲು ಮುಂದಾಗಿದ್ದು, ಯಾರೂ ಮರೆಯುವಂತಿಲ್ಲ.
ಮಹಿಳಾ ಕ್ರಿಕೆಟ್ಗೆ ಆದ್ಯತೆಯ ಅವಶ್ಯಕತೆಯಿದೆ
ಭಾರತದ ಮಹಿಳಾ ಕ್ರಿಕೆಟ್ ತಂಡವು ಇಂದು ವಿಶ್ವದರ್ಜೆಯ ಪ್ರದರ್ಶನ ನೀಡುವ ಮೂಲಕ, ದಶಕಗಳ ಹಿಂದಿನ ಅವಮಾನ ಮತ್ತು ಸಂಕಷ್ಟಗಳನ್ನು ಮೆಟ್ಟಿ ನಿಂತಿದೆ. ಇದು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿ ಬೆಳೆದಿದೆ. ಈ ಹೆಮ್ಮೆಯನ್ನು ಮುಂದುವರಿಸಲು ಮತ್ತು ಮಹಿಳಾ ಕ್ರಿಕೆಟ್ಗೆ ಪುರುಷರ ಕ್ರಿಕೆಟ್ಗೆ ಸಮಾನ ಸ್ಥಾನಮಾನ ನೀಡಲು ತುರ್ತಾಗಿ ಕೆಲವು ಮುಖ್ಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಕ್ರಿಡಾ ತಜ್ಞರ ಅಭಿಪ್ರಾಯವಾಗಿದೆ.
ವೃತ್ತಿಪರ ಸಮಾನತೆ ಮತ್ತು ಮೂಲಸೌಕರ್ಯ ಹೂಡಿಕೆ: ಬಿಸಿಸಿಐ ಈಗಾಗಲೇ ಪಂದ್ಯದ ಶುಲ್ಕದಲ್ಲಿ (Match Fees) ಸಮಾನತೆಯನ್ನು ಘೋಷಿಸಿದ್ದರೂ, ವಾರ್ಷಿಕ ಒಪ್ಪಂದದ ಮೌಲ್ಯ (Annual Contracts), ಬ್ರ್ಯಾಂಡ್ ಎಂಡಾರ್ಸ್ಮೆಂಟ್ ಮತ್ತು WPL ವೇತನಗಳಲ್ಲಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಬೇಕು. ಪುರುಷರ ತಂಡಕ್ಕೆ ಸಿಗುವಂತಹ ಅತ್ಯುತ್ತಮ ತರಬೇತುದಾರರು, ಫಿಸಿಯೋಗಳು, ವಿಶ್ಲೇಷಕರು ಮತ್ತು ಉತ್ತಮ ಗುಣಮಟ್ಟದ ತರಬೇತಿ ಮೈದಾನಗಳನ್ನು ಆಟಗಾರ್ತಿಯರಿಗೆ ಸುಲಭವಾಗಿ ಲಭ್ಯವಾಗಿಸಬೇಕು.
ಪ್ರಚಾರ ಮತ್ತು ಪ್ರಸಾರ ನೀತಿ: ಕೇವಲ ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಿಗಷ್ಟೇ ಸೀಮಿತವಾಗದೆ, ದ್ವಿಪಕ್ಷೀಯ ಸರಣಿಗಳು (Bilateral Series) ಮತ್ತು ದೇಶೀಯ ಪಂದ್ಯಗಳಿಗೂ ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಮತ್ತು ಪ್ರಸಾರವನ್ನು ಕಡ್ಡಾಯಗೊಳಿಸಬೇಕು. ಇದು ಯುವ ಆಟಗಾರ್ತಿಯರಿಗೆ ಪ್ರೇರಣೆ ನೀಡುತ್ತದೆ ಮತ್ತು ಹೊಸ ಪ್ರಾಯೋಜಕರನ್ನು ಆಕರ್ಷಿಸುತ್ತದೆ.
ಸಾಮಾಜಿಕ ಮನಸ್ಥಿತಿ ಬದಲಾವಣೆ: ಕ್ರೀಡಾಂಗಣಗಳಲ್ಲಿ, ಮಾಧ್ಯಮಗಳಲ್ಲಿ, ಮತ್ತು ಶಾಲಾ-ಕಾಲೇಜುಗಳಲ್ಲಿ ಮಹಿಳಾ ಕ್ರಿಕೆಟ್ ಅನ್ನು ಸಕ್ರಿಯವಾಗಿ ಪ್ರೋತ್ಸಾಹಿಸಬೇಕು. ಕ್ರಿಕೆಟ್ ವೃತ್ತಿಜೀವನವು ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ನೀಡುತ್ತದೆ ಎಂಬ ಸಂದೇಶವನ್ನು ವ್ಯಾಪಕವಾಗಿ ಹರಡಬೇಕು.
ಮಹಿಳಾ ಕ್ರಿಕೆಟ್ ಅನ್ನು ಕೇವಲ ಒಂದು ಕ್ರೀಡಾ ವಿಭಾಗವಾಗಿ ನೋಡದೆ, ರಾಷ್ಟ್ರೀಯ ಹೆಮ್ಮೆ, ಲಿಂಗ ಸಮಾನತೆ ಮತ್ತು ಸ್ತ್ರೀ ಶಕ್ತಿಯ ಸಬಲೀಕರಣದ ಸಾಧನವಾಗಿ ಸ್ವೀಕರಿಸಿದಾಗ ಮಾತ್ರ, ಭಾರತವು ಕ್ರೀಡಾಲೋಕದಲ್ಲಿ ಸಮಗ್ರ ಪ್ರಗತಿ ಸಾಧಿಸಲು ಸಾಧ್ಯ. ಮಂದಿರಾ ಬೇಡಿಯವರ ತ್ಯಾಗದ ಆಧಾರದ ಮೇಲೆ ನಿಂತಿರುವ ಈ ಯಶಸ್ಸಿನ ಗೋಪುರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇಂದು ನಮ್ಮೆಲ್ಲರ ಮೇಲಿದೆ.
ಶ್ರೀನಾಥ್ ಜೋಶಿ, ಸಿದ್ದರ 9060188081
