ಭಾಗ 2 ವಸತಿ ಪದವಿಪೂರ್ವ ಕಾಲೇಜುಗಳ ಹಾಸ್ಟೆಲ್ ವ್ಯವಸ್ಥೆ: ಯಾರೂ ಕೇಳದ ಮಕ್ಕಳ ಮೌನ ನೋವು
ಡಾ. ರವಿಕಿರಣ ಪಟವರ್ಧನ
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕರ್ನಾಟಕದ ಸಾವಿರಾರು ಹೆತ್ತವರು ತಮ್ಮ ಹದಿನಾಲ್ಕು-ಹದಿನೈದು ವರ್ಷದ ಮಕ್ಕಳನ್ನು ದೂರದ ವಸತಿ ಪದವಿಪೂರ್ವ ಕಾಲೇಜುಗಳ ಮುಂದೆ ಬಿಟ್ಟು ಬರುತ್ತಾರೆ. ಕಣ್ಣೀರು ಒರೆಸಿಕೊಳ್ಳುತ್ತಾ ಹಿಂದಿರುಗುವ ಆ ತಾಯಂದಿರ ಮನಸ್ಸಿನಲ್ಲಿ ಒಂದೇ ಕನಸು — "ನನ್ನ ಮಗ, ನನ್ನ ಮಗಳು ಡಾಕ್ಟರ್ ಆಗಲಿ, ಇಂಜಿನಿಯರ್ ಆಗಲಿ." ಆದರೆ ಆ ಕಾಲೇಜಿನ ಗೇಟು ಮುಚ್ಚಿದ ನಂತರ ಒಳಗೆ ನಿಜವಾಗಿ ಏನಾಗುತ್ತದೆ ಎಂದು ಆ ಹೆತ್ತವರಿಗೆ ಗೊತ್ತಿಲ್ಲ. ಸರ್ಕಾರಕ್ಕೂ ಗೊತ್ತಿಲ್ಲ. ಅಥವಾ ಗೊತ್ತಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ — ಇದು ಇಂದಿನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಅತ್ಯಂತ ನೋವಿನ ವಾಸ್ತವ.
ಹೆಚ್ಚಿನ ದೂರುಗಳು ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
"ರೆಸಿಡೆನ್ಷಿಯಲ್" ಎಂಬ ಹೊಳೆಯುವ ಬೋರ್ಡಿನ ಹಿಂದಿನ ಸತ್ಯ
ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ "ರೆಸಿಡೆನ್ಷಿಯಲ್ ಪಿಯು ಕಾಲೇಜ್" ಎಂಬ ಫಲಕ ಹಾಕಿಕೊಂಡ ಸಂಸ್ಥೆಗಳು ತಾಮ್ರದ ಕೊಳಲು ಊದುತ್ತ ನಿಂತಿವೆ. "NEET ರ್ಯಾಂಕರ್ಸ್", "JEE ಟಾಪರ್ಸ್", "100% ರಿಸಲ್ಟ್" — ಇಂತಹ ಆಕರ್ಷಕ ಜಾಹೀರಾತುಗಳು ಹೆತ್ತವರ ಕನಸನ್ನು ಪ್ರಚೋದಿಸುತ್ತವೆ. ಆದರೆ ಈ ಹೊಳೆಯುವ ಫಲಕಗಳ ಹಿಂದೆ ಅಡಗಿರುವ ವಾಸ್ತವ ಭಿನ್ನವಾಗಿರಬಹುದು.
ಸರ್ಕಾರಿ ದಾಖಲೆಗಳ ಪ್ರಕಾರ ಕಾಲೇಜಿಗೆ ಅನುಮತಿ ಇದೆ. ಆದರೆ ಹಾಸ್ಟೆಲ್? ಅದಕ್ಕೆ ಯಾರ ಅನುಮತಿ? ಯಾವ ನಿಯಮ? ಯಾರ ನಿಯಂತ್ರಣ? — ಈ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗಿಲ್ಲ.
ಕಾನೂನಿನ ಚೌಕಟ್ಟಿನ ಬಿರುಕು ವಸತಿ ಪದವಿಪೂರ್ವ ಕಾಲೇಜುಗಳ ಹಾಸ್ಟೆಲ್ ವ್ಯವಸ್ಥೆ ಒಂದು ವಿಚಿತ್ರ ಕಾನೂನು ಶೂನ್ಯ ಪ್ರದೇಶದಲ್ಲಿ ಅಡಗಿ ಕುಳಿತಿದೆ. ಹೆಚ್ಚಿನ ಸಂಸ್ಥೆಗಳು ಹಾಸ್ಟೆಲ್ ಅನ್ನು ಕಾಲೇಜಿನ ಭಾಗವಾಗಿ ತೋರಿಸದೆ, ಒಂದು ಪ್ರತ್ಯೇಕ ಟ್ರಸ್ಟ್ ಅಥವಾ ಖಾಸಗಿ ಸಂಸ್ಥೆಯ ಅಡಿಯಲ್ಲಿ ನಡೆಸುತ್ತಾರೆ. ಉದ್ದೇಶ ಒಂದೇ — ಶಿಕ್ಷಣ ಇಲಾಖೆಯ ನಿಯಂತ್ರಣದಿಂದ ತಪ್ಪಿಸಿಕೊಳ್ಳುವುದು.
ಪರಿಣಾಮ ಏನಾಯಿತು? ಶಿಕ್ಷಣ ಇಲಾಖೆ ಹೇಳುತ್ತದೆ: "ಹಾಸ್ಟೆಲ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ." ಸ್ಥಳೀಯ ಸಂಸ್ಥೆ ಹೇಳುತ್ತದೆ: "ಕಟ್ಟಡಕ್ಕೆ ಅನುಮತಿ ಕೊಟ್ಟಿದ್ದೇವೆ, ಮತ್ತೇನು ಗೊತ್ತಿಲ್ಲ."
ಅಗ್ನಿಶಾಮಕ ಇಲಾಖೆ ಹೇಳುತ್ತದೆ: "ದೂರು ಬಂದಾಗ ಹೋಗುತ್ತೇವೆ."
ಹೀಗೆ ಎಲ್ಲರೂ ತಮ್ಮ ತಮ್ಮ ಇಲಾಖೆಯ ಕಡತ ಮುಚ್ಚಿ ಕುಳಿತಿರುತ್ತಾರೆ. ಮಧ್ಯದಲ್ಲಿ ಅನಾಥರಾಗುವವರು ಯಾರು? — ಆ ಹದಿನಾರು ವರ್ಷದ ಮಕ್ಕಳು.
ಕೆಲವು ವಸತಿ ಕಾಲೇಜುಗಳಲ್ಲಿ ಕಂಡುಬರುವ ಸ್ಥಿತಿ ಆಘಾತಕಾರಿಯಾಗಿದೆ. ಹೆಚ್ಚು ಮಕ್ಕಳನ್ನು ತುಂಬಿಸಲಾಗಿರುತ್ತದೆ. ಶೌಚಾಲಯ, ಸ್ನಾನಗೃಹಗಳ ಸ್ಥಿತಿ ದಯನೀಯ. ಆಹಾರ ಕಳಪೆ ,ಪ್ರಮಾಣ ಕಡಿಮೆ. ಅನಾರೋಗ್ಯ ಪಟ್ಟ ವಿದ್ಯಾರ್ಥಿಯನ್ನು ಸರಿಯಾದ ವೈದ್ಯಕೀಯ ಸೇವೆ ಇಲ್ಲದೆ ಎಷ್ಟೋ ಬಾರಿ ಕಡೆಗಣಿಸಲಾಗುತ್ತದೆ.
ಅಗ್ನಿ ಸುರಕ್ಷತೆಯ ವಿಷಯ ಅತ್ಯಂತ ಗಂಭೀರ. ದೇಶದ ಅನೇಕ ರಾಜ್ಯಗಳಲ್ಲಿ ವಸತಿ ಶಾಲೆ-ಕಾಲೇಜುಗಳಲ್ಲಿ ಬೆಂಕಿ ಅಪಘಾತಗಳು ಸಂಭವಿಸಿ ಮಕ್ಕಳು ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಅಂತಹ ದುರಂತ ಆಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಮಾನಸಿಕ ಆರೋಗ್ಯ: ಕಾಣದ ಗಾಯ ಈ ಎಲ್ಲ ಸಮಸ್ಯೆಗಳಿಗಿಂತ ಹೆಚ್ಚು ಆತಂಕಕಾರಿ ಸಂಗತಿ ಎಂದರೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ. ಹದಿನಾಲ್ಕು-ಹದಿನೈದು ವರ್ಷದ ಮಗು ತಾಯಿಯ ಕಣ್ಣಿನಿಂದ ದೂರ, ಬಂಧುಗಳ ಪ್ರೀತಿಯಿಂದ ದೂರ, ಹನ್ನೆರಡರಿಂದ ಹದಿನಾಲ್ಕು ಗಂಟೆ ಓದಿನ ಒತ್ತಡದಲ್ಲಿ ಹಿಂಡಲ್ಪಡುತ್ತದೆ. ಅಳಲೂ ಜಾಗ ಇಲ್ಲ. ಮಾತಾಡಲು ಮನಸ್ಸಿನ ಗೆಳೆಯ ಇಲ್ಲ. ತೋರಿಕೆಯ ಕೌನ್ಸೆಲರ್ . ಫೋನ್ ಮಾಡಲು ಸ್ವಾತಂತ್ರ್ಯ ಇಲ್ಲ.
ಹೀಗಿರುವಾಗ ವಿದ್ಯಾರ್ಥಿಗಳಲ್ಲಿ ಒತ್ತಡ, ಖಿನ್ನತೆ, ಆತಂಕ ಹೆಚ್ಚಾಗುವುದು ಆಶ್ಚರ್ಯವಲ್ಲ. ಆದರೆ ಇದನ್ನು ಗುರುತಿಸಲು, ಅರ್ಥಮಾಡಿಕೊಳ್ಳಲು, ನೆರವಾಗಲು ಯಾವ ವ್ಯವಸ್ಥೆಯೂ ಇಲ್ಲ. "ಫಲಿತಾಂಶ ಬರಲಿ, ಮತ್ತೆ ನೋಡೋಣ" — ಇದೇ ಅನೇಕ ಸಂಸ್ಥೆಗಳ ಧೋರಣೆ. ಪಾಲಕರ ಜೇಬಿಗೆ ಕೈ: ಶುಲ್ಕ ದರೋಡೆ ಸರ್ಕಾರಿ ನಿಯಂತ್ರಣ ಇಲ್ಲದಿರುವುದು ಕೇವಲ ಸುರಕ್ಷತೆಯ ಸಮಸ್ಯೆ ಮಾತ್ರ ಅಲ್ಲ — ಅದು ಪಾಲಕರ ಆರ್ಥಿಕ ಶೋಷಣೆಗೂ ದಾರಿ ಮಾಡಿಕೊಟ್ಟಿದೆ. ಟ್ಯೂಷನ್ ಫೀ, ಹಾಸ್ಟೆಲ್ ಫೀ, ಮೆಸ್ ಫೀ, ಸ್ಟಡಿ ಮೆಟೀರಿಯಲ್ ಫೀ, ಲ್ಯಾಬ್ ಫೀ , ಎಲ್ಲಾ ನಾವು ಕೋಡುತ್ತೇವೆ ಎಂದು ಹೇಳಿ ಝೆರಾಕ್ಸ್ ಪಡೆಯಿರಿ ಅಂತ ಹಣ ಕೇಳುವುದು ಬೇರೆ,ಅಲ್ಲಿರುವ ಎಟಿಎಂ ಹಾಳೇ ಇರುವುದು— ಇವುಗಳ ಒಟ್ಟು ಮೊತ್ತ ವರ್ಷಕ್ಕೆ ಮೂರ ರಿಂದ ಆರು ಲಕ್ಷ ರೂಪಾಯಿ ತಲುಪಿದ ಉದಾಹರಣೆಗಳಿವೆ. ಆದರೆ ಈ ಶುಲ್ಕ ಎಷ್ಟು ಸಮರ್ಥನೀಯ ಎಂದು ಪ್ರಶ್ನಿಸಲು ಯಾವ ಸರ್ಕಾರಿ ವ್ಯವಸ್ಥೆಯೂ ಇಲ್ಲ.
ಸಾಲ ಮಾಡಿ, ಜಮೀನು ಒತ್ತೆ ಇಟ್ಟು ಮಕ್ಕಳನ್ನು ಓದಿಸಲು ಮುಂದಾಗುವ ರೈತ ಕುಟುಂಬಗಳಿಗೆ ಈ ಶುಲ್ಕ ದೊಡ್ಡ ಹೊರೆ. ಕೊನೆಯ ಪಕ್ಷ ಆ ಹಣಕ್ಕೆ ತಕ್ಕ ಸೌಲಭ್ಯ ಮಕ್ಕಳಿಗೆ ಸಿಗುತ್ತಿದೆ ಎಂಬ ಖಚಿತತೆಯಾದರೂ ಇರಬೇಕಲ್ಲ? ಅದೂ ಇಲ್ಲ.
ಸರ್ಕಾರಕ್ಕೆ ಒಂದು ನೇರ ಪ್ರಶ್ನೆ ಈ ವ್ಯವಸ್ಥೆ ಹೀಗೆ ನಡೆಯಲು ಸರ್ಕಾರ ಹೇಗೆ ಅನುಮತಿ ನೀಡುತ್ತಿದೆ? ಸ್ಪಷ್ಟ ಕಾರಣಗಳಿವೆ: ಮೊದಲನೆಯದು — ಈ ಕ್ಷೇತ್ರದಲ್ಲಿ ನಿಯಂತ್ರಣ ತರಲು ರಾಜಕೀಯ ಇಚ್ಛಾಶಕ್ತಿ ಇಲ್ಲ. ಏಕೆಂದರೆ ಅನೇಕ ಈ ಸಂಸ್ಥೆಗಳ ಮಾಲಕರು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿಗಳಾಗಿದ್ದಾರೆ.
ಎರಡನೆಯದು — ಕೆಲವು ಶಾಲೆ-ಕಾಲೇಜುಗಳ ಗುಣಮಟ್ಟ ಕಡಿಮೆಯಾದ ಕಾರಣ ಹೆತ್ತವರಿಗೆ ಖಾಸಗಿ ವಸತಿ ಕಾಲೇಜುಗಳ ಮೇಲೆ ಅವಲಂಬನೆ ಹೆಚ್ಚಾಗಿದೆ.
ಮೂರನೆಯದು — ಶಿಕ್ಷಣ ಮತ್ತು ವಸತಿ ಎಂಬ ಎರಡು ಕ್ಷೇತ್ರಗಳ ನಡುವೆ ಬಿದ್ದ ಈ ಸಂಸ್ಥೆಗಳನ್ನು ಯಾವ ಒಂದು ಇಲಾಖೆಯೂ ತನ್ನ ಸಂಪೂರ್ಣ ಜವಾಬ್ದಾರಿ ಎಂದು ಸ್ವೀಕರಿಸಿಲ್ಲ.
ತಕ್ಷಣ ಆಗಬೇಕಾದ್ದು ಏನು?
ಇದು ಕೇವಲ ಸಮಸ್ಯೆ ಹೇಳಿ ಮುಗಿಸುವ ಲೇಖನ ಅಲ್ಲ. ಸ್ಪಷ್ಟ ಪರಿಹಾರಗಳು ಕೂಡ ಇವೆ: ೧. ಸಮಗ್ರ ನಿಯಮಾವಳಿ: ವಸತಿ ಪದವಿಪೂರ್ವ ಕಾಲೇಜುಗಳ ಹಾಸ್ಟೆಲ್ ವ್ಯವಸ್ಥೆಗಾಗಿ ಪ್ರತ್ಯೇಕ ಮತ್ತು ಸಮಗ್ರ ನಿಯಮಾವಳಿ ರೂಪಿಸಬೇಕು. ಅದರಲ್ಲಿ ಕೋಣೆಯ ಗಾತ್ರ, ವಿದ್ಯಾರ್ಥಿ ಸಂಖ್ಯೆ, ಆಹಾರದ ಗುಣಮಟ್ಟ, ವೈದ್ಯಕೀಯ ಸೌಲಭ್ಯ, ಅಗ್ನಿ ಸುರಕ್ಷತೆ ಎಲ್ಲ ಸೇರಿರಬೇಕು.
*೨. ಒಂದೇ ನೋಡಲ್ ಇಲಾಖೆ: ಹಾಸ್ಟೆಲ್ ವ್ಯವಸ್ಥೆಯ ನಿಯಂತ್ರಣಕ್ಕೆ ಒಂದೇ ಇಲಾಖೆ ಜವಾಬ್ದಾರಿ ವಹಿಸಬೇಕು. "ನಮ್ಮ ಕೆಲಸ ಅಲ್ಲ" ಎಂಬ ಜವಾಬ್ದಾರಿ ವರ್ಗಾಯಿಸುವ ಸಂಸ್ಕೃತಿ ನಿಲ್ಲಬೇಕು.
೩. ನಿಯಮಿತ ತಪಾಸಣೆ: ವರ್ಷಕ್ಕೆ ಕನಿಷ್ಠ ಆರು ಬಾರಿ ಪೂರ್ವ ಸೂಚನೆ ಇಲ್ಲದ ಸರ್ಪ್ರೈಸ್ ತಪಾಸಣೆ ನಡೆಯಬೇಕು.
೪. ಶುಲ್ಕ ನಿಯಂತ್ರಣ: ಖಾಸಗಿ ಕಾಲೇಜುಗಳ ಶುಲ್ಕ ನಿಯಂತ್ರಣ ಸಮಿತಿಯ ವ್ಯಾಪ್ತಿ ಹಾಸ್ಟೆಲ್ ಶುಲ್ಕಕ್ಕೂ ವಿಸ್ತರಿಸಬೇಕು.
೫. ಕಡ್ಡಾಯ ಕೌನ್ಸೆಲಿಂಗ್: ಪ್ರತಿ ವಸತಿ ಕಾಲೇಜಿನಲ್ಲಿ ತರಬೇತಿ ಪಡೆದ ಕೌನ್ಸೆಲರ್ ಕಡ್ಡಾಯ ಇರಬೇಕು.ತೋರಿಕೆಯ ಕೌನ್ಸೆಲಿಂಗ್ ಬೇಡ.
೬. ಹೆತ್ತವರ ಸಮಿತಿ: ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಹೆತ್ತವರಿಗೆ ನಿಯಮಿತ ವರದಿ ಮತ್ತು ಭೇಟಿ ಅವಕಾಶ ನೀಡಬೇಕು.ಈಗ ಇರುತ್ತದೆ ಕಾಗದದ ಮೇಲೆ ಮಾತ್ರ,ಹಲ್ಲಿಲ್ಲದ ಹಾವಿನಂತೆ
: ಮಕ್ಕಳು ಉತ್ಪನ್ನ ಅಲ್ಲ
ಶಿಕ್ಷಣ ಕ್ಷೇತ್ರ ವ್ಯಾಪಾರ ಆಗಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳು ಕೇವಲ "ರ್ಯಾಂಕ್ ಉತ್ಪಾದಿಸುವ ಯಂತ್ರ"ಗಳು ಆಗಿಬಿಡುವ ಅಪಾಯ ಇದೆ. ಹೆತ್ತವರ ಕನಸನ್ನು, ಮಕ್ಕಳ ಬಾಲ್ಯವನ್ನು, ಅವರ ಸ್ವಾಸ್ಥ್ಯವನ್ನು ವ್ಯಾಪಾರದ ಸಾಧನ ಮಾಡಿಕೊಳ್ಳಲು ಅನುಮತಿ ನೀಡುವ ಸ್ಥಿತಿ ಸರ್ಕಾರ ಹೇಗೆ ಒಪ್ಪಿಕೊಳ್ಳಬಲ್ಲದು?
ವಸತಿ ಪದವಿಪೂರ್ವ ಕಾಲೇಜಿನ ಗೇಟ್ ಒಳಗೆ ಹೆಜ್ಜೆ ಇಡುವ ಆ ಮಗು ರಾಜ್ಯದ ನಾಗರಿಕ. ಆ ನಾಗರಿಕನ ಸುರಕ್ಷತೆ ಮತ್ತು ಘನತೆ ಕಾಪಾಡುವ ಸಂವಿಧಾನಿಕ ಜವಾಬ್ದಾರಿ ಸರ್ಕಾರದ್ದು. ಆ ಜವಾಬ್ದಾರಿಯನ್ನು ಇನ್ನಾದರೂ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
